ಸಾರ್ವಜನಿಕರನ್ನು ಅನಗತ್ಯವಾಗಿ ಕಚೇರಿಗೆ ಅಲೆಸಬೇಡಿ

KannadaprabhaNewsNetwork |  
Published : Dec 04, 2025, 03:15 AM IST
ದೇವರಹಿಪ್ಪರಗಿ | Kannada Prabha

ಸಾರಾಂಶ

ಅನಗತ್ಯವಾಗಿ ಕಚೇರಿಗೆ ಅಲೆಸಿದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ರೈತರ ಹಾಗೂ ಸಾರ್ವಜನಿಕರ ಕೆಲಸಗಳನ್ನು ಅಧಿಕಾರಿಗಳು ತ್ವರಿತಗತಿಯಲ್ಲಿ ಮಾಡಿಕೊಡಬೇಕು. ಅನಗತ್ಯವಾಗಿ ಕಚೇರಿಗೆ ಅಲೆಸಿದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಎಚ್ಚರಿಕೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ 2025-26ನೇ ಸಾಲಿನ ಮೊದಲ ತ್ರೈಮಾಸಿಕ ಕೆಡಿಪಿ (ಕೃಷಿ ಅಭಿವೃದ್ಧಿ ಕಾರ್ಯಕ್ರಮ) ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು ಹಾಗೂ ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಬೇಕು ಎಂದು ಹೇಳಿದರು. ನಂತರ ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿ, ರೈತಪರ ಯೋಜನೆಗಳ ಅನುಷ್ಠಾನ, ಸಾರ್ವಜನಿಕ ಹಿತಾಸಕ್ತಿ ವಿಷಯದ ಕುರಿತು ಚರ್ಚೆ ನಡೆಸಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶರಣಗೌಡ ಬಿರಾದಾರ ಮಾತನಾಡಿ, ತಾಲೂಕಿನಲ್ಲಿ ಸಾವಿರಾರು ಹೆಕ್ಟೇರ್ ಕೃಷಿ ಯೋಗ್ಯ ಭೂಮಿಯಿದೆ. ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಇದುವರೆಗೆ ನೂರಾರು ಹೆಕ್ಟೇರ್ ಬೆಳೆ ಹಾನಿಯಾಗಿದೆ. ಹಾನಿಗೊಳಗಾದ ಬೆಳೆ ಸಮೀಕ್ಷೆ ನಡೆಸಲಾಗಿದೆ. ಶೇ.95ರಷ್ಟು ಬೆಳೆ ಪರಿಹಾರ ನೀಡಲಾಗಿದ್ದು ಕೆಲವು ತಾಂತ್ರಿಕ ಸಮಸ್ಯೆಯಿಂದ ಪರಿಹಾರ ನೀಡಲಾಗಿಲ್ಲ. ಆದಷ್ಟು ಬೇಗ ಸಮಸ್ಯೆ ಬಗೆಹರಿಸಿ ಶೀಘ್ರದಲ್ಲಿ ರೈತರಿಗೆ ಪರಿಹಾರ ಒದಗಿಸಲಾಗುವುದು ಎಂದರು.

ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಬೆಳೆ ವಿಮೆ ಅರ್ಹ ರೈತರಿಗೆ ಶೀಘ್ರ ತಲುಪುವಂತೆ ಹಾಗೂ ಕೃಷಿ ಹೊಂಡಗಳ ಕುರಿತು ಪಾರದರ್ಶಕ ಮಾಹಿತಿಯನ್ನು ರೈತರಿಗೆ ನೀಡಿ ಎಂದು ಶಾಸಕರು ತಿಳಿಸಿದರು. ಬೀದಿ ನಾಯಿಗಳ ಹೆಚ್ಚುತ್ತಿರುವ ಸಮಸ್ಯೆ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಲಾಯಿತು. ಎಪಿಎಂಸಿ ದಾಸ್ತಾನು ಮಳಿಗೆ ಕಟ್ಟಡ ನಿರ್ಮಾಣ ಸಂಬಂಧಿಸಿದ ಬೇಡಿಕೆಯನ್ನು ಶಾಸಕರ ಮುಂದೆ ಮಂಡಿಸಲಾಯಿತು. ಗಂಗಾ ಕಲ್ಯಾಣ ಯೋಜನೆ ಅಡಿ ರೈತರ ಹೊಲಗಳಿಗೆ ಕೃಷಿ ಚಟುವಟಿಕೆಗೆ ಟಿಸಿ ನೀಡುವಲ್ಲಿ ಅಧಿಕಾರಿಗಳು ಹಣ ಕೇಳುತ್ತಾರೆ. ಹಳೆ ಕಂಬಗಳನ್ನು ಬದಲಿಸಲು, ಅಂಗನವಾಡಿ ಕಟ್ಟಡಗಳ ದುರಸ್ತಿ ಹಾಗೂ ಹಳೆಯ ಕಟ್ಟಡ ತೆರವುಗೊಳಿಸುವುದು ಸೇರಿದಂತೆ ಸರ್ಕಾರಿ ಸೇವೆಗಳು, ಸರಳವಾಗಿ ಹಾಗೂ ಪಾರದರ್ಶಕವಾಗಿ ಲಭ್ಯವಾಗುವಂತೆ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

ಕೆಡಿಪಿ ಸದಸ್ಯರಾದ ಪ್ರಕಾಶ ಗುಡಿಮನಿ ಮಾತನಾಡಿ, ಪಟ್ಟಣದಲ್ಲಿ ಯಾವುದೇ ಮೂಲ ಸೌಲಭ್ಯ ಒದಗಿಸದೆ ಅನಧಿಕೃತ ಬಡಾವಣೆಗಳನ್ನು ಮಾಡಲಾಗುತ್ತಿದೆ. ಪಪಂನವರು ಉತಾರಿ ಕೂಡ ನೀಡಿದ್ದಾರೆ. ಪಟ್ಟಣದ ಜನರು ಕೆಲವೇ ದೂರದಲ್ಲಿದ್ದರು ಟೋಲ್ ಪಾವತಿಸಬೇಕಾಗಿದೆ. ಇದರಿಂದ ವಿನಾಯಿತು ನೀಡಿ ಹಾಗೂ ಬೀದಿ ಬದಿ ವ್ಯಾಪಾರಸ್ಥರಿಗೆ ಬೇರೆ ಕಡೆ ಸ್ಥಳಾವಕಾಶ ನೀಡಬೇಕು ಎಂದು ಶಾಸಕರ ಗಮನಕ್ಕೆ ತಂದರು.

ನಂತರ ಇತರೆ ಇಲಾಖೆಗಳ ಅಧಿಕಾರಿಗಳು ಹಾಜರಿದ್ದು ತಮ್ಮ ತಮ್ಮ ಇಲಾಖೆ ಪ್ರಗತಿ ವಿವರ ಮಂಡಿಸಿದರು.

ಜಿಪಂ ಸಿಇಒ ಸಿ.ಬಿ.ಕುಂಬಾರ, ತಾಪಂ ಇಒ ಭಾರತಿ ಚೆಲುವಯ್ಯ, ತಹಸೀಲ್ದಾರ್ ಪ್ರಕಾಶ ಸಿಂದಗಿ, ಪಪಂ ಮುಖ್ಯಾಧಿಕಾರಿ ಅಪ್ರೋಜ ಅಹಮದ ಪಟೇಲ ಸೇರಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳ್ತಂಗಡಿ ಬಸ್ ನಿಲ್ದಾಣ ಕಾಮಗಾರಿಗೆ ಮರುಜೀವ
ಪ್ರತಿಭಾ ಕಾರಂಜಿ ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಪೂರಕ: ಸೋಮಯ್ಯ