ಮಾದಿಗರ ಕಡೆಗಣಿಸುವವರನ್ನು ಬೆಂಬಲಿಸದಿರಿ

KannadaprabhaNewsNetwork |  
Published : Dec 27, 2023, 01:31 AM IST
ಹಗರಿಬೊಮ್ಮನಹಳ್ಳಿಯಲ್ಲಿ ಮಾದಿಗ ಸ್ವಾಭಿಮಾನಿ ಸಮಾವೇಶವನ್ನು ಸಂಸದ ವೈ. ದೇವೇಂದ್ರಪ್ಪ ಉದ್ಘಾಟಿಸಿದರು. ಮುಖಂಡ ಬಲ್ಲಾಹುಣಿಸಿ ರಾಮಣ್ಣ ಇದ್ದರು. | Kannada Prabha

ಸಾರಾಂಶ

ಕಾಂಗ್ರೆಸ್‌ನವರು ಆಂಧ್ರದಲ್ಲಿ ಒಳಮೀಸಲಾತಿ ವಿರುದ್ಧ ಕೋರ್ಟ್‌ಗೆ ಹೋಗಿರುವುದನ್ನು ಸಮಾಜದ ಜನತೆ ಮರೆಯಬಾರದು. ಸಮಾಜ ಗಟ್ಟಿಗೊಳ್ಳಬೇಕಾದರೆ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಬೆಂಬಲಿಸಬೇಕು.

ಹಗರಿಬೊಮ್ಮನಹಳ್ಳಿ: ಕಾಂಗ್ರೆಸ್ ಪ್ರತಿ ಚುನಾವಣೆಯಲ್ಲಿ ಮಾದಿಗ ಸಮುದಾಯವನ್ನು ವೋಟ್‌ ಬ್ಯಾಂಕ್‌ಗೆ ಸೀಮಿತಗೊಳಿಸಿ ಸಮುದಾಯವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಾ ಬಂದಿದೆ ಎಂದು ಸಮುದಾಯದ ಮುಖಂಡ ವೈ. ಮುತ್ತಣ್ಣ ಬೆನ್ನೂರ್ ಆರೋಪಿಸಿದರು.

ಪಟ್ಟಣದ ವಾಸವಿ ಕಲ್ಯಾಣಮಂಟಪದಲ್ಲಿ ನಡೆದ ರಾಜ್ಯ ಎಲ್ಲೆಡೆ ಮಾದಿಗ ಮುನ್ನಡೆ ಜಿಲ್ಲಾಮಟ್ಟದ ಮಾದಿಗ ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡಿ, ಮಾದಿಗ ಸಮುದಾಯ ಯುವಕರು, ಹಿರಿಯರು ಎಚ್ಚೆತ್ತುಕೊಂಡು ಹೆಜ್ಜೆ ಹಾಕಬೇಕಿದೆ. ನಮ್ಮನ್ನು ನಿರ್ಲಕ್ಷ್ಯ ಮಾಡುವವರನ್ನು ಎಂದಿಗೂ ಬೆಂಬಲಿಸುವುದು ಬೇಡ. ಬಿಜೆಪಿ ಸರ್ಕಾರ ಆಡಳಿತದ ಅವಧಿಯಲ್ಲಿ ಶೇ. ೧೭ರಷ್ಟು ಮೀಸಲಾತಿ ಕಲ್ಪಿಸಲು ಶ್ರಮಿಸಿದೆ ಎಂದರು.

ಬಿಜೆಪಿ ಮುಖಂಡ ಬಲ್ಲಾಹುಣ್ಸಿ ರಾಮಣ್ಣ ಮಾತನಾಡಿ, ಕಾಂಗ್ರೆಸ್ ಸದಾಶಿವ ಆಯೋಗ ರಚನೆ ಮಾಡಿದ್ದು ಬಿಟ್ಟರೆ, ಅದನ್ನು ಜಾರಿಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ೨೦೧೬ರಲ್ಲಿ ಸಿದ್ದರಾಮಯ್ಯ ಆಂತರಿಕ ಒತ್ತಡಕ್ಕೆ ಒಳಗಾಗಿ ಸಮುದಾಯವನ್ನು ನಿರ್ಲಕ್ಷಿಸಿದರು. ನಂತರ ಪ್ರಧಾನಿ ನರೇಂದ್ರ ಮೋದಿ ಸಮಾಜದ ಬೆನ್ನೆಲುಬಾಗಿ ನಿಂತಿದ್ದಾರೆ. ಸಮಾಜದ ಯುವಜನತೆ ಎಲ್ಲ ರಂಗದಲ್ಲೂ ಮುಂಚೂಣಿಗೆ ಬರಬೇಕು. ಕಾಂಗ್ರೆಸ್‌ನವರು ಆಂಧ್ರದಲ್ಲಿ ಒಳಮೀಸಲಾತಿ ವಿರುದ್ಧ ಕೋರ್ಟ್‌ಗೆ ಹೋಗಿರುವುದನ್ನು ಸಮಾಜದ ಜನತೆ ಮರೆಯಬಾರದು. ಸಮಾಜ ಗಟ್ಟಿಗೊಳ್ಳಬೇಕಾದರೆ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಬೆಂಬಲಿಸಬೇಕು ಎಂದರು.

ಸಂಸದ ವೈ. ದೇವೇಂದ್ರಪ್ಪ ಉದ್ಘಾಟಿಸಿ ಮಾತನಾಡಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನನಗೆ ಕೊಡಲಿ, ಬೇರೆ ಯಾರಿಗಾದರೂ ಕೊಡಲಿ ನರೇಂದ್ರ ಮೋದಿ ಅವರಿಗೆ ಮತ ಹಾಕಿ ದೇಶ ಉಳಿಸಬೇಕು. ಮಾದಿಗ ಸಮುದಾಯಕ್ಕೆ ಅಂಬೇಡ್ಕರ್ ಅವರ ಆಶಯದಂತೆ ಮೀಸಲಾತಿ ಕಲ್ಪಿಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಬದ್ಧತೆ ತೋರಿದ್ದಾರೆ ಎಂದರು.

ಹಂಪಿ ಮಾತಂಗಪೀಠದ ಪೂರ್ಣಾನಂದ ಭಾರತಿ ಸ್ವಾಮೀಜಿ, ಸಮಾಜದ ಮುಖಂಡ ಎಚ್. ಹನುಮಂತಪ್ಪ ಮಾತನಾಡಿದರು. ಇದೇ ವೇಳೆ ಸಾಮಾಜಿಕ ಕಾರ್ಯಕರ್ತ ವಾದಿರಾಜೇಂದ್ರ ಪಿಪಿಟಿ ಪ್ರದರ್ಶಿಸಿ ಮಾದಿಗ ಸಮಾಜದ ಪ್ರಗತಿಗೆ ಬಿಜೆಪಿ ಸರ್ಕಾರಗಳ ಕೊಡುಗೆ ಕುರಿತು ದಾಖಲೆ ಒದಗಿಸಿದರು. ಮುಖಂಡರಾದ ಉಮೇಶ್ ಕಾರಜೋಳ, ಹಡಗಲಿ ಪೂಜಪ್ಪ, ಬಾಳಪ್ಪ, ರವಿಚಂದ್ರ ಕಾಂತಿಕಾರ್, ಸುಧಾಕರ ಸೂರ್ಯವಂಶಿ, ಫರ್ನಾಂಡೀಸ್ ಹಿಪ್ಪಳಗಾವ್, ಹೊಸಪೇಟೆ ಉಮಾಪತಿ, ಚಿಮ್ನಳ್ಳಿ ಸಿದ್ದಪ್ಪ ಇತರರಿದ್ದರು. ಮರಿಯಪ್ಪ ದಶಮಾಪುರ, ಕಣಿವಿಹಳ್ಳಿ ಮಂಜುನಾಥ, ಕೂಡ್ಲಿಗಿ ದುರುಗೇಶ್ ನಿರ್ವಹಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ