ಗದಗ ಜಿಲ್ಲೆಯಾದ್ಯಂತ ಕಾರಹುಣ್ಣಿಮೆ ಸಡಗರ!

KannadaprabhaNewsNetwork |  
Published : Jun 12, 2025, 02:40 AM IST
ಕಾರಹುಣ್ಣುಮೆ ಅಂಗವಾಗಿ ಕರಿ ಹರಿದಿರುವ ಎತ್ತು.  | Kannada Prabha

ಸಾರಾಂಶ

ಪ್ರತಿಯೊಂದು ಗ್ರಾಮದಲ್ಲಿಯೂ ಎತ್ತುಗಳನ್ನು ಓಡಿಸುವುದು ಕಾರಹುಣ್ಣಿಮೆಯಂದು ಸಾಮಾನ್ಯವಾಗಿರುತ್ತದೆ. ಗ್ರಾಮದ ಪ್ರಮುಖ ಬೀದಿಯಲ್ಲಿಯೇ (ಬಜಾರ) ಶೃಂಗಾರಗೊಂಡ ಎತ್ತುಗಳನ್ನು ಓಡಿಸಲಾಗುತ್ತದೆ.

ಶಿವಕುಮಾರ ಕುಷ್ಟಗಿ

ಗದಗ: ಉತ್ತರ ಕರ್ನಾಟಕದ ಗ್ರಾಮೀಣ ಸಂಸ್ಕೃತಿಯ ಪ್ರತೀಕ, ರೈತರ ಹಬ್ಬವೆಂದೇ ಕರೆಯಲ್ಪಡುವ ಕಾರಹುಣ್ಣಿಮೆಯನ್ನು ಬುಧವಾರ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ರೈತರು ಪ್ರತಿಯೊಂದು ಊರಿನಲ್ಲಿಯೂ ಶೃಂಗರಿಸಿದ ಎತ್ತುಗಳನ್ನು ಓಡಿಸಿ, ಊರ ಅಗಸಿಯಲ್ಲಿ ಕಟ್ಟಲಾಗಿರುವ ಹಗ್ಗವನ್ನು (ಕರಿ) ಹರಿಯುವ ಮೂಲಕ ಹಬ್ಬ ಆಚರಿಸಿದರು. ಮಕ್ಕಳು ಬಣ್ಣ ಬಣ್ಣದ ಗಾಳಿಪಟಗಳನ್ನು ಹಾರಿಸಿ ಸಂಭ್ರಮಿಸಿದರು. ಮಹಿಳೆಯರು ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆರಾಧಿಸಿದರು.

ಕಾರ ಹುಣ್ಣಿಮೆ ಶಿವಪೂಜೆ, ಕೃಷಿಕ ಜೀವನ ಮತ್ತು ಎತ್ತುಗಳ ಪಾಲಿನ ಗೌರವದಿಂದ ಕೂಡಿದ ಹಬ್ಬವಾಗಿದೆ. ಎತ್ತುಗಳು ಕೃಷಿಯ ಶಕ್ತಿ, ಶ್ರದ್ಧೆ ಹಾಗೂ ಕುಟುಂಬದ ಅಂಗವೆಂದು ಈ ಹಬ್ಬದಲ್ಲಿ ಪೂಜಿಸುತ್ತಾರೆ. ಈ ದಿನ ಎತ್ತುಗಳಿಗೆ ವಿಶೇಷವಾಗಿ ಶೃಂಗಾರ ಮಾಡಲಾಗುತ್ತದೆ. ಬಣ್ಣ ಬಣ್ಣದ ಜೂಲಾ ಹೂಮಾಲೆ, ಎತ್ತುಗಳ ಕೊಂಬುಗಳಿಗೆ ಕೊಡನ್ಸ್, ಕೊರಳಲ್ಲಿ ಗೆಜ್ಜೆ ಸರ, ಎತ್ತುಗಳ ಮೈಗೆಲ್ಲಾ ಅರಿಷಿಣ ಮತ್ತು ಎಣ್ಣೆ ಹಚ್ಚಿ ಎತ್ತುಗಳನ್ನು ಶೃಂಗರಿಸಿ ಹಬ್ಬ ಆಚರಿಸುವುದು ವಾಡಿಕೆಯಾಗಿದೆ.

ಎತ್ತಿನ ಓಟವೇ ಹಬ್ಬದ ಹೈಲೈಟ್: ಪ್ರತಿಯೊಂದು ಗ್ರಾಮದಲ್ಲಿಯೂ ಎತ್ತುಗಳನ್ನು ಓಡಿಸುವುದು ಕಾರಹುಣ್ಣಿಮೆಯಂದು ಸಾಮಾನ್ಯವಾಗಿರುತ್ತದೆ. ಗ್ರಾಮದ ಪ್ರಮುಖ ಬೀದಿಯಲ್ಲಿಯೇ (ಬಜಾರ) ಶೃಂಗಾರಗೊಂಡ ಎತ್ತುಗಳನ್ನು ಓಡಿಸಲಾಗುತ್ತದೆ. ಹೀಗೆ ಓಡುವ ಎತ್ತುಗಳಲ್ಲಿ ಬಿಳಿ ಮತ್ತು ಕರಿ ಬಣ್ಣದ ಎತ್ತುಗಳನ್ನು ಪ್ರತ್ಯೇಕವಾಗಿ ಓಡಿಸಲಾಗುತ್ತದೆ. ಯಾವ ಎತ್ತು ಬೇಗನೇ ಗುರಿ ಮುಟ್ಟಿ ಕಾರಹುಣ್ಣಿಮೆ ವಿಶೇಷ ಆಕರ್ಷಣೆಯಾಗಿ ಎತ್ತುಗಳು ಓಡುವ ದಾರಿಗೆ ಅಡ್ಡವಾಗಿ ಕಟ್ಟಿರುವ ಕೊಬ್ಬರಿ ಸರವನ್ನು ಹರಿಯುತ್ತದೆಯೋ ಅದೇ ಎತ್ತಿಗೆ ಬಹುಮಾನ ಸಿಗುತ್ತದೆ. ಆ ವರ್ಷ ಕರಿ ಹರಿದಿರುವ ಎತ್ತಿನ ಬಣ್ಣದ ಆಹಾರ ಧಾನ್ಯಗಳು ಉತ್ತಮವಾಗಿ ಇಳುವರಿ ಬರುತ್ತವೆ ಎನ್ನುವ ಬಲವಾದ ನಂಬಿಕೆ ರೈತಾಪಿ ವರ್ಗದಲ್ಲಿದೆ.

ಗಾಳಿಪಟ ಹಾರಾಟ: ಕಾರಹುಣ್ಣಿಮೆಯ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಅದು ಗಾಳಿಪಟ ಹಾರಾಟ. ಮಕ್ಕಳು ವಿಶೇಷ ಅಲಂಕಾರದ ಗಾಳಿಪಟಗಳನ್ನು ಹಾರಿಸಿ ಸಂಭ್ರಮಿಸುತ್ತಾರೆ. ನಗರ ಪ್ರದೇಶದಲ್ಲಿನ ಎತ್ತರ ಕಟ್ಟಡಗಳ ಮೇಲೆ ಪ್ಲಾಸ್ಟಿಕ್ ಗಾಳಿಪಟಗಳನ್ನು ಹಾರಿಸಿದರೆ, ಗ್ರಾಮೀಣ ಭಾಗದಲ್ಲಿನ ಯುವಕರು ತಾವೇ ಬಿದಿರು, ಕಡ್ಡಿಗಳಿಂದ ಸಿದ್ಧ ಪಡಿಸಿದ ಗಾಳಪಟ ಹಾರಿಸುತ್ತಾರೆ. ಆಕಾಶದಲ್ಲಿ ಹಾರುವ ಬಣ್ಣ ಬಣ್ಣದ ಗಾಳಿಪಟಗಳು ಹಬ್ಬದ ಭಾವನೆಗೆ ಮತ್ತಷ್ಟು ರಂಗ ತುಂಬಿವೆ.

ಹಳ್ಳಿ ಸಂಸ್ಕೃತಿ ಪರಿಕಲ್ಪನೆ: ಈ ಹಬ್ಬ ಗ್ರಾಮಸ್ಥರಲ್ಲಿ ಒಗ್ಗಟ್ಟು, ಸಹಭಾಗಿತ್ವ ಮತ್ತು ಪರಸ್ಪರ ಗೌರವದ ಭಾವನೆಯನ್ನುಂಟು ಮಾಡುತ್ತದೆ. ಎಲ್ಲರೂ ಒಂದಾಗಿ ಹಬ್ಬ ಆಚರಿಸುವುದು ಇದರ ಮತ್ತೊಂದು ವಿಶೇಷತೆಯಾಗಿದೆ. ಕಾರಹುಣ್ಣಿಮೆ ಕೇವಲ ಹಬ್ಬವಲ್ಲ, ಅದು ಕೃಷಿ ಜೀವನದ ಪ್ರಾಮುಖ್ಯತೆಯನ್ನು, ಎತ್ತುಗಳ ಮೇಲಿನ ಗೌರವವನ್ನು ಮತ್ತು ಗ್ರಾಮೀಣ ಶ್ರದ್ಧೆ, ಸಂಸ್ಕೃತಿಯ ಸಮನ್ವಯವನ್ನು ಪ್ರತಿಬಿಂಬಿಸುತ್ತದೆ. ಇದು ಭವಿಷ್ಯದ ಪೀಳಿಗೆಗೆ ಹಳ್ಳಿಯ ಸಂಸ್ಕೃತಿಯ ಪರಿಕಲ್ಪನೆ ನೀಡುವ ಹಬ್ಬವಾಗಿದೆ ಎಂದು ಮಕ್ಕಳ ಸಾಹಿತಿ ಡಾ. ನಿಂಗು ಸೊಲಗಿ ಹೇಳಿದರು.

ಇಂದಿನ ಯಾಂತ್ರಿಕ ಜೀವನದಲ್ಲಿ ಗ್ರಾಮೀಣ ಹಬ್ಬಗಳ ಮಹತ್ವ ಹೆಚ್ಚಾಗಿದೆ. ಕಾರಹುಣ್ಣಿಮೆಯಂತಹ ಹಬ್ಬಗಳು ಹಳ್ಳಿ ಜೀವನದ ಶುದ್ಧತೆಯನ್ನು, ಸಹಜತೆಯನ್ನು ಹಾಗೂ ಸಹಜ ಸಾಮಾಜಿಕ ಸಂಸ್ಕೃತಿಯ ಬಿಂಬವಾಗಿವೆ. ಇಂತಹ ಹಬ್ಬಗಳನ್ನು ಉಳಿಸಿ, ಬೆಳೆಸುವುದು ನಮ್ಮ ಎಲ್ಲರ ಜವಾಬ್ದಾರಿ ಎಂದು ಯುವ ಮುಖಂಡ ಅಶೋಕ ಮಂದಾಲಿ ಹೇಳಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ