ಸುಬ್ರಹ್ಮಣ್ಯ ಪ್ರೌಢಶಾಲೆ, ವಿದ್ಯಾರ್ಥಿಗಳ ದತ್ತು ಸ್ವೀಕಾರ ಸಮಾರಂಭ ಉದ್ಘಾಟನೆ
ಇಂದು ಶಿಕ್ಷಣವನ್ನು ವ್ಯಾಪಾರದ ದೃಷ್ಟಿಯಿಂದ ನೋಡಲಾಗುತ್ತಿದೆ. ಈ ಕಾಲಘಟ್ಟದಲ್ಲಿ ಶಿಕ್ಷಣ ಸಂಸ್ಥೆಯನ್ನು ಉಳಿಸಿ-ಬೆಳೆಸುವ ಕೆಲಸವನ್ನು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಮಿತಿಯವರು ಮಾಡುತ್ತಿರುವುದು ಶ್ಲಾಘನೀಯ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.
ತಾಲೂಕಿನ ಮುಗ್ವಾದಲ್ಲಿ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ಆಡಳಿತದಲ್ಲಿರುವ ಶ್ರೀ ಸುಬ್ರಹ್ಮಣ್ಯ ಪ್ರೌಢಶಾಲೆಯ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳ ದತ್ತು ಸ್ವೀಕಾರ ಸಮಾರಂಭ ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು. ಇಂದು ಆಹಾರ ವಿಹಾರಗಳು ಮಕ್ಕಳನ್ನು ಚಂಚಲತೆಗೆ ಈಡು ಮಾಡುವ ಕಾಲಘಟ್ಟದಲ್ಲಿ ಇದ್ದೇವೆ. ಯೋಗ್ಯ ಶಿಕ್ಷಣ ನೀಡಬೇಕು. ಶಾಲೆಯಲ್ಲಿ ಒಳ್ಳೆಯತನ ಹೇಳಿಕೊಡಬೇಕು. ಸಂಸ್ಥೆಗೆ ಶಕ್ತಿ ತುಂಬುವ ಕೆಲಸವನ್ನು ನಾವೆಲ್ಲ ಮಾಡಬೇಕು ಎಂದರು.ಸಚಿವ ಮಂಕಾಳ ವೈದ್ಯ ಮಾತನಾಡಿ, ಶಿಕ್ಷಣಕ್ಕೆ ಕೊರತೆ ಆಗಬಾರದು. ಈ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು. ಶಾಲೆಗಳಿಗೆ ಸರ್ಕಾರದ ಸ್ಪಂದನೆ ಸರಿಯಾಗಿ ಆಗದೇ ಇರುವುದರಿಂದ ಶಾಲೆಗಳು ಮುಚ್ಚುವ ಪರಿಸ್ಥಿತಿ ಬಂದಿದೆ. ದೇವಸ್ಥಾನ ಜೊತೆಯಲ್ಲಿ ಶಾಲೆಯನ್ನು ಅಭಿವೃದ್ಧಿ ಮಾಡಿದಾಗ ಶಾಲೆಯು ಉಳಿದು ಬೆಳೆಯುತ್ತದೆ ಎಂದರು. ಶಾಸಕ ದಿನಕರ ಶೆಟ್ಟಿ ಮಾತನಾಡಿ, ಶಿಕ್ಷಣ ಸಂಸ್ಥೆ ನಡೆಸುವುದು ಸುಲಭವಲ್ಲ. ಆಡಳಿತ ಮಂಡಳಿಯವರು ಅತ್ಯಂತ ಜಾಗರೂಕತೆಯಿಂದ ಸಂಸ್ಥೆ ನಡೆಸಬೇಕು. ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದರು.
ಸಾರಿಗೆ ಉದ್ಯಮಿ ವೆಂಕಟ್ರಮಣ ಹೆಗಡೆ ಕವಲಕ್ಕಿ, ಗೋವಿಂದ ನಾಯ್ಕ, ಐ.ವಿ. ನಾಯ್ಕ, ವಿ.ಕೆ. ವಿಶಾಲ, ಸುರೇಶ ಶೆಟ್ಟಿ, ಡಾ. ರಮೇಶ ಗೌಡ, ಮುಖ್ಯಾಧ್ಯಾಪಕ ಯು.ಜಿ. ತಿಮ್ಮಪ್ಪ ಇತರರಿದ್ದರು.