ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ,ಮುಂಬರುವ ಗ್ರಾ.ಪಂ., ತಾ.ಪಂ., ಜಿ.ಪಂ. ಸೇರಿದಂತೆ ಎಲ್ಲ ಚುನಾವಣೆಯನ್ನು ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಎದುರಿಸಲಿದ್ದು, ಭ್ರಷ್ಟ ಕಾಂಗ್ರೆಸ್ ಪಕ್ಷವನ್ನು ಧೂಳಿಪಟ ಮಾಡಲಿದ್ದೇವೆ ಎಂದು ತಿಳಿಸಿದರು.
ಸುಳ್ಯ : ಮುಂಬರುವ ಗ್ರಾ.ಪಂ., ತಾ.ಪಂ., ಜಿ.ಪಂ. ಸೇರಿದಂತೆ ಎಲ್ಲ ಚುನಾವಣೆಯನ್ನು ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಎದುರಿಸಲಿದ್ದು, ಭ್ರಷ್ಟ ಕಾಂಗ್ರೆಸ್ ಪಕ್ಷವನ್ನು ಧೂಳಿಪಟ ಮಾಡಲಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಸೋಮವಾರ ಸುಳ್ಯದ ಅಂಬಟೆಡ್ಕದಲ್ಲಿ ನೂತನವಾಗಿ ನಿರ್ಮಾಣಗೊಂಡ ಬಿಜೆಪಿ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲ ಚುನಾವಣೆಗಳಲ್ಲಿ ಬಿಜೆಪಿಗೆ ಅತ್ಯಂತ ಹೆಚ್ಚು ಲೀಡ್ ತಂದುಕೊಟ್ಟ ಕ್ಷೇತ್ರಗಳಲ್ಲಿ ಸುಳ್ಯವೂ ಒಂದು. ಸುಳ್ಯದಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಬೇಡಿಕೆ ಬಂದಿದ್ದು, ಸ್ಥಾಪನೆಗೆ ಸಂಬಂಧಪಟ್ಟವರ ಜೊತೆ ಮಾತನಾಡಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಒಟ್ಟಾಗಿ ಸ್ಪರ್ಧಿಸಿ 19 ಸಂಸದರನ್ನು ದೆಹಲಿಗೆ ಕಳುಹಿಸುವ ಮೂಲಕ ಪ್ರಧಾನಿ ಮೋದಿಯವರ ಕೈ ಬಲಪಡಿಸಿದ್ದೇವೆ.
ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಹೋದಾಗ ಮಾತ್ರ ಇದು ಸಾಧ್ಯ ಎಂದು ಅವರು ಹೇಳಿದರು.ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಮೂಲಕ ಕೋಟ್ಯಂತರ ಜನರ ಕನಸು ನನಸಾಗಿದೆ. ನರೇಂದ್ರ ಮೋದಿಯವರು ಸತತ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗುವ ಮೂಲಕ ಇಡೀ ವಿಶ್ವವೇ ಅಚ್ಚರಿ ಪಡುವಂತಾಗಿದ್ದು, ಭಾರತ ದೇಶದ ಆರ್ಥಿಕ ಸುಧಾರಣೆಯನ್ನು ಗಮನಿಸಿ, ವಿಶ್ವದ ಇತರೆ ದೇಶಗಳು ಭಾರತದತ್ತ ಹೆಜ್ಜೆ ಇಡುವಂತಾಗಿದೆ ಎಂದು ಹೇಳಿದರು.ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿರಬಹುದು.
ಆದರೆ ಮುಂಬರುವ ದಿನಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಚುನಾವಣೆಯನ್ನು ಎದುರಿಸಲಿದ್ದು, ಮತ್ತೊಮ್ಮೆ ಸರ್ಕಾರ ರಚನೆ ಮಾಡಲಿದ್ದೇವೆ ಎಂದ ಅವರು ಕಾಂಗ್ರೆಸ್ ಸರ್ಕಾರ ಪ್ರಾರಂಭದಲ್ಲಿ ರಾಜ್ಯದ ಜನರಿಗೆ ಉಚಿತ ಬಿಟ್ಟಿ ಭಾಗ್ಯಗಳನ್ನು ನೀಡಿ, ಇದೀಗ ಬೆಲೆ ಏರಿಕೆ ಮಾಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಧೂಳೀಪಟ ಆಗಲಿದೆ. ವಿದ್ಯುತ್, ಸಾರಿಗೆ, ತೈಲ ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರು ಉಸಿರುಗಟ್ಟುವ ಪರಿಸ್ಥಿತಿ ನಿರ್ಮಾಣ ಮಾಡಿದೆ ಎಂದರು.ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಮಾಜಿ ಸಚಿವ ಎಸ್. ಅಂಗಾರ ಮಾತನಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ, ಜೆಡಿಎಸ್ ಸುಳ್ಯ ತಾಲೂಕು ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಠಿಕಾನ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ವಿನಯಕುಮಾರ್ ಕಂದಡ್ಯ, ಪ್ರದೀಪ್ ರೈ ಮನವಳಿಕೆ ಸೇರಿದಂತೆ ಬಿಜೆಪಿ ಮಹಾಶಕ್ತಿಕೇಂದ್ರಗಳ ಪ್ರಮುಖರು, ಪಕ್ಷದ ಹಿರಿಯ, ಕಿರಿಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಮಂಡಲ ಸಮಿತಿ ಪ್ರ.ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ ಕಾರ್ಯಕ್ರಮ ನಿರೂಪಿಸಿದರು.