ಸಮಾಜ ವಿಕೃತಿಯತ್ತ ಸಾಗಲು ಬಿಡಬೇಡಿ: ಟಿ.ಎಸ್.ನಾಗಾಭರಣ

KannadaprabhaNewsNetwork |  
Published : Dec 01, 2024, 01:31 AM IST
೩೦ಕೆಎಂಎನ್‌ಡಿ-೨ಮಂಡ್ಯ ಮಿಮ್ಸ್ ಸಭಾಂಗಣದಲ್ಲಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕನ್ನಡ ಸಂಘ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಂಭ್ರಮ ಸಮಾರಂಭವನ್ನು ಸಿನಿಮಾ ನಿರ್ದೇಶಕ ಟಿ.ಎಸ್.ನಾಗಭರಣ ಉದ್ಘಾಟಿಸಿದರು. | Kannada Prabha

ಸಾರಾಂಶ

ಇಂದಿನ ದಿನಗಳಲ್ಲಿ ವಿಜ್ಞಾನ ಎಐ (ಕೃತಕ ಬುದ್ದಿಮತ್ತೆ) ಬೆಳವಣಿಗೆ ಕಾಣುತ್ತಿದೆ. ಉಪಕಾರ- ಅಪಕಾರ ತಂದುಕೊಡುವವರ ಮಧ್ಯೆ ಕೃತಕ ಬುದ್ದಿಮತ್ತೆಯ ಯಂತ್ರಗಳು ಬರುತ್ತಿವೆ, ಬಹುಮುಖ್ಯವಾಗಿ ಮನುಷ್ಯನ ಮನುಷ್ಯತ್ವವನ್ನು ನಿಧಾನವಾಗಿ ತೊಡೆದುಹಾಕಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಯುವ ಮನಸ್ಸುಗಳು ಸುಸಂಸ್ಕೃತವಾಗಿರಲು ಸಾಂಸ್ಕೃತಿಕವಾಗಿ ಬೆಳವಣಿಗೆ ಕಾಣಬೇಕು. ಇಲ್ಲದಿದ್ದರೆ ಸಮಾಜ ವಿಕೃತಿಯತ್ತ ಸಾಗುತ್ತದೆ. ಅದಕ್ಕೆ ಅವಕಾಶ ನೀಡಬಾರದು ಎಂದು ಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಹೇಳಿದರು.

ನಗರದಲ್ಲಿರುವ ಮಿಮ್ಸ್ ಸಭಾಂಗಣದಲ್ಲಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕನ್ನಡ ಸಂಘ ಆಯೋಜಿಸಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಾಂಸ್ಕೃತಿಕ ನೆಲಗಟ್ಟನ್ನು ಹೊಂದಿರುವ ಸಮಾಜ ಸುಸಂಸ್ಕೃತವಾಗಿ ಬೆಳವಣಿಗೆ ಕಾಣುತ್ತದೆ. ಸಂಸ್ಕೃತಿ, ಸಂಸ್ಕಾರವಿಲ್ಲದ ಸಮಾಜ ವಿಕೃತಿಯತ್ತ ಸಾಗುತ್ತದೆ. ಇವತ್ತಿನ ಕಾಲಘಟ್ಟದಲ್ಲಿ ನಾವು ವಿಕೃತಿಯಿಂದ ಸುಕೃತಿಗೆ ಬರಬೇಕು, ಅದಕ್ಕಾಗಿ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಸಾಂಸ್ಕೃತಿಕವಾಗಿ ಮನಸ್ಸುಗಳು ಬೆಸೆಯಬೇಕು ಎಂದು ನುಡಿದರು.

ಇಂದಿನ ದಿನಗಳಲ್ಲಿ ವಿಜ್ಞಾನ ಎಐ (ಕೃತಕ ಬುದ್ದಿಮತ್ತೆ) ಬೆಳವಣಿಗೆ ಕಾಣುತ್ತಿದೆ. ಉಪಕಾರ- ಅಪಕಾರ ತಂದುಕೊಡುವವರ ಮಧ್ಯೆ ಕೃತಕ ಬುದ್ದಿಮತ್ತೆಯ ಯಂತ್ರಗಳು ಬರುತ್ತಿವೆ, ಬಹುಮುಖ್ಯವಾಗಿ ಮನುಷ್ಯನ ಮನುಷ್ಯತ್ವವನ್ನು ನಿಧಾನವಾಗಿ ತೊಡೆದುಹಾಕಲಾಗುತ್ತಿದೆ. ಕೃತಕ ಬುದ್ಧಿಮತ್ತೆ ಎನ್ನುವುದು ಒಂದು ಯಂತ್ರವಾಗಿದೆ, ಯಂತ್ರಗಳಿಗೆ ಹೃದಯವಿಲ್ಲ, ಸ್ಪರ್ಶಜ್ಞಾನವಿಲ್ಲ, ಎಐ ಯುಗದಲ್ಲಿರುವ ವೈದ್ಯವಿದ್ಯಾರ್ಥಿಗಳು ಮನುಷ್ಯನ ಮೂಲ ಸಂಪತ್ತಾಗಿರುವ ಹೃದಯ ಮತ್ತು ಸ್ಪರ್ಶವನ್ನು ಹೇಗೆ ಅರಿಯುತ್ತೀರಿ, ಆದ್ದರಿಂದ ನಿಮ್ಮ ವೃತ್ತಿಯ ಕೌಶಲ್ಯದ ಜೊತೆಯಲ್ಲೇ ಸುಸಂಸ್ಕೃತ ಜ್ಞಾನ ಹೆಚ್ಚಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು. ಮಿಮ್ಸ್ ನಿರ್ದೇಶಕ ಡಾ. ಪಿ.ನರಸಿಂಹಸ್ವಾಮಿ, ಪ್ರಾಂಶುಪಾಲ ಡಾ.ಎಂ.ಹನುಮಂತಪ್ರಸಾದ್, ಮುಖ್ಯ ಆಡಳಿತಾಧಿಕಾರಿ ಕೆ.ಜಾನ್ಸನ್, ಸ್ಥಾನೀಯ ವೈದ್ಯಾಧಿಕಾರಿ ಡಾ.ಡಿ.ಬಿ.ದರ್ಶನ್‌ಕುಮಾರ್, ಶುಶ್ರೂಷಕ ಪ್ರಾಂಶುಪಾಲ ಎಲ್.ಎಲ್ ಕ್ಲೆಮೆಂಟ್, ಹಿರಿಯ ಶುಶ್ರೂಷಕ ಅಧಿಕಾರಿ ಸುನಿತಾ, ಡಾ.ಬಿಂದ್ಯಾ, ಕನ್ನಡ ಸಂಘದ ವಿದ್ಯಾರ್ಥಿ ಕಾರ್ಯಕಾರಿ ಸಮಿತಿ ಕಾರ್ಯದರ್ಶಿ ದರ್ಶನ್, ಎನ್.ದರ್ಶನ್, ಚಿತ್ರಾಶ್ರೀ, ದೀಕ್ಷಾ, ಹೇಮಾ, ವರಲಕ್ಷ್ಮೀ, ಆಮೋದ್, ಚೇತನ್‌ಕುಮಾರ್, ಧೀರಜ್, ಆಶ್ರಯ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಬಸವಣ್ಣ ಜೀವ ವೈವಿಧ್ಯ ಉದ್ಯಾನವನ
ಕೆಎಂಎಫ್‌ನಲ್ಲಿ ಉದ್ಯೋಗದ ನೆಪದಲ್ಲಿ50 ಲಕ್ಷ ವಂಚನೆ:ಇಬ್ಬರ ವಿರುದ್ಧ ಕೇಸ್‌