ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸದಿರಿ: ಡೀಸಿ ರವೀಂದ್ರ

KannadaprabhaNewsNetwork |  
Published : Jun 29, 2024, 12:38 AM IST
ಸಿಕೆಬಿ- 2 ಚಿಕ್ಕಬಳ್ಳಾಪುರ   ತಾಲೂಕು ಜನತಾ ದರ್ಶನದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು | Kannada Prabha

ಸಾರಾಂಶ

ಇಂದಿನ ಜನಸ್ಪಂದನದಲ್ಲಿ 52 ಅರ್ಜಿಗಳು ಬಂದಿದ್ದು, ಈ ಪೈಕಿ 40 ಕಂದಾಯ ಇಲಾಖೆ, 10 ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ಒಂದು ಬೆಸ್ಕಾಂ ಮತ್ತು ಒಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಗೆ ಸಂಬಂಧಿಸಿದ ಅರ್ಜಿಗಳಾಗಿವೆ. ಈ ಅರ್ಜಿಗಳನ್ನು ‌ನಿಗದಿತ ಕಾಲಮಿತಿಯೊಳಗೆ ಕಡ್ಡಾಯವಾಗಿ ಇತ್ಯರ್ಥಪಡಿಸಿ ಜಿಲ್ಲಾಡಳಿತಕ್ಕೆ ವರದಿ ನೀಡಬೇಕು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವಿವಿಧ ಇಲಾಖೆ ಅಧಿಕಾರಿಗಳು ತಾಲೂಕು ಹಂತದಲ್ಲೇ ರೈತರು ಮತ್ತಿತರ ಸಾರ್ವಜನಿಕರ ಸಮಸ್ಯೆಗಳ ಅರ್ಜಿಗಳನ್ನು ನಿಗದಿತ ಕಾಲಮಿತಿಯೊಳಗೆ ಇತ್ಯರ್ಥಪಡಿಸಬೇಕು. ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಪದೇ ಪದೇ ಅಲೆಯುವುದನ್ನು ತಪ್ಪಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ನಿರ್ದೇಶನ ನೀಡಿದರು.

ಚಿಕ್ಕಬಳ್ಳಾಪುರ ತಾಪಂ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಮುಗಿಸಿಕೊಂಡು ಸೋಮವಾರದಂದು ತಾಲೂಕು ಕಚೇರಿ, ಕೃಷಿ,ತೋಟಗಾರಿಕೆ ಸೇರಿ ವಿವಿಧ ಇಲಾಖೆಗಳಿಗೆ ಬರುತ್ತಾರೆ. ಅಧಿಕಾರಗಳು ಮತ್ತು ನೌಕರ ಸಿಬ್ಬಂದಿ ಅನಗತ್ಯ ರಜೆ ಹಾಕದೇ ಹಾಜರಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಮತ್ತು ಪರಿಹಾರೋಪಾಯಗಳನ್ನು ಸೂಚಿಸಬೇಕು. ಆಯಾ ಇಲಾಖೆಗಳ ಮಟ್ಟದಲ್ಲಿಯೇ ಅರ್ಜಿಗಳು ವಿಲೇವಾರಿಯಾದರೆ ಜನಸ್ಪಂದನ ಕಾರ್ಯಕ್ರಮಕ್ಕೆ ರೈತರು,ಸಾರ್ವಜನಿಕರು ಅರ್ಜಿ ಹಿಡಿದು ಬರುವ ಅಗತ್ಯವೇ ಬರುವುದಿಲ್ಲ. ಈ ಬಗ್ಗೆ ಗಂಭೀರವಾಗಿ ಗಮನ ಹರಿಸಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಬೇಕು ಎಂದು ಸಲಹೆ ನೀಡಿದರು.

ಇಂದಿನ ಜನಸ್ಪಂದನದಲ್ಲಿ 52 ಅರ್ಜಿಗಳು ಬಂದಿದ್ದು, ಈ ಪೈಕಿ 40 ಕಂದಾಯ ಇಲಾಖೆ, 10 ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ಒಂದು ಬೆಸ್ಕಾಂ ಮತ್ತು ಒಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಗೆ ಸಂಬಂಧಿಸಿದ ಅರ್ಜಿಗಳಾಗಿವೆ. ಈ ಅರ್ಜಿಗಳನ್ನು ‌ನಿಗದಿತ ಕಾಲಮಿತಿಯೊಳಗೆ ಕಡ್ಡಾಯವಾಗಿ ಇತ್ಯರ್ಥಪಡಿಸಿ ಜಿಲ್ಲಾಡಳಿತಕ್ಕೆ ವರದಿ ನೀಡಬೇಕು ಎಂದು ಸೂಚಿಸಿದರು.

ವಿಶೇಷ ಪ್ರಕರಣ ಇತ್ಯರ್ಥ:

ಅಂಧ, ವಿಕಲಚೇತನರ ಮಾಸಾಶನಕ್ಕೆ ಸಂಬಂಧಪಟ್ಟ ಅರ್ಜಿಯನ್ನು ಪರಿಶೀಲಿಸಿ, ಸ್ಥಳದಲ್ಲೇ ಲೀಡ್ ಬ್ಯಾಂಕ್ ಮುಖ್ಯಸ್ಥರಿಗೆ ಸೂಚನೆ ನೀಡಿ ಜಿಲ್ಲಾಧಿಕಾರಿಗಳು ಇತ್ಯರ್ಥ ಪಡಿಸಿದರು. ಇನ್ನುಳಿದ 51 ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ವರ್ಗಾಯಿಸಿ, ಕಾಲ ಮಿತಿಯೊಳಗೆ ಇತ್ಯರ್ಥಪಡಿಸಲು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.

ಸ್ಮಶಾನಕ್ಕಾಗಿ ಭೂಮಿ, ಒತ್ತುವರಿ ತೆರವು, ದಾರಿಗೆ ಅರ್ಜಿ, ಬಂಡಿ ದಾರಿಗೆ ಅರ್ಜಿ, ನಕಾಶೆಯಲ್ಲಿದ್ದ ದಾರಿಗಳಿಗೆ ಅರ್ಜಿ, ಜಮೀನಿನ ವಿವಾದಗಳ ಅರ್ಜಿ, ನಿವೇಶನಕ್ಕಾಗಿ , ಮನೆಗಳ ನಿರ್ಮಾಣಕ್ಕೆ ಅರ್ಜಿ, ಜನತಾ ದರ್ಶನದಲ್ಲಿ ಸ್ವೀಕರಿಸಿ ವಿಲೇವಾರಿಗೆ ಸೂಕ್ತ ಕ್ರಮ ವಹಿಸಲಾಯಿತು. ಒಟ್ಟಾರೆ ಜನತಾ ದರ್ಶನದಲ್ಲಿ 52 ಅರ್ಜಿಗಳ ಇತ್ಯರ್ಥಕ್ಕೆ ಅಗತ್ಯ ಕ್ರಮವಹಿಸಲಾಯಿತು.

ಜನತಾ ದರ್ಶನದಲ್ಲಿ ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ತಹಸೀಲ್ದಾರ್ ಅನಿಲ್, ತಾಪಂ ಸಿಇಒ ಮಂಜುನಾಥ್, ಉಪ ವಿಭಾಗದ ಡಿವೈಎಸ್ಪಿ ಎಸ್.ಶಿವಕುಮಾರ್ ಸೇರಿ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಪ್ರತಿ ಶುಕ್ರವಾರ ಈಡಿಸ್ ಸೊಳ್ಳೆ ನಾಶ ಮಾಡುವ ದಿನ: ಡೀಸಿ

ಗ್ರಾಪಂ ಪಿಡಿಒಗಳು ಗ್ರಾಮಗಳ ಮೂಲಭೂತ ಅಗತ್ಯಗಳ ಕೊರತೆಗಳ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಬೇಕು, ಚರಂಡಿಗಳ ಸ್ವಚ್ಛತೆ ಹಾಗೂ ಪ್ಲಾಸ್ಟಿಕ್ ನಿಯಂತ್ರಣ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಮೂಲಕ ಗ್ರಾಮಗಳ ಸ್ವಚ್ಛತೆಗೆ ಒತ್ತು ನೀಡಬೇಕು. ‘ಪ್ರತಿ ಶುಕ್ರವಾರ ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಮಾಡುವ ದಿನ’ವನ್ನಾಗಿ ಆಚರಣೆ ಮಾಡಬೇಕು. ಈ ದಿನದ ಅಂಗವಾಗಿ ಇಂದು ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ವಾರ್ಡ್ ನಲ್ಲಿ ‘ಸಮುದಾಯದೊಂದಿಗೆ ಸೇರಿ ಡೆಂಘೀ ಜ್ವರವನ್ನು ನಿಯಂತ್ರಿಸೋಣ’ ಎಂಬ ಘೋಷ ವಾಕ್ಯದೊಂದಿಗೆ ಅರಿವು ಮೂಡಿಸಲಾಯಿತು. ಸಾರ್ವಜನಿಕರು ತಮ್ಮ ಸುತ್ತಮುತ್ತಲ ಸ್ವಚ್ಛತೆ ಕಾಪಾಡಿಕೊಳ್ಳುವುದನ್ನು ಕಡಿಮೆ ಮಾಡಬಾರದು. ಸತತವಾಗಿ ಮಳೆ ಬರುತ್ತಿರುವುದರಿಂದ ಅಲ್ಲಲ್ಲಿ ನೀರು ಸಂಗ್ರಹವಾಗುತ್ತಿದ್ದು, ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಡೆಂಘೀ, ಚಿಕುನ್ ಗುನ್ಯ ನಿಯಂತ್ರಿಸಲು ಮೊದಲು ಮನೆಯ ನೀರಿನ ತೊಟ್ಟಿ, ಬ್ಯಾರಲ್, ಚಿಪ್ಪು, ಬಾಟಲ್‌ಗಳಲ್ಲಿನ ನೀರನ್ನು ತೆರವುಗೊಳಿಸಬೇಕು ಎಂದರು.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ