ಪಕ್ಷಕ್ಕೆ ಮುಜುಗರ ತರುವ ಸನ್ನಿವೇಶ ಬೇಡ : ಯುವ ಜೆಡಿಎಸ್ ಅಧ್ಯಕ್ಷರ ಕಿವಿಮಾತು

KannadaprabhaNewsNetwork |  
Published : Feb 16, 2026, 01:30 AM IST
JDS

ಸಾರಾಂಶ

ಕಳೆದ ಚುನಾವಣೆಯೇ ತಮ್ಮ ಕೊನೆ ಚುನಾವಣೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪನವರು ಘೋಷಣೆ ಮಾಡಿದ್ದು ಸತ್ಯ. ಆದರೆ ಎಚ್.ಡಿ.ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿಯವರ ಆಶಯದಂತೆ ಮುಂದಿನ ಚುನಾವಣೆಯಲ್ಲಿ ಸ್ವರ್ಧಿಸಲು ಮುಂದಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮೈತ್ರಿ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ. 

 ತುರುವೇಕೆರೆ :  ಇತ್ತೀಚೆಗೆ ಜೆಡಿಎಸ್ ಪಕ್ಷದಲ್ಲಿ ನಡೆಯುತ್ತಿರುವ ಅವಾಂತರಗಳ ಬಗ್ಗೆ ತಾಲೂಕು ಯುವ ಜೆಡಿಎಸ್ ನ ಅಧ್ಯಕ್ಷ ರಂಜಿತ್ ಗೌಡ ವಿಷಾದ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ 2028ರ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಯಾಗುವ ಸಂಬಂಧ ವಿನಾಕಾರಣ ಚರ್ಚೆ ಆಗುತ್ತಿದೆ. ರಾಜ್ಯ ಯುವ ಜೆಡಿಎಸ್ ನ ಪ್ರಧಾನ ಕಾರ್ಯದರ್ಶಿಯೂ ಆಗಿರುವ ದೊಡ್ಡಾಘಟ್ಟ ಚಂದ್ರೇಶ್ ಸಹ ತಾವು ಮುಂಬರುವ ಚುನಾವಣೆಯಲ್ಲಿ ಅಭ್ಯರ್ಥಿಯಾಗುವುದಾಗಿ ಘೋಷಿಸಿದ್ದಾರೆ. ಇದು ಪಕ್ಷದಲ್ಲಿ ಮುಜುಗರವನ್ನುಂಟು ಮಾಡುತ್ತಿದೆ. ಈಗ ಹಾಲಿ ಶಾಸಕರಾಗಿರುವ ಎಂ.ಟಿ.ಕೃಷ್ಣಪ್ಪನವರು ಅಧಿಕಾರದಲ್ಲಿದ್ದಾರೆ. ನಾಲ್ಕು ಬಾರಿ ಶಾಸಕರಾಗಿರುವ ಕೃಷ್ಣಪ್ಪನವರು ನಮ್ಮ ಜೆಡಿಎಸ್ ಪಕ್ಷದ ಶಾಸಕರಲ್ಲಿ ಅತ್ಯಂತ ಹಿರಿಯರೂ, ಅನುಭವಿಗಳೂ ಆಗಿದ್ದಾರೆ. ದುರದೃಷ್ಟವಶಾತ್ ಅವರು ಸಚಿವರಾಗಿಲ್ಲದಿರುವುದು ನೋವಿನ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೊನೆ ಚುನಾವಣೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪನವರು ಘೋಷಣೆ

ಕಳೆದ ಬಾರಿ ನಡೆದ ಚುನಾವಣೆಯೇ ತಮ್ಮ ಕೊನೆ ಚುನಾವಣೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪನವರು ಘೋಷಣೆ ಮಾಡಿದ್ದು ಸತ್ಯ. ಆದರೆ ಎಚ್.ಡಿ.ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿಯವರ ಆಶಯದಂತೆ ಮುಂದಿನ ಚುನಾವಣೆಯಲ್ಲಿ ಸ್ವರ್ಧಿಸಲು ಮುಂದಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮೈತ್ರಿ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ. ಹಾಗೆಯೇ ಕೃಷ್ಣಪ್ಪನವರು ಮಂತ್ರಿಯಾಗುವುದೂ ಸಹ ಅಷ್ಟೇ ಖಚಿತ. ಈ ಸನ್ನಿವೇಶವನ್ನು ಕಾಣಲು ತಾಲೂಕಿನ ಜನತೆ ಬಹಳ ಸಂಭ್ರಮದಿಂದ ಕಾಯುತ್ತಿದ್ದಾರೆ. ಹಾಗಾಗಿ ಎಲ್ಲರೂ ಸಹ ಮುಂದಿನ ಚುನಾವಣೆಯಲ್ಲಿ ಎಂ.ಟಿ.ಕೃಷ್ಣಪ್ಪನವರನ್ನು ಗೆಲ್ಲಿಸಿ ಮಂತ್ರಿ ಸ್ಥಾನವನ್ನು ಕೊಡಿಸೋಣ ಎಂದು ರಂಜಿತ್ ಗೌಡ ಹೇಳಿದರು.

ತಾಳಕೆರೆ ಸುಬ್ರಹ್ಮಣ್ಯಂರವರು ಈ ತಾಲೂಕಿನಿಂದ ಮಂತ್ರಿಯಾಗಿದ್ದು ಬಿಟ್ಟರೆ ಇದುವರೆಗೂ ಯಾರೂ ಮಂತ್ರಿಯಾಗಿಲ್ಲ. ನಮ್ಮ ಅಕ್ಕಪಕ್ಕದ ತಾಲೂಕುಗಳಾದ ಕುಣಿಗಲ್, ತಿಪಟೂರು, ಗುಬ್ಬಿ, ಚಿಕ್ಕನಾಯಕನಹಳ್ಳಿ ಸೇರಿದಂತೆ ಎಲ್ಲಾ ತಾಲೂಕುಗಳ ಶಾಸಕರು ಮಂತ್ರಿಗಳಾಗಿದ್ದಾರೆ. ನಮ್ಮ ತಾಲೂಕು ಮಾತ್ರ ಮಂತ್ರಿ ಭಾಗ್ಯ ಕಂಡಿಲ್ಲ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಎಂ.ಟಿ.ಕೃಷ್ಣಪ್ಪನವರನ್ನು ಗೆಲ್ಲಿಸಿ ಮಂತ್ರಿ ಮಾಡುವ ಅಭಿಲಾಷೆ ಎಲ್ಲರಲ್ಲೂ ಇದೆ ಎಂದು ರಂಜಿತ್ ಗೌಡ ಹೇಳಿದರು.

 ನಿಂದನೆ ಮಾಡುವುದು ಸರಿಯಲ್ಲ

ದೊಡ್ಡಾಘಟ್ಟ ಚಂದ್ರೇಶ್ ಇನ್ನೂ ಯುವಕರಾಗಿದ್ದಾರೆ. ಅವರಿಗೆ ಸಾಕಷ್ಟು ಅವಕಾಶಗಳೂ ಸಹ ಇದೆ. ನೀವು ಪಕ್ಷ ಸಂಘಟನೆ ಮಾಡಿ, ಯಾವುದೇ ಅಭ್ಯಂತರವಿಲ್ಲ. ಆದರೆ ನಿಮ್ಮೊಂದಿಗೆ ಇರುವವರು ಹಾಲಿ ಶಾಸಕರ ಬಗ್ಗೆ ವೈಯಕ್ತಿಕವಾಗಿ ನಿಂದನೆ ಮಾಡುತ್ತಿದ್ದಾರೆ. ಕಾನೂನು ಮೀರಿ ಕಾರ್ಯಕರ್ತರ ರಕ್ಷಣೆ ಮಾಡಿ ಎಂದರೆ ಅದು ಸಾಧ್ಯವಾ? ವೈಯಕ್ತಿಕವಾಗಿ ಕೃಷ್ಣಪ್ಪನವರು ಸಹಾಯ ಮಾಡಲಿಲ್ಲ. ಕಾನೂನಾತ್ಮಕವಾಗಿ ತಪ್ಪೆಸೆಗಿದ್ದವರನ್ನು ರಕ್ಷಿಸಲಿಲ್ಲ ಎಂಬ ಕಾರಣಕ್ಕೆ ನಿಂದನೆ ಮಾಡುವುದು ಸರಿಯಲ್ಲ. ಈ ಕುರಿತು ತಮ್ಮ ಬೆಂಬಲಿಗರಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು. ನಿಮ್ಮ ಬೆಂಬಲಿಗರೂ, ನಮ್ಮ ಬೆಂಬಲಿಗರೂ ಎಲ್ಲರೂ ಜೆಡಿಎಸ್ ನ ನಿಷ್ಠಾವಂತರೇ. ಅವರಲ್ಲೇ ಭಿನ್ನಾಭಿಪ್ರಾಯ ಉಂಟಾಗಿ ಸಂಘರ್ಷಕ್ಕೆ ದಾರಿಯಾಗುತ್ತದೆ. ಇದಕ್ಕೆ ಅವಕಾಶ ಬೇಡ ಎಂದು ರಂಜಿತ್ ಗೌಡ, ದೊಡ್ಡಾಘಟ್ಟ ಚಂದ್ರೇಶ್ ರಲ್ಲಿ ಮನವಿ ಮಾಡಿದರು.

ಹಿರಿಯ ಜೆಡಿಎಸ್ ಮುಖಂಡ ಲಕ್ಷ್ಮಣಗೌಡ ಮಾತನಾಡಿ, ತುರುವೇಕೆರೆ ತಾಲೂಕು ಜೆಡಿಎಸ್ ನ ಭದ್ರಕೋಟೆಯಾಗಿದೆ. ಇಲ್ಲಿ ವ್ಯಕ್ತಿ ಮುಖ್ಯವಲ್ಲ. ಪಕ್ಷ ಮುಖ್ಯ. ಇಲ್ಲಿ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿಯವರೇ ಮುಖ್ಯ. ಅವರ ತೀರ್ಮಾನವೇ ಅಂತಿಮ. ಪಕ್ಷ ಯಾರಿಗೇ ಟಿಕೇಟ್ ನೀಡಲಿ. ಎಲ್ಲರೂ ಒಗ್ಗಟ್ಟಾಗಿ ದುಡಿಯೋಣ, ಪಕ್ಷ ಗೆಲ್ಲಿಸೋಣ ಎಂದು ಕಿವಿಮಾತು ಹೇಳಿದರು.

ಈ ವೇಳೆ ಯುವ ಜೆಡಿಎಸ್ ನ ಹಲವು ಮುಖಂಡರು ಉಪಸ್ಥಿತರಿದ್ದರು.

ತುರುವೇಕೆರೆ ತಾಲೂಕು ಯುವ ಜೆಡಿಎಸ್ ನ ಅಧ್ಯಕ್ಷ ರಂಜಿತ್ ಗೌಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಲಕ್ಷಾಂತರ ಭಕ್ತಸಾಗರದ ನಡುವೆ ಆರ್ಟ್ ಆಫ್ ಲಿವಿಂಗ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ಮಹಾಶಿವರಾತ್ರಿ
ಒಲ್ಲೆ ಎಂದರೂ ಜೆನ್‌ಝಿ ಕತ್ತೆಗಳಿಗೆ ಮದುವೆ ಭಾಗ್ಯ!