ಮಳೆಹಾನಿ ವರದಿ ಸಲ್ಲಿಸುವಾಗ ತಪ್ಪಾಗಬಾರದು: ಶಾಸಕ ಗೋಪಾಲಕೃಷ್ಣ ಬೇಳೂರು

KannadaprabhaNewsNetwork |  
Published : Aug 04, 2024, 01:26 AM IST
ಮಳೆಹಾನಿ ಪರಿಶೀಲನಾ ಸಭೆ ನಡೆಯಿತು. | Kannada Prabha

ಸಾರಾಂಶ

ಸಾಗರದ ಪ್ರವಾಸಿ ಮಂದಿರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅಧ್ಯಕ್ಷತೆಯಲ್ಲಿ ಮಳೆಹಾನಿ ಪರಿಶೀಲನಾ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಸಾಗರ

ವಿಪರೀತ ಮಳೆಯಿಂದಾಗಿ ತಾಲೂಕಿನಲ್ಲಿ ಸಾಕಷ್ಟು ಅವಾಂತರಗಳಾಗಿದ್ದು, ಹಾನಿಯ ವರದಿ ಬಂದಕೂಡಲೇ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಈ ವ್ಯವಸ್ಥೆ ಪಂಚಾಯತಿ ಮಟ್ಟದಿಂದಲೂ ನಡೆಯಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸೂಚಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿವಿಧ ಇಲಾಖೆಗಳ ಮಟ್ಟದಲ್ಲಿ ನಡೆದ ಮಳೆಹಾನಿ ಕುರಿತು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನರಿಗೆ ಯಾವುದೇ ತೊಂದರೆಯಾಗದAತೆ ಎಲ್ಲ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ತಾಕೀತು ಮಾಡಿದರು.

ಗಾಳಿ- ಮಳೆಯಿಂದಾಗಿ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು ೧೦೦ ಮನೆಗಳಿಗೆ ಹಾನಿಯಾಗಿದ್ದು, ೨ ಜಾನುವಾರುಗಳು ಮೃತಪಟ್ಟಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹಾಗೆಂದು ನಾವ್ಯಾರೂ ಮೈಮರೆಯದೆ ಮಳೆಗಾಲ ಮುಗಿಯುವವರೆಗೂ ಎಚ್ಚರಿಕೆಯಿಂದ ಕೆಲಸ ಮಾಡಬೇಕಿದೆ. ನಿತ್ಯವೂ ಮಳೆಯಿಂದ ಆಗುತ್ತಿರುವ ಅನಾಹುಗಳ ವರದಿಯನ್ನು ಪ್ರತಿ ಪಂಚಾಯತಿ ಮಟ್ಟದಿಂದಲೂ ಸಂಗ್ರಹಿಸಿ, ತಾಲೂಕು ಪಂಚಾಯ್ತಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ತಲುಪಿಸುವ ವ್ಯವಸ್ಥೆ ರೂಢಿಸಿಕೊಳ್ಳಬೇಕು. ಅನಾಹುತ ಸಂಭವಿಸಿದ ಪ್ರತಿ ಸ್ಥಳಕ್ಕೂ ನಾನು ಭೇಟಿ ನೀಡುತ್ತೇನೆ. ಸಾರ್ವಜನಿಕರಿಗೆ ಆಗಿರುವ ನೈಜ ಹಾನಿಯ ವಿವರವನ್ನು ಸರ್ಕಾರಕ್ಕೆ ಸಲ್ಲಿಸುವ ಕೆಲಸ ಮಾಡಬೇಕು. ಸರ್ಕಾರಕ್ಕೆ ಸಮಗ್ರ ಮಳೆ ಹಾನಿಯ ವರದಿ ಸಲ್ಲಿಸುವ ಕ್ರಮದಲ್ಲಿ ತಪ್ಪಾಗಬಾರದು ಎಂದು ಖಡಕ್ ಸೂಚನೆ ನೀಡಿದರು.

ಮಳೆಯಿಂದ ಹಾನಿಗೊಳಗಾದ ರಸ್ತೆಗಳು, ಅಂಗನವಾಡಿ, ಕಟ್ಟಡ, ಶಾಲಾ ಕಟ್ಟಡಗಳ ಬಗ್ಗೆ ಸಂಪೂರ್ಣ ವರದಿ ನೀಡಬೇಕು. ಪ್ರವಾಹ ಪೀಡಿತ ಪ್ರದೇಶಗಳು, ನೆರೆ ಸಂಭವವಿರುವ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಬೇಕು. ಮುಖ್ಯವಾಗಿ ವಿದ್ಯಾರ್ಥಿಗಳಿಗೆ, ಅಂಗನವಾಡಿ ಮಕ್ಕಳ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಿ ಅಧಿಕಾರಿಗಳು ಕೆಲಸ ಮಾಡಬೇಕು.

ಮಳೆ ಹಾನಿಗೆ ನೀಡುವ ಪರಿಹಾರದ ಕುರಿತು ಮಾತನಾಡಿದ ಶಾಸಕರು, ರಾಜ್ಯ ಸರ್ಕಾರವು ನೆರೆಹಾನಿ ಪರಿಹಾರವನ್ನು ಪರಿಷ್ಕರಿಸಿದ್ದು, ಸಂಪೂರ್ಣವಾಗಿ ಹಾನಿ ಯಾಗಿರುವ ಮನೆಗಳಿಗೆ ನೀಡುವ ಪರಿಹಾರದ ಮೊತ್ತವನ್ನು ಸಾಮಾನ್ಯ ವರ್ಗದವರಿಗೆ ೧.೨೦ ಲಕ್ಷ ಹಾಗೂ ಎಸ್ಸಿ-ಎಸ್ಟಿಯವರಿಗೆ ೧.೫೦ ಲಕ್ಷ, ಅನಧಿಕೃತ ಮನೆ ಹಾನಿಗೆ ರೂ. ೫೦ ಸಾವಿರ ನಿಗದಿಪಡಿಸಿದೆ. ತಕ್ಷಣಕ್ಕೆ ಬಟ್ಟೆಬರೆ ಕೊಳ್ಳಲು ರು. ೨೫೦೦ ಹಾಗೂ ಪಾತ್ರೆ ಖರೀದಿಗೆ ೨೫೦೦ ರು. ನೀಡಲಾಗುತ್ತದೆ. ಸರ್ಕಾರದ ಈ ಕ್ರಮದಿಂದ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ತಹಶಿಲ್ದಾರ್ ಚಂದ್ರಶೇಖರ್ ನಾಯಕ್, ತಾಪಂ ಕಾರ್ಯನಿರ್ವಹಣಾಧಿಕಾರಿ ಗುರುಕೃಷ್ಣ ಶೆಣೈ, ನಗರಸಭೆ ಆಯುಕ್ತ ಹೆಚ್.ಕೆ.ನಾಗಪ್ಪ, ಶಾಸಕರ ವಿಶೇಷ ಅಧಿಕಾರಿ ಟಿ.ಪಿ.ರಮೇಶ್ ಮತ್ತು ಮೆಸ್ಕಾಂ, ಕೃಷಿ, ತೋಟಗಾರಿಕೆ, ಪಂಚಾಯತ್ರಾಜ್, ಲೋಕೋಪಯೋಗಿ, ಕಂದಾಯ, ಸಣ್ಣ ನೀರಾವರಿ ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ