ಒಳ ಮೀಸಲು ಜಾರಿ ಮುನ್ನ ಬ್ಲಾಕ್‌ಲಾಗ್ ಹುದ್ದೆ ಭರ್ತಿ ಬೇಡ: ಅಂದಾನಿ

KannadaprabhaNewsNetwork | Published : Mar 7, 2025 12:47 AM

ಸಾರಾಂಶ

ಮಹದೇವಪ್ಪ ಅವರಲ್ಲಿ ಮೊದಲಿನಿಂದಲೂ ಒಳಮೀಸಲಾತಿ ವಿರೋಧಿ ಮನಸ್ಥಿತಿ ಇದೆ. ಬಾಯಲ್ಲಿ ಮತ್ತು ಪ್ರಚಾರದಲ್ಲಿ ಸಂವಿಧಾನ ರಕ್ಷಣೆಗಾಗಿ ನೂರಾರು ಕೋಟಿ ರು. ಖರ್ಚು ಮಾಡುತ್ತಿರುವ ಸಚಿವ ಮಹದೇವಪ್ಪರವರು ಸಂವಿಧಾನವನ್ನು ಜಾರಿ ಮಾಡುವಲ್ಲಿ ಇರುವ ಬದ್ಧತೆ ಪ್ರದರ್ಶಿಸುತ್ತಿಲ್ಲ. ಸಂವಿಧಾನ ವಿರೋಧಿ ಮತ್ತು ಸರ್ಕಾರದ ನೀತಿಗಳ ವಿರೋಧಿಯಾದಂತ ಎಚ್.ಸಿ. ಮಹದೇವಪ್ಪ ಅವರು ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಒಳಮೀಸಲಾತಿ ಜಾರಿಯಾಗುವವರೆಗೆ ಹೊಸ ನೇಮಕಾತಿಗಳಿಗೆ ಅಧಿಸೂಚನೆ ಹೊರಡಿಸುವುದಿಲ್ಲವೆಂದು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದರೂ ಬ್ಯಾಕ್‌ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಇಲಾಖಾ ಮುಖ್ಯಸ್ಥರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಭೀಮ್ ಆರ್ಮಿ ಸೌತ್ ಇಂಡಿಯಾ ಕರ್ನಾಟಕದ ಸಂಸ್ಥಾಪಕ ಡಾ.ಸಿ.ಅನ್ನದಾನಿ ಆರೋಪಿಸಿದರು.

ಮಹದೇವಪ್ಪ ಅವರಲ್ಲಿ ಮೊದಲಿನಿಂದಲೂ ಒಳಮೀಸಲಾತಿ ವಿರೋಧಿ ಮನಸ್ಥಿತಿ ಇದೆ. ಬಾಯಲ್ಲಿ ಮತ್ತು ಪ್ರಚಾರದಲ್ಲಿ ಸಂವಿಧಾನ ರಕ್ಷಣೆಗಾಗಿ ನೂರಾರು ಕೋಟಿ ರು. ಖರ್ಚು ಮಾಡುತ್ತಿರುವ ಸಚಿವ ಮಹದೇವಪ್ಪರವರು ಸಂವಿಧಾನವನ್ನು ಜಾರಿ ಮಾಡುವಲ್ಲಿ ಇರುವ ಬದ್ಧತೆ ಪ್ರದರ್ಶಿಸುತ್ತಿಲ್ಲ. ಸಂವಿಧಾನ ವಿರೋಧಿ ಮತ್ತು ಸರ್ಕಾರದ ನೀತಿಗಳ ವಿರೋಧಿಯಾದಂತ ಎಚ್.ಸಿ. ಮಹದೇವಪ್ಪ ಅವರು ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಗುರುವಾರ ಸುದ್ದಿಗೋಷ್ಠೀಯಲ್ಲಿ ದೂರಿದರು.

ಕಳೆದ ಹತ್ತು ವರ್ಷಗಳಲ್ಲಿ ೭೦ ಸಾವಿರ ಕೋಟಿಗೂ ಅಧಿಕ ಎಸ್‌ಸಿಪಿ, ಟಿಎಸ್‌ಪಪಿ ಯೋಜನೆಯ ನಿಧಿಯನ್ನು ನೀರಾವರಿ, ಲೋಕೋಪಯೋಗಿ, ಕುಡಿಯುವ ನೀರು ಇನ್ನಿತರ ಇಲಾಖೆಗಳಿಗೆ ವರ್ಗಾಯಿಸಿರುವುದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸರ್ಕಾರ ಸಂವಿಧಾನ ವಿರೋಧಿ, ಜನವಿರೋಧಿ ನೀತಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಈಗಿನ ಸರ್ಕಾರ ಪರಿಶಿಷ್ಟರ ಅಭಿವೃದ್ಧಿ ನಿಧಿಯನ್ನು ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಿರುವುದು ಆಘಾತಕಾರಿಯಾಗಿದೆ. ಈ ಬಗ್ಗೆ ಸಚಿವರು ನಾಚಿಕೆಯಿಲ್ಲದೆ ತಮ್ಮ ಸಂವಿಧಾನ ವಿರೋಧಿ ನಡೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ಜನಾಂಗದ ಬಗ್ಗೆ ಇವರಿಗಿರುವ ಕಾಳಜಿಗೆ ಸಾಕ್ಷಿಯಾಗಿದೆ ಎಂದರು.

ಸುಪ್ರೀಂ ಕೋರ್ಟ್ ತೀರ್ಪಿನಂತೆ ಸರ್ಕಾರವು ಸಂಪುಟ ಸಭೆಯಲಲ್ಲಿ ಒಳ ಮೀಸಲು ಜಾರಿಗೊಳಿಸಲು ತಾತ್ವಿಕ ಒಪ್ಪಿಗೆ ನೀಡಿದ್ದರೂ ಆಯೋಗವನ್ನು ರಚಿಸಲು ಮೂರು ತಿಂಗಳು ತೆಗೆದುಕೊಂಡಿದೆ. ಜನವರಿಯಿಂದ ಆಯೋಗ ಕಾರ್ಯಾರಂಭ ಮಾಡಿದ್ದು ಸಮಾಜ ಕಲ್ಯಾಣ ಇಲಾಖೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸುತ್ತದೆ ಎಂದರು.

ಗೋಷ್ಠಿಯಲ್ಲಿ ಬಿ.ಕೃಷ್ಣ, ಸಿ.ಕೆ.ಪಾಪಯ್ಯ, ಸಿದ್ದರಾಜು, ಗವಿ ಇದ್ದರು.

Share this article