ರಾಣಿಬೆನ್ನೂರು: ಕಾವೇರಿ ನೀರನ್ನು ತಮಿಳುನಾಡಿಗೆ ಬಿಡದಂತೆ ಆಗ್ರಹಿಸಿ ಶುಕ್ರವಾರ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗ್ರೇಡ್-2 ತಹಸೀಲ್ದಾರ್ ಅರುಣ ಕಾರಗಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಜಾಧವ ಮಾತನಾಡಿ, ಕುಡಿಯುವ ನೀರು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು. ಅದರ ಜೊತೆಗೆ ರಾಜ್ಯದ ರೈತರ ಬೆಳೆ ಹಾಗೂ ಜೀವನೋಪಾಯವನ್ನು ರಕ್ಷಿಸುವುದು ಕರ್ನಾಟಕ ಸರ್ಕಾರದ ಮೊದಲ ಜವಾಬ್ದಾರಿಯಾಗಿದೆ. ರಾಜ್ಯದ ಜನರ ಅಗತ್ಯಗಳನ್ನು ಕಡೆಗಣಿಸಿ ನೀರು ಹರಿಸುವುದು ಯಾವುದೇ ದೃಷ್ಟಿಯಿಂದಲೂ ನ್ಯಾಯಸಮ್ಮತವಲ್ಲ. ಆದ್ದರಿಂದ ಕರ್ನಾಟಕ ಸರ್ಕಾರ ಯಾವುದೇ ಕಾರಣಕ್ಕೂ ಈ ಆದೇಶವನ್ನು ಪಾಲಿಸಬಾರದು ಮತ್ತು ಒಂದು ಹನಿ ನೀರನ್ನೂ ತಮಿಳುನಾಡಿಗೆ ಬಿಡುಗಡೆ ಮಾಡಬಾರದು ಎಂದರು
ಜಿಲ್ಲಾ ಗೌರವ ಉಪಾಧ್ಯಕ್ಷ ವಿ.ಎಸ್. ಹಿರೇಮಠ ಮಾತನಾಡಿ, ರಾಜ್ಯ ಸರ್ಕಾರ ತಕ್ಷಣವೇ ಈ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಪ್ರಶ್ನಿಸಿ, ಕರ್ನಾಟಕದ ವಾಸ್ತವ ಜಲಸ್ಥಿತಿಯನ್ನು ಸಮಗ್ರವಾಗಿ ಮಂಡಿಸಬೇಕು. ಅಗತ್ಯವಿದ್ದರೆ ಮುಂದಿನ ಕಾನೂನುಬದ್ಧ ಕ್ರಮಗಳನ್ನು ಕೈಗೊಂಡು ರಾಜ್ಯದ ಹಕ್ಕು ಮತ್ತು ಜನರ ಹಿತಾಸಕ್ತಿಯನ್ನು ರಕ್ಷಿಸಬೇಕು. ಒಂದು ವೇಳೆ ಈ ಅವೈಜ್ಞಾನಿಕ ಆದೇಶವನ್ನು ಅನುಸರಿಸಿ ಕರ್ನಾಟಕ ಸರ್ಕಾರ ನೀರು ಬಿಡುಗಡೆ ಮಾಡಿದರೆ, ಅದರ ವಿರುದ್ಧ ರಾಜ್ಯಾದ್ಯಂತ, ವಿಶೇಷವಾಗಿ ಕಾವೇರಿ ಕೊಳ್ಳದ ಪ್ರದೇಶಗಳಲ್ಲಿ ತೀವ್ರ ಜನಾಕ್ರೋಶ ವ್ಯಕ್ತವಾಗುವ ಸಾಧ್ಯತೆಯಿದೆ. ಇಂತಹ ಪರಿಸ್ಥಿತಿಗೆ ಸರ್ಕಾರವೇ ನೇರ ಹೊಣೆಗಾರವಾಗಲಿದೆ ಎಂದರು.ತಾಲೂಕು ಅಧ್ಯಕ್ಷ ಚಂದ್ರಪ್ಪ ಬಣಕಾರ, ರಾಜ್ಯ ಉಪಾಧ್ಯಕ್ಷ ಸಿದ್ಧಾರೂಢ ಗುರುಂ, ಮಲ್ಲಿಕಾರ್ಜುನ ಸಾವಕ್ಕಳವರ, ಪರಶುರಾಮ ಕುರುವತ್ತಿ, ಆನಂದ ಲಮಾಣಿ, ಗೋಪಿ ಕುಂದಾಪುರ, ಶಂಕರ ಹಳ್ಳಪ್ಪನವರ, ಮರಡೆಪ್ಪ ಚಳಗೇರಿ, ಭಾಷಾ ಹಂಪಪಟ್ಟಣ, ಕೃಷ್ಣ ವೇಷಗಾರ, ಶ್ರೀಕಾಂತಪ್ಪ ಕಡ್ಲಿಗೊಂದಿ ಮತ್ತಿತರರಿದ್ದರು.