ಕನ್ನಡಪ್ರಭ ವಾರ್ತೆ, ತುಮಕೂರುಭವಿಷ್ಯದ ಬಗ್ಗೆ ಹತಾಶೆ ತಳೆದು ಸಾಕಷ್ಟು ಮಂದಿ ಯುವಕರು ಆತ್ಮಹತ್ಯೆಗೆ ಶರಣಾಗುತ್ತಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಯುವಕರಿಗೆ ಭವಿಷ್ಯ ಉಜ್ವಲವಾಗಿದೆ. ಯಾವುದೇ ಕಾರಣಕ್ಕೂ ಹತಾಶೆ ಮನೋಭಾವನೆ ತಾಳುವುದು ಸರಿಯಲ್ಲ ಎಂದು ಖ್ಯಾತ ಮನೋಚಿಕಿತ್ಸಕ ಡಾ. ಸಿ. ಆರ್. ಚಂದ್ರಶೇಖರ್ ತಿಳಿಸಿದರು.ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಪ್ರೇರಣಾ ಉಪನ್ಯಾಸ ಕಾರ್ಯಕ್ರಮದಲ್ಲಿ ಯುವಜನತೆ ಮತ್ತು ಮಾನಸಿಕ ಆರೋಗ್ಯ ಕುರಿತು ಮಾತನಾಡಿದ ಅವರು, ಯುವಕರು ಆತ್ಮಹತ್ಯೆಯ ಯೋಚನೆ ಬಂದಾಗ ತಮ್ಮ ಹೆತ್ತವರ ಶ್ರಮವನ್ನು ನೆನಪಿಸಿಕೊಳ್ಳಬೇಕು. ಸಮಸ್ಯೆಗಳು ಎದುರಾದಾಗ ಪರಿಹಾರದ ಬಗ್ಗೆ ಯೋಚಿಸಬೇಕು. ಸರಿಯಾದ ಪ್ರಯತ್ನ ಹಾಗೂ ದೃಢನಿರ್ಧಾರದಿಂದ ಪ್ರತಿಯೊಬ್ಬರೂ ಯಶಸ್ಸು ಕಾಣಬಹುದು. ಇತರರನ್ನು ಅನುಕರಿಸುವ ಬದಲು ನಮ್ಮ ವ್ಯಕ್ತಿತ್ವವನ್ನು ನಾವೇ ರೂಪಿಸಿಕೊಳ್ಳಬೇಕು. ಆರೋಗ್ಯ, ಆಹಾರ ವೈಯಕ್ತಿಕ ಅಗತ್ಯಗಳನ್ನು ನಾವೇ ಪೂರೈಸಿಕೊಳ್ಳಬೇಕು. ಇನ್ನೊಬ್ಬರ ನೆರವಿಗಾಗಿ ಕಾಯಬಾರದು. ಪದವಿ ಪಡೆದರೂ ಯುವಕರಲ್ಲಿ ಸಾಮಾನ್ಯ ಜ್ಞಾನ ಹಾಗೂ ಕೌಶಲಗಳ ಕೊರತೆ ಇದೆ. ಇದರಿಂದಾಗಿ ಅವರು ಉದ್ಯೋಗ ಸಂದರ್ಶನಗಳಲ್ಲಿ ವಿಫಲರಾಗುತ್ತಿದ್ದಾರೆ. ಈ ಕಾರಣವನ್ನು ಅರ್ಥಮಾಡಿಕೊಳ್ಳದೆ ತಮಗೆ ಭವಿಷ್ಯವಿಲ್ಲವೆಂದು ಕೊರಗುವುದರಲ್ಲಿ ಅರ್ಥವಿಲ್ಲ ಎಂದರು.
ಮೊಬೈಲ್ ಫೋನನ್ನು ಮನರಂಜನೆಗಾಗಿ ಬಳಸುವ ಬದಲು, ವಿದ್ಯಾಭ್ಯಾಸಕ್ಕಾಗಿ ಸದ್ಬಳಕೆ ಮಾಡಿಕೊಳ್ಳಿ. ಅತಿಯಾದ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ. ಸ್ನೇಹಿತರೊಂದಿಗೆ ಮುಖಾಮುಖಿ ಸಂವಹನ ಮತ್ತು ಸ್ನೇಹವನ್ನು ಬೆಳೆಸಿಕೊಳ್ಳಿ. ದ್ವೇಷ, ದುಃಖ, ಕೋಪ ಮತ್ತು ಭಯದಂತಹ ನಕಾರಾತ್ಮಕ ಭಾವನೆಗಳನ್ನು ಮನಸ್ಸಿನಿಂದ ತೆಗೆದುಹಾಕಿ, ಪ್ರೀತಿ ಹಂಚಿ ಸ್ನೇಹವನ್ನು ಪಡೆಯಿರಿ ಎಂದರು.ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದಜಿ ಮಾತನಾಡಿ, ವಿದ್ಯಾರ್ಥಿಗಳು ಸ್ವಂತಿಕೆ ಮತ್ತು ದೃಢ ಸಂಕಲ್ಪದಿಂದ ಮುನ್ನಡೆಯಬೇಕಾದ ಅಗತ್ಯವಿದೆ. ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಹಲವು ಉತ್ತಮ ಅವಕಾಶಗಳು ಮತ್ತು ವ್ಯವಸ್ಥೆಗಳು ಲಭ್ಯವಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವುದು ಮುಖ್ಯ ಎಂದರು.ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಯೋಗ ಮತ್ತು ಧ್ಯಾನಕ್ಕೆ ಒತ್ತು ನೀಡುವುದು ಅವಶ್ಯಕ. ಯೋಗವು ಮನಸ್ಸಿನ ಚಂಚಲತೆಯನ್ನು ಕಡಿಮೆ ಮಾಡಿ ಶಾಂತಿ ನೀಡುತ್ತದೆ, ಮತ್ತು ಬುದ್ಧನಂತೆ ಧ್ಯಾನ ಮಾಡುವುದರಿಂದ ನಮ್ಮ ಪ್ರಜ್ಞೆ ಉನ್ನತ ಮಟ್ಟಕ್ಕೆ ಏರುತ್ತದೆ. ಯಾವುದೇ ಸಂದೇಹಗಳಿದ್ದರೂ ಅನುಭವಿ ಮತ್ತು ಉತ್ತಮ ವ್ಯಕ್ತಿಗಳಿಂದ ಸಲಹೆ ಪಡೆದು ಅದರಂತೆ ಮುನ್ನಡೆಯಬೇಕು. ಇಂದು ನೀವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ಭವಿಷ್ಯದ ಭಾರತದ ನಿರ್ಮಾಣಕ್ಕೆ ಅಡಿಪಾಯವಾಗಲಿದೆ ಎಂದರು. ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಅಧ್ಯಕ್ಷತೆ ವಹಿಸಿ ಮಾತನಾಡಿ, ತುಮಕೂರು ವಿವಿಯು ದೇಶದ ಅತ್ಯುತ್ತಮ ೭೫ ಸರ್ಕಾರಿ ವಿವಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ. ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಸಹಕಾರದಿಂದ ಇನ್ನಷ್ಟು ಉತ್ತಮ ಸ್ಥಾನಕ್ಕೆ ಏರಲು ಸಾಧ್ಯ ಎಂದರು.ಮೌಲ್ಯಮಾಪನ ಕುಲಸಚಿವ ಪ್ರೊ. ಎನ್. ಸತೀಶ್ ಗೌಡ, ಪ್ರೇರಣಾ ಉಪನ್ಯಾಸ ಸಮಿತಿಯ ಅಧ್ಯಕ್ಷ ಪ್ರೊ. ರವೀಂದ್ರ ಕುಮಾರ್ ಬಿ., ವಿವಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಎಸ್. ಶ್ರೀನಿವಾಸ್ ಉಪಸ್ಥಿತರಿದ್ದರು. ಸಹಪ್ರಾಧ್ಯಾಪಕ ಡಾ. ಸಿಬಂತಿ ಪದ್ಮನಾಭ ಕೆ. ವಿ. ನಿರೂಪಿಸಿದರು.ಫೋಟೋ : ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಯುವಜನತೆ ಮತ್ತು ಮಾನಸಿಕ ಆರೋಗ್ಯ ಕುರಿತ ಪ್ರೇರಣಾ ಉಪನ್ಯಾಸ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.