ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಈ ಬಾರಿ ಅಧಿಕವಾಗಿ ಭಕ್ತಗಣ, ಶಿವಶರಣರು, ಆಸ್ತಿಕ ಮಹಾಶಯರು ಶುಚಿರ್ಭೂತರಾಗಿ ಶಿವಾಲಯಗಳಲ್ಲಿ ಅಧಿಕವಾಗಿ ಕಂಡು ಬಂದರು. ವಿಭೂತಿಧಾರಣೆ ಮಾಡಿಕೊಂಡು ಭಕ್ತರು ದೇಗುಲಗಳಿಗೆ ತಂಡೋ ಡವಾಗಿ ಸಾಗಿದರು.
ಶಿವಶರಣ, ಶರಣೆಯರಲ್ಲದೆ ವಿವಿಧ ದೇವರ ಆರಾಧಕರು ಒಂದೆಡೆ ಸೇರಿ ಓನಮಃ ಶಿವಾಯ ಪಂಚಾಕ್ಷರಿ ಮಂತ್ರ, ಭಜನೆ ಮಾಡಿದರು. ವಿಶೇಷವಾಗಿ ಈ ಬಾರಿ ಹಲವು ಗ್ರಾಮಗಳಿಂದ ಮುಂಜಾನೆ ಎದ್ದು ಭಕ್ತರು ಸನಿಹದ ಸಾಸಲು ಕ್ಷೇತ್ರದಲ್ಲಿನ ಸೋಮೇಶ್ವರ, ಶಂಭುಲಿಂಗೇಶ್ವರನ ದರ್ಶನ ಪಡೆಯಲು ಪಾದಯಾತ್ರೆ ಕೈಗೊಂಡರು.ಕಿಕ್ಕೇರಿಯ ಶ್ರೀ ಬ್ರಹ್ಮೇಶ್ವರ ದೇಗುಲದಲ್ಲಿ ಹಾಲು, ಮೊಸರು, ಜೇನುತುಪ್ಪ, ಸಕ್ಕರೆ, ಎಳನೀರಿನಿಂದ ಪಂಚಾಮೃತಾಭಿಷೇಕ ಮಾಡಲಾಯಿತು. ಶ್ರೀಪಾರ್ವತಿದೇವಿ, ಶ್ರೀಕಾಲಭೈರವೇಶ್ವರನಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು.
ಸಾಸಲು ಶ್ರೀಶಂಭುಲಿಂಗೇಶ್ವರ, ಶ್ರೀ ಸೋಮೇಶ್ವರ, ಗದ್ದೆಹೊಸೂರುವಿನ ಶ್ರೀ ಜೋಡಿಬಸವೇಶ್ವರ, ಗೋವಿಂದನಹಳ್ಳಿಯ ಶ್ರೀ ಪಂಚಲಿಂಗೇಶ್ವರ, ಮಾದಾಪುರ ಗ್ರಾಮದ ಶ್ರೀ ರಾಮೇಶ್ವರ, ಶ್ರೀ ತ್ರಯಂಭಕೇಶ್ವರ, ಶ್ರೀಕಲ್ಲೇಶ್ವರ, ಬೇವಿನಹಳ್ಳಿಯ ಶ್ರೀ ಅಂಕನಾಥೇಶ್ವರ, ತೆಂಗಿನಘಟ್ಟ, ಊಗಿನಹಳ್ಳಿಯ ಶ್ರೀ ಈಶ್ವರ ದೇವಾಲಯ, ಲಕ್ಷ್ಮೀಪುರ ಗ್ರಾಮದ ಶ್ರೀ ಸಿದ್ಧರಾಮೇಶ್ವರ, ಐಕನಹಳ್ಳಿ ಗ್ರಾಮದ ಬಸವೇಶ್ವರ, ಬೂವಿನಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಮತ್ತಿತರ ದೇವಾಲಯಗಳಲ್ಲಿ ಜಾಗರಣೆ ಕಾರ್ಯಕ್ರಮಕ್ಕಾಗಿ ವಿಶೇಷವಾಗಿ ಸಜ್ಜುಗೊಳಿಸಲಾಗಿತ್ತು.