ಮೇ ತಿಂಗಳಲ್ಲಿ ಹುಬ್ಬಳ್ಳಿಯಲ್ಲಿ ಪಶ್ಚಿಮ ಘಟ್ಟ ಉಳಿಸಿ ಬೃಹತ್‌ ಸಮಾವೇಶ

KannadaprabhaNewsNetwork |  
Published : Apr 18, 2026, 02:00 AM IST
ಅನಂತ ಹೆಗಡೆ ಆಶೀಸರ  | Kannada Prabha

ಸಾರಾಂಶ

ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆಯಿಂದ ಪಶ್ಚಿಮ ಘಟ್ಟದ 1 ಲಕ್ಷ ಎಕರೆ ಅರಣ್ಯ ನಾಶವಾಗಲಿದೆ. ಭಾರಿ ಪ್ರಮಾಣದಲ್ಲಿ ಭೂಕುಸಿತ ಕೂಡ ಆಗಲಿದೆ.

ಹುಬ್ಬಳ್ಳಿ:

ಬೇಡ್ತಿ- ಅಘನಾಶಿನಿ ನದಿ ತಿರುವು ಯೋಜನೆಗಳು ಪಶ್ಚಿಮ ಘಟ್ಟಕ್ಕೆ ಮಾರಕವಾಗಿವೆ. ಈ ನದಿಗಳ ಕೊಡುಗೆಗಳ ಬಗ್ಗೆ ಬಯಲು ಸೀಮೆ ಜನರಿಗೆ ಮನವರಿಕೆ ಮಾಡಲು ಮೇ ತಿಂಗಳಲ್ಲಿ ಸ್ವರ್ಣವಲ್ಲಿ ಶ್ರೀಗಳ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ "ಪಶ್ಚಿಮ ಘಟ್ಟ ಉಳಿಸಿ " ಬೃಹತ್‌ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.

ವಿದ್ಯುತ್‌ ಉತ್ಪಾದಿಸುವ ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಯಿಂದಲೂ ಪಶ್ಚಿಮ ಘಟ್ಟಕ್ಕೆ ಹಾನಿಯಾಗಲಿದೆ. ಇದಕ್ಕೂ ತಮ್ಮ ವಿರೋಧವಿದೆ ಎಂದು ಇದೇ ವೇಳೆ ಆಕ್ಷೇಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆಯಿಂದ ಪಶ್ಚಿಮ ಘಟ್ಟದ 1 ಲಕ್ಷ ಎಕರೆ ಅರಣ್ಯ ನಾಶವಾಗಲಿದೆ. ಭಾರಿ ಪ್ರಮಾಣದಲ್ಲಿ ಭೂಕುಸಿತ ಕೂಡ ಆಗಲಿದೆ. ರೈತರು, ಮೀನುಗಾರರು ನಿರಾಶ್ರಿತರಾಗಲಿದ್ದಾರೆ. ಈ ವಿಚಾರವಾಗಿ ಸಾಕಷ್ಟು ವೈಜ್ಞಾನಿಕ ಅಧ್ಯಯನ ಸಮಿತಿಗಳು ಸಮರ್ಪಕವಾದ ವರದಿ ನೀಡಿದ್ದು, ಈ ರೀತಿಯ ಬೃಹತ್ ಯೋಜನೆಗಳನ್ನು ಸಹ್ಯಾದ್ರಿ ಕಣಿವೆಗಳಿಗೆ ಹೇರಬಾರದು ಎಂದು ತಿಳಿಸಿವೆ. ಅಲ್ಲದೇ, ಪರಿಸರ ಸೂಕ್ಷ್ಮ ವಲಯದಲ್ಲಿ ಪರಿಸರಕ್ಕೆ ಮಾರಕವಾಗುವ ಯಾವುದೇ ಯೋಜನೆ ಅನುಷ್ಠಾನಗೊಳಿಸಲು ನಮ್ಮ ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಿದ್ದಾಗ್ಯೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕಾದ ಸರ್ಕಾರವೇ ಕಾನೂನು ಉಲ್ಲಂಘನೆ ಮಾಡುತ್ತಿರುವುದು ಖಂಡನಾರ್ಹ. ಪಶ್ಚಿಮ ಘಟ್ಟದ ನದಿ ಕಣಿವೆಗಳ ಸಂರಕ್ಷಣೆ ಸುಸ್ಥಿರ ಅಭಿವೃದ್ಧಿಗೆ ಕೇಂದ್ರ-ರಾಜ್ಯ ಸರ್ಕಾರ ವಿಶೇಷ ಸಮಗ್ರ ಯೋಜನೆ ಪ್ರಕಟಿಸಬೇಕು ಎಂದರು.

ವಿದ್ಯುತ್‌ ಯೋಜನೆಯಿಂದಲೂ ಹಾನಿ:

ವಿದ್ಯುತ್‌ ಉತ್ಪಾದಿಸುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಇದು ಸರಿಯಲ್ಲ. ಈಗಾಗಲೇ ಕೇಂದ್ರ ವನ್ಯಜೀವಿ ಮಂಡಳಿಯ ವಿಜ್ಞಾನಿಗಳು ಖುದ್ದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಶರಾವತಿ ಕೊಳ್ಳ ಪ್ರದೇಶದಲ್ಲಿ ಅಪರೂಪವಾದ ವನ್ಯಧಾಮವಾಗಿದ್ದು, ಯಾವುದೇ ಕಾರಣಕ್ಕೂ ಇಲ್ಲಿ ಯೋಜನೆ ಅನುಷ್ಠಾಗೊಳಿಸಬಾರದು. ಅನುಷ್ಠಾನವಾದರೆ ಪರಿಸರ ಮತ್ತು ಸ್ಥಳೀಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ವರದಿ ನೀಡಿದೆ. ಆದರೂ ರಾಜ್ಯ ಸರ್ಕಾರ ಅನುಷ್ಠಾನಕ್ಕೆ ಮುಂದಾಗಿದೆ ಎಂದು ಕಿಡಿಕಾರಿದರು.

ಪಶ್ಚಿಮ ಘಟ್ಟಕ್ಕೆ ಪೆಟ್ಟು:

ಪರ್ಯಾವರಣ ಅಧ್ಯಕ್ಷ ಪ್ರೊ. ಬಿ.ಎಂ. ಕುಮಾರಸ್ವಾಮಿ ಮಾತನಾಡಿ, 2 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಪಶ್ಚಿಮ ಘಟ್ಟದ ಶರಾವತಿ ನದಿ ನೀರು ಪುನರ್‌ ಬಳಕೆಗೆ ಶರಾವತಿ ಪಂಪ್ಡ್ ಸ್ಟೋರೆಜ್‌ ಯೋಜನೆ ರೂಪಿಸಲಾಗಿದೆ. ಶರಾವತಿ ನದಿಗೆ 7 ಡ್ಯಾಂ ನಿರ್ಮಿಸಿದ್ದು, ಇದಕ್ಕೆ 18 ಸಾವಿರ ಮರಗಳ ಮಾರಣ ಹೋಮ ಮಾಡಲಾಗಿದೆ. ಈ ಯೋಜನೆಗೆ ಮತ್ತೆ 16 ಸಾವಿರ ಮರ ಬಲಿಯಾಗಲಿವೆ. ಯಾವುದೇ ಅನುಮತಿ ಪಡೆಯದೇ 18 ಸಾವಿರ ಟನ್ ಜಿಲೆಟಿನ್ ಎಕ್ಸ್‌ಪ್ಲೋರ್ ಮಾಡಲಾಗುತ್ತಿದೆ. ಇದರಿಂದ ಶರಾವತಿ ನದಿ ಕಣಿವೆಗೆ ಧಕ್ಕೆ ಉಂಟಾಗುವ ಜತೆಗೆ ಪಶ್ಚಿಮ ಘಟ್ಟಕ್ಕೆ ದೊಡ್ಡ ಪೆಟ್ಟು ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾನೂನು ಹೋರಾಟ:

ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಮಾತನಾಡಿ, ಕಾನೂನಿನಲ್ಲಿ ವನ್ಯಧಾಮ ಸಂರಕ್ಷಿತ ಪ್ರದೇಶದಲ್ಲಿ ಯೋಜನೆ ಅನುಷ್ಠಾನಕ್ಕೆ ಯಾವುದೇ ಅವಕಾಶ ಇಲ್ಲ. ಈಗಾಗಲೇ ಸಾಕಷ್ಟು ವಿಜ್ಞಾನಿಗಳ ಸಮಿತಿ ವರದಿಗಳನ್ನು ಸಹ ನೀಡಿದ್ದು, ಇದನ್ನು ಧಿಕ್ಕರಿಸಿ ಸರ್ಕಾರ ಶರಾವತಿ ಪಂಪ್ಡ್‌ ಸ್ಟೋರೇಜ್ ಯೋಜನೆ ಅನುಷ್ಠಾನಕ್ಕೆ ಮುಂದಾದರೆ ಕಾನೂನು ಹೋರಾಟದ ಮೊರೆ ಹೋಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮೇ ತಿಂಗಳಲ್ಲಿ ಕೇಂದ್ರಕ್ಕೆ ನಿಯೋಗ ಕೊಂಡೊಯ್ಯಲು ನಿರ್ಧರಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವನ್ಯಜೀವಿ ಕಾನೂನು ತಜ್ಞ ಗಿರಿಧರ ಕುಲಕರ್ಣಿ, ವರದಶ್ರೀ ಪ್ರತಿಷ್ಠಾನದ ಅಧ್ಯಕ್ಷ ಮಲ್ಲಿಕಾರ್ಜುನ ರಡ್ಡೇರ, ನರಸಿಂಹ ಸಾತೋಡಿ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನರ ನೈಜ ನಂಬಿಕೆ, ಸಂಸ್ಕೃತಿ ಪ್ರತಿಬಿಂಬಿಸುವ ಸಾಹಿತ್ಯ: ಡಾ. ವೀರೇಂದ್ರ ಪಾಲ್
ಹಿಮೋಫಿಲಿಯಾ ಬಗ್ಗೆ ಭಯ ಬೇಡ: ಡಾ. ರಾಜೇಂದ್ರ ಗಡಾದ