ರಸ್ತೆಯಲ್ಲಿ ದುರುದ್ದೇಶಪೂರ್ವಕವಾಗಿ ಮೊಳೆಗಳನ್ನು ಎಸೆದು ವಾಹನಗಳಿಗೆ ಪಂಕ್ಚರ್ ಮಾಡಿಸಿ ತರುವಾಯ ಆ ವಾಹನಗಳಿಗೆ ತಾನೇ ಗಾಳಿ ತುಂಬಿ ಹಣ ಸಂಪಾದಿಸುತ್ತಿದ್ದ ಚಾಲಾಕಿ ಪಂಕ್ಚರ್ ಅಂಗಡಿ ಮಾಲಿಕನೊಬ್ಬ ಈಗ ಪರಪ್ಪನ ಅಗ್ರಹಾರ ಕಾರಾಗೃಹ ಸೇರಿದ್ದಾನೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಸ್ತೆಯಲ್ಲಿ ದುರುದ್ದೇಶಪೂರ್ವಕವಾಗಿ ಮೊಳೆಗಳನ್ನು ಎಸೆದು ವಾಹನಗಳಿಗೆ ಪಂಕ್ಚರ್ ಮಾಡಿಸಿ ತರುವಾಯ ಆ ವಾಹನಗಳಿಗೆ ತಾನೇ ಗಾಳಿ ತುಂಬಿ ಹಣ ಸಂಪಾದಿಸುತ್ತಿದ್ದ ಚಾಲಾಕಿ ಪಂಕ್ಚರ್ ಅಂಗಡಿ ಮಾಲಿಕನೊಬ್ಬ ಈಗ ಪರಪ್ಪನ ಅಗ್ರಹಾರ ಕಾರಾಗೃಹ ಸೇರಿದ್ದಾನೆ.
ಮೈಸೂರು ರಸ್ತೆಯ ಬ್ಯಾಟರಾಯನಪುರದ ನಿವಾಸಿ ಯಾರಬ್ ಬೇಗ್ ಎಂಬಾತ ಬಂಧಿತನಾಗಿದ್ದು, ಹೆಬ್ಬಾಳ-ಗೊರಗುಂಟೆಪಾಳ್ಯ ಹೊರ ವರ್ತುಲ ರಸ್ತೆಯ ಎಂಇಎಸ್ ಮೇಲ್ಸೇತುವೆಯಲ್ಲಿ ಈ ಕೃತ್ಯ ಎಸಗಿದ್ದ.
ಯಾರಬ್ ಮೇಲ್ಸೇತುವೆಯಲ್ಲಿ ತನ್ನ ಸಹಚರನ ಜತೆ ಬೈಕ್‌ನಲ್ಲಿ ಮೊಳೆಗಳನ್ನು ತಂದು ಬಿಸಾಡಿ ತೆರಳುವ ದೃಶ್ಯಾವಳಿ ಸಂಚಾರ ಪೊಲೀಸರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿ ಕಾನೂನು ಮತ್ತು ಸುವ್ಯವಸ್ಥೆ ಠಾಣೆ ಪೊಲೀಸರಿಗೆ ಜಾಲಹಳ್ಳಿ ಸಂಚಾರ ಠಾಣೆ ಪೊಲೀಸರು ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಿಕ್ಕಿಬಿದ್ದಿದ್ದು ಹೇಗೆ?:
ಹಲವು ದಿನಗಳಿಂದ ಗೋರಗುಂಟೆಪಾಳ್ಯ-ಹೆಬ್ಬಾಳದ ಹೊರವರ್ತುಲ ರಸ್ತೆಯಲ್ಲಿ ಪಂಕ್ಚರ್ ಅಂಗಡಿಯನ್ನು ಯಾರಬ್ ಇಟ್ಟಿದ್ದು, ತನ್ನ ಅಂಗಡಿ ವಹಿವಾಟಿಗೆ ಆತ ದುಷ್ಟಬುದ್ಧಿ ಅನುಸರಿಸಿದ್ದಾನೆ. ಆ ರಸ್ತೆಯ ಮೇಲ್ಸೇತುವೆ ಸೇರಿದಂತೆ ಆಜುಬಾಜಿನಲ್ಲಿ ಮೊಳೆಗಳನ್ನು ಚೆಲ್ಲಾಡಿ ಬರುತ್ತಿದ್ದ. ಆ ರಸ್ತೆಯಲ್ಲಿ ಸಾಗುವ ವಾಹನಗಳಿಗೆ ಮೊಳೆಗಳು ಚುಚ್ಚಿಕೊಂಡು ಪಂಕ್ಚರ್ ಆಗುತ್ತಿದ್ದವು. ಆಗ ಆ ವಾಹನಗಳು ಅಲ್ಲೇ ಹತ್ತಿರದಲ್ಲಿದ್ದ ಯಾರಬ್ ಅಂಗಡಿಗೆ ತೆರಳಬೇಕಾಗುತ್ತದೆ.
ಮೊಳೆಗಳಿಂದ ವಾಹನಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಜಾಲಹಳ್ಳಿ ಸಂಚಾರ ಠಾಣೆ ಪೊಲೀಸರಿಗೆ ಮಾಹಿತಿ ಬಂದಿದೆ. ಕೂಡಲೇ ಆ ರಸ್ತೆಯಲ್ಲಿ ಮ್ಯಾಗ್ನೇಟ್ ಹಿಡಿದು ಇನ್ಸ್‌ಪೆಕ್ಟರ್ ಶೇಖರ್ ತಂಡವು ತಪಾಸಣೆ ನಡೆಸಿದಾಗ ಮೊಳೆಗಳ ರಾಶಿಯೇ ಪತ್ತೆಯಾಗಿದೆ. ಈ ಕೃತ್ಯವು ದುರುದ್ದೇಶ ಪೂರ್ವಕವಾಗಿ ನಡೆದಿದೆ ಎಂಬುದು ಪೊಲೀಸರಿಗೆ ಶಂಕೆ ಮೂಡಿದೆ. ಅಲ್ಲದೆ ಯಾರಬ್ ಮೇಲೆ ಸ್ಥಳೀಯರು ಅನುಮಾನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ
ಸುಳಿವು ಆಧರಿಸಿ ತನಿಖೆಗಿಳಿದ ಪೊಲೀಸರು, ಆ ಹೆದ್ದಾರಿಯಲ್ಲಿ ಸಂಚಾರ ಪೊಲೀಸರು ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ಹಾಗೂ ಸುತ್ತಮುತ್ತಲ ಕಟ್ಟಡಗಳ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಯಾರಬ್ ಚಲನವಲನ ದೃಶ್ಯಗಳು ಸಿಕ್ಕಿವೆ. ತಕ್ಷಣವೇ ಜಾಲಹಳ್ಳಿ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಠಾಣೆಯಲ್ಲಿ ಸಂಚಾರ ಠಾಣೆ ಇನ್ಸ್‌ಪೆಕ್ಟರ್ ದೂರು ದಾಖಲಿಸಿದ್ದಾರೆ. ಈ ದೂರಿನ ಮೇರೆಗೆ ಯಾರಬ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ‘ಮೊಳೆ ರಹಸ್ಯ’ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಡಿಯೋ ವೈರಲ್:
ಮೇಲ್ಸೇತುವೆಯಲ್ಲಿ ಮೊಳೆ ತಂದು ಯಾರಬ್ ಹಾಕುವ ಸಿಸಿಟಿವಿ ದೃಶ್ಯಾವಳಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಂಚಾರ ಪೊಲೀಸರು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಆರೋಪಿ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸುವವರ ಬಗ್ಗೆ ಅಸ್ತ್ರಂ ಆ್ಯಪ್ ಮೂಲಕ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.