ಭಯಪಡಬೇಡಿ, ಸರ್ಕಾರ ಸಮಸ್ಯೆಗೆ ಸ್ಪಂದಿಸಲಿದೆ

KannadaprabhaNewsNetwork |  
Published : Sep 29, 2025, 03:02 AM IST
ಪ್ರವಾಹಪೀಡಿತ ಸ್ಥಳಗಳಿಗೆ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಭೇಟಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಯಾರು ಭಯಪಡುವ ಅವಶ್ಯಕತೆ ಇಲ್ಲ, ಸರ್ಕಾರ ಹಾಗೂ ಜಿಲ್ಲಾಡಳಿತ ನಿಮ್ಮೊಂದಿಗಿದ್ದು, ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಲ್ಪಿಸಲಿದೆ. ಪ್ರವಾಹದಿಂದ ಹಾನಿಗೊಳಗಾದ ಬೆಳೆ, ಮನೆ ಹಾನಿಯನ್ನು ಸಮಗ್ರವಾಗಿ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ತಿಳಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಯಾರು ಭಯಪಡುವ ಅವಶ್ಯಕತೆ ಇಲ್ಲ, ಸರ್ಕಾರ ಹಾಗೂ ಜಿಲ್ಲಾಡಳಿತ ನಿಮ್ಮೊಂದಿಗಿದ್ದು, ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಲ್ಪಿಸಲಿದೆ. ಪ್ರವಾಹದಿಂದ ಹಾನಿಗೊಳಗಾದ ಬೆಳೆ, ಮನೆ ಹಾನಿಯನ್ನು ಸಮಗ್ರವಾಗಿ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ತಿಳಿಸಿದರು.

ಪ್ರವಾಹ ಪೀಡಿತ ಜಿಲ್ಲೆಯ ಸಿಂದಗಿ ಹಾಗೂ ಇಂಡಿ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದ ಸಂತ್ರಸ್ತರ ಅಹವಾಲುಗಳನ್ನು ಆಲಿಸಿದರು. ಕುಮಸಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ, ಕಾಳಜಿ ಕೇಂದ್ರಗಳಲ್ಲಿ ಕಲ್ಪಿಸಿರುವ ಸೌಲಭ್ಯಗಳ ಕುರಿತು ಪರಿಶೀಲಿಸಿದರು. ಪ್ರವಾಹದಿಂದ ಹಾನಿಗೊಳಗಾದ ಕೃಷಿ, ತೋಟಗಾರಿಕೆ ಸೇರಿದಂತೆ ಬೆಳೆಗಳ ಸಮಗ್ರ ಸಮೀಕ್ಷೆಗೆ ಈಗಾಗಲೇ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮನೆ ಹಾನಿಗೊಳಗಾದವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲು ಕ್ಷೇತ್ರದ ಶಾಸಕರ ಸಹಯೋಗದೊಂದಿಗೆ ಕ್ರಮ ವಹಿಸುವುದಾಗಿ ತಿಳಿಸಿದರು.

ಪ್ರವಾಹ ಪರಿಸ್ಥಿತಿಯಿಂದ ಹತ್ತಿ, ಈರುಳ್ಳಿ, ತೊಗರಿ ಬೆಳೆ ಸಂಪೂರ್ಣ ನಾಶವಾಗಿದೆ. ಈ ಭಾಗದಲ್ಲಿ ಕಬ್ಬು ಬೆಳೆ ಕೂಡ ಶೇ.50 ರಷ್ಟು ನಾಶವಾಗಿದೆ. ಕ್ಷೇತ್ರದ ಶಾಸಕರಾದಿಯಾಗಿ, ಜಿಲ್ಲಾಡಳಿತ ಜನರ ಕಷ್ಟ-ನೋವುಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸುತ್ತಿದೆ. ಮುಖ್ಯಮಂತ್ರಿಗಳು ಸಹ ಶೀಘ್ರದಲ್ಲೇ ಪ್ರವಾಹ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯ ಆಲಮೇಲ ತಾಲೂಕಿನ ದೇವರನಾವದಗಿ ಗ್ರಾಮದ ರೈತ ಬಸಪ್ಪ ಪೂಜಾರಿ ಅವರ ಜಮೀನಿನಲ್ಲಿ ಈರುಳ್ಳಿ ಬೆಳೆ ಹಾನಿ ವೀಕ್ಷಣೆ, ಶರಣಪ್ಪ ಯರಗಲ ಅವರ ಕಬ್ಬು ಹಾನಿ ಹಾಗೂ ದೇವಣಗಾಂವ ಗ್ರಾಮದ ಬಳಿ ಹೊಲದಲ್ಲಿ ನಿಂತಿರುವ ನೀರನ್ನು ಸಚಿವರು ವೀಕ್ಷಿಸಿದರು. ಜಿಲ್ಲೆಯ ದೇವಣಗಾಂವ ಗ್ರಾಮದ ಬಳಿ ಸೇತುವೆಗೆ ಭೇಟಿ ನೀಡಿ, ವೀಕ್ಷಿಸಿದ ಸಚಿವರು, ನಂತರ. ದೇವಣಗಾಂವದ ಸರ್ಕಾರಿ ಶಾಲೆಯಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ, ಸಂತ್ರಸ್ತರ ಅಹವಾಲು ಆಲಿಸಿದರು.

ಈ ವೇಳೆ ಶಾಸಕ ಅಶೋಕ ಮನಗೂಳಿ, ಜಿಲ್ಲಾಧಿಕಾರಿ ಡಾ.ಆನಂದ.ಕೆ, ಜಿಪಂ ಸಿಇಒ ರಿಷಿ ಆನಂದ, ಎಸ್ಪಿ ಲಕ್ಷ್ಮಣ ನಿಂಬರಗಿ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ರಾಹುಲಕುಮಾರ ಭಾವಿದೊಡ್ಡಿ ಸೇರಿ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಕೋಟ್‌

ಉಜನಿ ಡ್ಯಾಂನಿಂದ ಸೀನಾ ನದಿಯ 3.50 ಲಕ್ಷ ಕ್ಯೂಸೆಕ್ ನೀರು ಹರಿಬಿಡುವುದರಿಂದ ಸ್ವಾಭಾವಿಕವಾಗಿ ಜಿಲ್ಲೆಯ ಇಂಡಿ ಹಾಗೂ ಸಿಂದಗಿ ತಾಲೂಕಿನ ವಿವಿಧ ಭಾಗದಲ್ಲಿ ತೀವ್ರ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಕುಮಸಿಯ 100 ಮನೆಗಳು ಸಂಪೂರ್ಣ ಮುಳುಗಿದ್ದು, ಈ ಕುಟುಂಬಗಳಿಗೆ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ನೀಡಿ, ಊಟೋಪಚಾರ, ಔಷಧ ವ್ಯವಸ್ಥೆ ಸೇರಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ಕುಟುಂಬಗಳಿಗೆ ಶಾಶ್ವತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸ್ಥಳಾಂತರ ಮಾಡಲು ಕ್ರಮ ವಹಿಸಲಾಗುವುದು. ಈ ಬಗ್ಗೆ ನಾನು ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ.

ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವರು.

PREV

Recommended Stories

ಸಿಲೋಗನಾ ಹೆಸರಿನಲ್ಲಿ ವಿಜಯ ದಶಮಿ ಆಚರಿಸುವ ದನಗರ ಗೌಳಿಗರು
ಭಟ್ಕಳದಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ