ತಾಲೂಕು ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಜವಾಬ್ದಾರಿ ಪಡೆದವರು ಆತ್ಮವಿಶ್ವಾಸದಿಂದ ಮುನ್ನುಗ್ಗಿ ಕೆಲಸ ಮಾಡಬೇಕು. ನಮ್ಮ ಕೆಲಸ ಮತ್ತು ನಡವಳಿಕೆಯೇ ಎಲ್ಲ ಟೀಕೆಗಳಿಗೆ ಉತ್ತರ ನೀಡುತ್ತದೆ ಎಂದು ಹೇಳಿದರು. ಮುದ್ರಣ ಮಾಧ್ಯಮಕ್ಕೆ ತನ್ನದೇ ಆದ ನೀತಿ, ತತ್ವ ಮತ್ತು ಘನತೆ ಇರುವುದರಿಂದ ಅದನ್ನು ಉಳಿಸಿಕೊಂಡು ಹೋಗಬೇಕೆಂದು ಪತ್ರಕರ್ತರಿಗೆ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಪತ್ರಕರ್ತರ ವೃತ್ತಿ ಗೌರವ, ಸಂಘಟನೆ ಬಲ ಮತ್ತು ಜವಾಬ್ದಾರಿಯುತ ಕಾರ್ಯನಿರ್ವಹಣೆಯೇ ಸಮಾಜದಲ್ಲಿ ಸತ್ಯವನ್ನು ಉಳಿಸುವ ಶಕ್ತಿಯಾಗಿದೆ ಎಂದು ಕರ್ನಾಟಕ ಗೃಹಮಂಡಳಿ ಅಧ್ಯಕ್ಷರು ಹಾಗೂ ಸ್ಥಳೀಯ ಶಾಸಕ ಕೆ.ಎಂ. ಶಿವಲಿಂಗೇಗೌಡ ಅಭಿಪ್ರಾಯಪಟ್ಟರು.ತಾಲೂಕು ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಜವಾಬ್ದಾರಿ ಪಡೆದವರು ಆತ್ಮವಿಶ್ವಾಸದಿಂದ ಮುನ್ನುಗ್ಗಿ ಕೆಲಸ ಮಾಡಬೇಕು. ನಮ್ಮ ಕೆಲಸ ಮತ್ತು ನಡವಳಿಕೆಯೇ ಎಲ್ಲ ಟೀಕೆಗಳಿಗೆ ಉತ್ತರ ನೀಡುತ್ತದೆ ಎಂದು ಹೇಳಿದರು. ಮುದ್ರಣ ಮಾಧ್ಯಮಕ್ಕೆ ತನ್ನದೇ ಆದ ನೀತಿ, ತತ್ವ ಮತ್ತು ಘನತೆ ಇರುವುದರಿಂದ ಅದನ್ನು ಉಳಿಸಿಕೊಂಡು ಹೋಗಬೇಕೆಂದು ಪತ್ರಕರ್ತರಿಗೆ ಸಲಹೆ ನೀಡಿದರು.ತಾಲೂಕು ಪತ್ರಕರ್ತರ ಸಂಘದ ಭವನ ನಿರ್ಮಾಣ ಕಾರ್ಯಕ್ಕೆ ಈಗಲೇ ಚಾಲನೆ ನೀಡಲಾಗುವುದು. ಫೌಂಡೇಶನ್ ನಿರ್ಮಾಣಕ್ಕೆ 25 ಲಕ್ಷ ರುಪಾಯಿ ಸಿದ್ಧವಿದ್ದು, ಒಂದು ವರ್ಷದೊಳಗೆ ಭವನ ಪೂರ್ಣಗೊಳ್ಳಬೇಕು ಎಂದು ಶಾಸಕರು ಭರವಸೆ ನೀಡಿದರು. ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸಂಘದ ಅಭಿವೃದ್ಧಿಗೆ ಎಲ್ಲ ಸದಸ್ಯರ ಸಹಕಾರ ಅಗತ್ಯ. ಅಧಿಕಾರ ಇದ್ದಾಗ ಮಾತ್ರ ಸಂಘ ಬೇಕು ಎಂಬ ಮನೋಭಾವ ಬೇಡ. ಪ್ರತಿಯೊಬ್ಬರೂ ಶಿಸ್ತು ಮತ್ತು ನಿಯಮ ಪಾಲಿಸಬೇಕು. ತಪ್ಪು ನಡೆದರೆ ಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು. ಸಂಘ ಕಟ್ಟುವುದರ ಜೊತೆಗೆ ಸಂಬಂಧಗಳು ಮತ್ತು ವಿಶ್ವಾಸವನ್ನೂ ಕಟ್ಟಬೇಕಿದೆ ಎಂದು ಹೇಳಿದರು.
ರಾಜ್ಯ ಉಪಾಧ್ಯಕ್ಷ ಎಚ್.ಬಿ. ಮದನಗೌಡ ನೂತನ ಪದಾಧಿಕಾರಿಗಳಿಗೆ ಶುಭಾಶಯ ಕೋರಿದರು. ಹಿರಿಯರು ಕಟ್ಟಿದ ಸಂಸ್ಥೆಯನ್ನು ಮತ್ತಷ್ಟು ಸದೃಢಗೊಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. ಜಿಲ್ಲಾಧ್ಯಕ್ಷ ಜೆ.ಆರ್. ಕೆಂಚೇಗೌಡ ಮಾತನಾಡಿ, ಸಂಘದ ಗೌರವ ಉಳಿಸಿಕೊಳ್ಳಲು ಪತ್ರಕರ್ತರು ಪರಿಶುದ್ಧರಾಗಿರಬೇಕು. ಹಣ ವಸೂಲಿ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಎಚ್ಚರಿಸಿದರು.ತಾಲೂಕು ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಟಿ. ಆನಂದ್ ಮಾತನಾಡಿ, ಈ ಅವಧಿಯಲ್ಲೇ ಸಂಘದ ಭವನ ನಿರ್ಮಾಣ ಮಾಡುವುದು ಮೊದಲ ಆದ್ಯತೆ. ಎಲ್ಲರನ್ನು ಒಗ್ಗೂಡಿಸಿಕೊಂಡು ಸಂಘವನ್ನು ಮುನ್ನಡೆಸುವುದಾಗಿ ಹೇಳಿದರು. ಸಂಘದ ಗೌರವಕ್ಕೆ ಧಕ್ಕೆ ತರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಜಿ. ಸುರೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್, ಉಪಾಧ್ಯಕ್ಷ ಹೇಮಂತ್ ಕುಮಾರ್, ಮಾಜಿ ಅಧ್ಯಕ್ಷರಾದ ರಾಮಚಂದ್ರ, ಕಣಕಟ್ಟೆ ಕುಮಾರ್, ನಿರ್ದೇಶಕರು ಹಾಗೂ ಹಿರಿಯ ಪತ್ರಕರ್ತರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.