ಜನರನ್ನು ಸರ್ಕಾರಿ ಕಚೇರಿಗೆ ಅಲೆದಾಡಿಸಬೇಡಿ: ಸಿಪಿ ಯೋಗೇಶ್ವರ್

KannadaprabhaNewsNetwork | Published : Jan 8, 2025 12:15 AM

ಸಾರಾಂಶ

ಶಾಸಕ ಸಿ.ಪಿ.ಯೋಗೇಶ್ವರ್ ಪಟೇಲರ ದೊಡ್ಡಿ ಸರಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳ ಜೊತೆ ಕಾಲ ಕಳೆದರು. ಶಾಲೆಯ ಕಟ್ಟಡ ತೀರಾ ಹಳೆಯದಾಗಿರುವ ಕಾರಣ ದುರಸ್ತಿ ಕೈಗೊಳ್ಳಲಾಗಿತ್ತು. ಕಲಿಕೆಗಾಗಿ ಮಕ್ಕಳಿಗೆ ಪಕ್ಕದಲ್ಲಿನ ಅಂಗನವಾಡಿಯಲ್ಲಿ ತರಗತಿಗಳು ನಡೆಯುತ್ತಿರುವ ವಿಚಾರ ತಿಳಿದು ಅಲ್ಲಿಗೆ ತೆರಳಿದ ಶಾಸಕರು ದುರಸ್ತಿ ಕಾರ್ಯ ವೀಕ್ಷಿಸುವುದರ ಜೊತೆಗೆ ಮಕ್ಕಳ ಜತೆ ಕೆಲ ಹೊತ್ತು ಕಾಲ ಕಳೆದರು. ಇದೇ ವೇಳೆ ಬಿಸಿಯೂಟ, ವಿದ್ಯಾಭ್ಯಾಸದ ಬಗ್ಗೆ ಮಾಹಿತಿ ಪಡೆದರು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಕಾಲಕಾಲಕ್ಕೆ ಜನಸಂಪರ್ಕ ಸಭೆ, ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಿ ಜನರ ಅಹವಾಲು ಆಲಿಸಿದ್ದರೆ ಜನ ಇಂದು ಇಷ್ಟೊಂದು ಸಮಸ್ಯೆಗಳನ್ನು ಹೊತ್ತು ತರುತ್ತಿರಲಿಲ್ಲ. ಇನ್ನು ಮುಂದಾದರೂ ಅಧಿಕಾರಿಗಳು ಆದ್ಯತೆಯ ಮೇಲೆ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ವಹಿಸಬೇಕು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಾಕೀತು ಮಾಡಿದರು.

ತಾಲೂಕಿನ ಬೇವೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮಾಕಳಿ, ದಶವಾರ, ನಾಗವಾರ ಹಾಗೂ ಬೇವೂರು ಗ್ರಾಮ ಪಂಚಾಯಿತಿಗಳಲ್ಲಿ ಇ- ಸ್ವತ್ತು ಆಂದೋಲನ ಹಾಗೂ ಸಾರ್ವಜನಿಕರ ಕುಂದುಕೊರತೆ, ಅಹವಾಲು ಸಲ್ಲಿಕೆಯ ಎರಡನೇ ದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಾರ್ವಜನಿಕರ ಸಮಸ್ಯೆ ಆಲಿಸಿದ ಅವರು ಮಾತನಾಡಿದರು.

ಎರಡು ದಿನದಿಂದ ನಡೆಸುತ್ತಿರುವ ಕುಂದುಕೊರತೆ ಸಭೆಯಲ್ಲಿ ಜನ ಸಾಕಷ್ಟು ಸಮಸ್ಯೆಗಳನ್ನು ಹೊತ್ತು ತರುತ್ತಿದ್ದಾರೆ. ಇವುಗಳಲ್ಲಿ ಕೆಲವು ಸಣ್ಣಪುಟ್ಟ ಸಮಸ್ಯೆಗಳಾಗಿದ್ದು, ಅಧಿಕಾರಿಗಳು ಸ್ವಲ್ಪ ಗಮನಹರಿಸಿದರೆ, ತಮ್ಮ ಹಂತದಲ್ಲೇ ಪರಿಹರಿಸಬಹುದಾಗಿದೆ. ಇನ್ನಾದರೂ ಅಧಿಕಾರಿಗಳು ಜನರನ್ನು ಕಚೇರಿಗೆ ಅಲೆದಾಡಿಸುವುದನ್ನು ಬಿಟ್ಟು ಜನ ಕೆಲಸಗಳನ್ನು ತ್ವರಿತವಾಗಿ ಮಾಡಲು ಕಾರ್ಯಪ್ರವೃತರಾಗಬೇಕು ಎಂದು ಸೂಚಿಸಿದರು.

ಕಳೆದ ಆರೇಳು ವರ್ಷಗಳಿಂದ ಕ್ಷೇತ್ರದ ಜನಪ್ರತಿನಿಧಿಯಾದವರು ಗ್ರಾಮ ಪಂಚಾಯಿತಿ ಮಟ್ಟಕ್ಕೆ ತೆರಳಿ ಸಮಸ್ಯೆಗಳನ್ನು ಆಲಿಸಿದ ಪರಿಣಾಮ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಹತ್ತಾರು ಸಮಸ್ಯೆಗಳನ್ನು ಹೇಳಿಕೊಂಡು ನಮ್ಮ ಬಳಿ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆಲ್ಲಾ ಪುಲ್‌ಸ್ಟಾಪ್ ಇಡುವ ಕೆಲಸವನ್ನು ಅಧಿಕಾರಿ ವರ್ಗ ಮಾಡಲೇಬೇಕು ಎಂದು ತಾಕೀತು ಮಾಡಿದರು.

ಮಾಕಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಲ್ಕು ಸಾವಿರ ಎಕರೆಗೂ ಹೆಚ್ಚು ರೈತರ ಭೂಮಿಗೆ ಪಹಣಿ ಇಲ್ಲದಿರುವ ಬಗ್ಗೆ ಅಲ್ಲಿನ ರೈತ ಸಮುದಾಯ ಗಮನಕ್ಕೆ ತರುತ್ತಿದ್ದಂತೆ ಅರಣ್ಯಾಧಿಕಾರಿಗಳನ್ನು ಕರೆಸಿ ಚರ್ಚೆ ನಡೆಸಿದ ಶಾಸಕರು ಹಲವು ವರ್ಷಗಳಿಂದ ರೈತರು ಅನುಭವಿಸುತ್ತಿರುವ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.

ಶಾಲಾ ಕಟ್ಟಡಕ್ಕೆ ಭೂಮಿಪೂಜೆ:

ಇದೇ ವೇಳೆ ಮಾಕಳಿ ಗ್ರಾಮದಲ್ಲಿ ಟೊಯೋಟ ಸಂಸ್ಥೆಯ ಸಿಎಸ್‌ಆರ್ ನಿಧಿಯಲ್ಲಿ ನಿರ್ಮಾಣಗೊಳ್ಳಲಿರುವ ಸರಕಾರಿ ಶಾಲಾ ಕಟ್ಟಡ ಕಾಮಗಾರಿಯ ಗುದ್ದಲಿಪೂಜೆಯನ್ನು ಶಾಸಕ ಸಿ.ಪಿ.ಯೋಗೆಶ್ವರ್ ನೆರವೇರಿಸಿದರು. ಈಗಾಗಲೇ ತಾಲೂಕಿನ ಹಲವು ಕಡೆಗಳಲ್ಲಿ ಸುಸಜ್ಜಿತವಾದ ಶಾಲೆಗಳನ್ನು ನಿರ್ಮಿಸಲಾಗಿದ್ದು, ಇದರೊಟ್ಟಿಗೆ ಇನ್ನಷ್ಟು ಸಂಸ್ಥೆಗಳ ಸಹಕಾರ ಪಡೆದು ಸರಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ತಾಪಂ ಇಒ ಸಂದೀಪ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಲಿಂಗಯ್ಯ ಸೇರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಮುಖಂಡರು ಹಾಜರಿದ್ದರು.

ಶಾಲಾ ಮಕ್ಕಳ ಜತೆ ಕಾಲ ಕಳೆದ ಸಿಪಿವೈ

ಇದೇ ವೇಳೆ ಶಾಸಕ ಸಿ.ಪಿ.ಯೋಗೇಶ್ವರ್ ಪಟೇಲರ ದೊಡ್ಡಿ ಸರಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳ ಜೊತೆ ಕಾಲ ಕಳೆದರು.

ಶಾಲೆಯ ಕಟ್ಟಡ ತೀರಾ ಹಳೆಯದಾಗಿರುವ ಕಾರಣ ದುರಸ್ತಿ ಕೈಗೊಳ್ಳಲಾಗಿತ್ತು. ಕಲಿಕೆಗಾಗಿ ಮಕ್ಕಳಿಗೆ ಪಕ್ಕದಲ್ಲಿನ ಅಂಗನವಾಡಿಯಲ್ಲಿ ತರಗತಿಗಳು ನಡೆಯುತ್ತಿರುವ ವಿಚಾರ ತಿಳಿದು ಅಲ್ಲಿಗೆ ತೆರಳಿದ ಶಾಸಕರು ದುರಸ್ತಿ ಕಾರ್ಯ ವೀಕ್ಷಿಸುವುದರ ಜೊತೆಗೆ ಮಕ್ಕಳ ಜತೆ ಕೆಲ ಹೊತ್ತು ಕಾಲ ಕಳೆದರು. ಇದೇ ವೇಳೆ ಬಿಸಿಯೂಟ, ವಿದ್ಯಾಭ್ಯಾಸದ ಬಗ್ಗೆ ಮಾಹಿತಿ ಪಡೆದರು.

Share this article