ವೃಷಭಾವತಿ ಅಪಪ್ರಚಾರಕ್ಕೆ ಕಿವಿಗೊಡಬೇಡಿ : ಡಿ.ಕೆ.ಸುರೇಶ್

KannadaprabhaNewsNetwork |  
Published : Jun 12, 2025, 02:52 AM ISTUpdated : Jun 12, 2025, 11:40 AM IST
ಪೋಟೋ 5 : ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕರು ಹಾಗೂ ಕಾಂಗ್ರೇಸ್ ಮುಖಂಡರ ಜೊತೆ ಮಾಜಿ ಸಂಸದ ಡಿ.ಕೆ.ಸುರೇಶ್ ಚರ್ಚಿಸುತ್ತಿರುವುದು | Kannada Prabha

ಸಾರಾಂಶ

ಪ್ರತಿಪಕ್ಷಗಳ ಅಪಪ್ರಚಾರಕ್ಕೆ ಕಿವಿಗೊಡದಂತೆ ಜನತೆಗೆ ಮನವರಿಕೆ ಮಾಡಿಕೊಡಿ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಪಕ್ಷದ ಮುಖಂಡರಿಗೆ ತಿಳಿಸಿದರು

 ದಾಬಸ್‍ಪೇಟೆ : ವೃಷಭಾವತಿ ನೀರನ್ನು ಸ್ವಚ್ಛಗೊಳಿಸಿದ ಬಳಿಕವಷ್ಟೆ ಕೆರೆಗಳಿಗೆ ಹರಿಸುವ ಯೋಜನೆ ಜಾರಿ ಹಿನ್ನೆಲೆಯಲ್ಲಿ ತಜ್ಞರ ಸಮಿತಿ ರಚಿಸಲಾಗಿದೆ. ಬೆಂಗಳೂರು ನಗರದಿಂದ ಸಂಗಮದವರೆಗೂ ಸ್ಥಳ ಪರಿಶೀಲನೆ, ನೀರಿನ ಪರೀಕ್ಷೆ ಮಾಡಲಾಗುತ್ತಿದೆ. ಈ ಯೋಜನೆ ಬಗ್ಗೆ ಪ್ರತಿಪಕ್ಷಗಳ ಅಪಪ್ರಚಾರಕ್ಕೆ ಕಿವಿಗೊಡದಂತೆ ಜನತೆಗೆ ಮನವರಿಕೆ ಮಾಡಿಕೊಡಿ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಪಕ್ಷದ ಮುಖಂಡರಿಗೆ ತಿಳಿಸಿದರು.

ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕರು ಹಾಗೂ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದರು.

ಅಂತರ್ಜಲದ ಮಟ್ಟ ಏರಿಕೆ:

ಬೆಂಗಳೂರಿನಲ್ಲಿ ಉದ್ಭವವಾಗುವ ವೃಷಭಾವತಿ ಹಾಗೂ ಅರ್ಕಾವತಿ ನದಿ ಸೇರಿ ಸುಮಾರು 125 ಕಿಮೀ ದೂರದ ರಾಮನಗರ ಜಿಲ್ಲೆ ಗಡಿವರೆಗೂ ಹರಿಯಲಿದೆ. ಇದೇ ನೀರನ್ನು ನೂರಾರು ಗ್ರಾಮಗಳ ರೈತರು ಕೃಷಿಗೆ ಬಳಕೆ ಮಾಡುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿ ಮಾಡಿರುವ ಶುದ್ಧೀಕರಣ ಘಟಕಗಳಿಗೂ ತೆರಳಿ ತಜ್ಞರು ವೀಕ್ಷಣೆ ಮಾಡಲಿದ್ದಾರೆ. ಸ್ವಚ್ಛ ವೃಷಭಾವತಿ ವ್ಯಾಲಿ ನೀರಿನಿಂದ ಅಂತರ್ಜಲದ ಮಟ್ಟ ಏರಿಕೆ ಆಗಲಿದೆಯೇ ಹೊರತು ಜನ ಜಾನುವಾರುಗಳಿಗೆ ತೊಂದರೆ ಆಗುವುದಿಲ್ಲ. ಇದು ಕಾಂಗ್ರೆಸ್ ಅನುಷ್ಟಾನಗೊಳಿಸಿದ ಯೋಜನೆಯಲ್ಲ, ಬಿಜೆಪಿ ಅವಧಿಯದ್ದಾಗಿದೆ. ಈ ಬಗ್ಗೆ ಮೈತ್ರಿ ಪಕ್ಷಗಳ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಸಲಹೆ ನೀಡಿದರು.

ಬಮುಲ್ ಚುನಾವಣೆ ಚರ್ಚೆ:

ಬಮುಲ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸೋಲಿನ ಕುರಿತು ಚರ್ಚಿಸಲಾಯಿತು. ಬಮುಲ್ ಚುನಾವಣೆಯನ್ನು ಪಾಠವಾಗಿ ಕಲಿಯಬೇಕು. ಅಭ್ಯರ್ಥಿ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲ ಎಂಬ ಮಾಹಿತಿ ಇತ್ತು. ಎಲ್ಲ ಕಡೆ ತಪ್ಪುಗಳಾಗುತ್ತವೆ. ಸರಿಪಡಿಸುವ ಕೆಲಸ ಆಗಬೇಕಿದೆ. ರಾಜಕಾರಣಿಗಳಾದವರಿಗೆ ತಾಳ್ಮೆ, ಸಮಾಧಾನ ಇರಬೇಕು. ಕೆಲ ಸನ್ನಿವೇಶ ನಿಭಾಯಿಸಲು ಸಲಹೆ ಪಡೆಯಬೇಕು ಎಂದು ಡಿ.ಕೆ.ಸುರೇಶ್ ಸಲಹೆ ನೀಡಿದರು.

 ಎತ್ತಿನಹೊಳೆ ಯೋಜನೆ ನೀರು ಮರುಹಂಚಿಕೆ ಮಾಡಿ ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಮಾಡುವಂತೆ ಶಾಸಕ ಎನ್. ಶ್ರೀನಿವಾಸ್ ಒತ್ತಡ ಹಾಕುತ್ತಿದ್ದು, ಅದರ ಜತೆಗೆ ಕಾವೇರಿ ನೀರು ಪೂರೈಕೆ ಮಾಡಿಕೊಡುವುದಾಗಿ ಮಾಜಿ ಸಂಸದ ಡಿ.ಕೆ.ಸುರೇಶ್ ಭರವಸೆ ನೀಡಿದರು.

ಎಲ್ಲ ಕೆರೆಗಳಿಗೂ ಹರಿಯಲಿದೆ ನೀರು : ಎಂಎಲ್‍ಸಿ ರವಿ ಮಾತನಾಡಿ ಎತ್ತಿನಹೊಳೆ ನೀರಿನ ಬಗ್ಗೆ ಜನರು ನಂಬಿಕೆ ಕಳೆದುಕೊಂಡಿದ್ದಾರೆ. ಇದನ್ನು ಮನಗಂಡ ಡಿಸಿಎಂ ಅರಣ್ಯ ಹಾಗೂ ಪರಿಸರ ಇಲಾಖೆಯ ಅನುಮೋದನೆ ಪಡೆದು ನೀರು ಹರಿಸಲು ಮುಂದಾಗಿದ್ದಾರೆ. ತಿಪ್ಪಗೊಂಡನಹಳ್ಳಿ, ಮಂಚನಬೆಲೆ, ಹೆಸರಘಟ್ಟ, ರಾಮನಗರ, ನೆಲಮಂಗಲದ ಕೆರೆಗಳಿಗೂ ಎತ್ತಿನಹೊಳೆ ನೀರು ಹರಿದು ಬರಲಿದೆ ಎಂದು ಎಂಎಲ್‍ಸಿ ರವಿ ತಿಳಿಸಿದರು. 

\ಶಾಸಕ ಎನ್.ಶ್ರೀನಿವಾಸ್ ಮಾತನಾಡಿ ಕ್ಷೇತ್ರಕ್ಕೆ ಎತ್ತಿನಹೊಳೆ ನೀರು ಮರು ಹಂಚಿಕೆ, ಕಾವೇರಿ ನೀರು ಪೂರೈಕೆ ಸೇರಿ ಮೆಟ್ರೋ ವಿಸ್ತರಣೆ ವಿಚಾರಗಳ ಅನುಷ್ಟಾನಕ್ಕಾಗಿ ಮಾಜಿ ಸಂಸದ ಡಿ.ಕೆ.ಸುರೇಶ್ ಮತ್ತು ಎಂಎಲ್ಸಿ ಎಸ್.ರವಿ ಹೆಚ್ಚು ಕಾಳಜಿವಹಿಸಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ಎನ್ ಡಿಎ ಅಧ್ಯಕ್ಷ ನಾರಾಯಣಗೌಡ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ನಾಗರಾಜು, ಜಗದೀಶ್, ಗ್ರಾ.ಪಂ.ಮಾಜಿ ಅಧ್ಯಕ್ಷ ಎಂ.ಕೆ.ನಾಗರಾಜು, ಬಗರುಹುಕಂ ಸದಸ್ಯ ಹನುಮಂತೇಗೌಡ್ರು, ನಗರಸಭೆ ಅಧ್ಯಕ್ಷ ಗಣೇಶ್, ಉಪಾಧ್ಯಕ್ಷ ಆನಂದ್, ಸದಸ್ಯ ಪ್ರದೀಪ್, ಮುನಿರಾಮು, ಮುನಿಯಪ್ಪ, ಮತ್ತೀತ್ತರಿದ್ದರು.

PREV
Read more Articles on

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ