ಕೋಳಿ ಜ್ವರದ ಬಗ್ಗೆ ಆತಂಕ ಬೇಡ, ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಡಾ.ಕುಮಾರ

KannadaprabhaNewsNetwork |  
Published : Mar 10, 2025, 12:18 AM IST
8ಕೆಎಂಎನ್ ಡಿ38 | Kannada Prabha

ಸಾರಾಂಶ

ಮಂಡ್ಯ ಜಿಲ್ಲೆಯಲ್ಲಿ ಹಾಲಿ ಕಾರ್ಯನಿರ್ವಹಣೆಯಲ್ಲಿರುವ 420 (ಮಾಂಸದ) ಬ್ರಯ್ಲರ್ ಕೋಳಿ ಫಾರಂಗಳಲ್ಲಿ- 2519050 ಕೋಳಿಗಳು ಹಾಗೂ 23 ಮೊಟ್ಟೆ ಕೋಳಿ ಫಾರಂಗಳಲ್ಲಿ- 526500, ಮನೆಯಲ್ಲಿ ಸಾಕುವ ಕೋಳಿಗಳು-599333 ಕೋಳಿಗಳು ಇರುತ್ತದೆ. ಇವುಗಳ ಬಗ್ಗೆ ಆಯಾ ತಾಲೂಕಿನಲ್ಲಿ ನಿಗಾ ವಹಿಸಲು ತಂಡ ರಚಿಸಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ಕೋಳಿ ಜ್ವರದ ಬಗ್ಗೆ ಆತಂಕ ಬೇಡ. ಕೋಳಿ ಸಾಕಾಣಿಕೆದಾರರು ಹಕ್ಕಿ ಜ್ವರ ಹರಡದಂತೆ ಪಶುಸಂಗೋಪನಾ ಇಲಾಖೆ ಹೊರಡಿಸಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕೋಳಿ ಜ್ವರ ನಿಯಂತ್ರಣ ಸಂಬಂಧ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ರಾಜ್ಯದ ಕೆಲವು ಭಾಗಗಳಲ್ಲಿ ಹಕ್ಕಿಜ್ವರ ವರದಿಯಾಗಿದೆ. ಆದರೆ, ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಪ್ರಕರಣ ವರದಿಯಾಗಿಲ್ಲ‌ ಎಂದರು.

ಕೋಳಿ ಶೀತ ಜ್ವರ ತಗುಲಿದ ಪಕ್ಷಿಯ ಶ್ವಾಸೇಂದ್ರಿಯ, ಕಣ್ಣಿನ ಕೊಡ್ಪರೆ ಮತ್ತು ಹಿಕ್ಕೆಗಳಿಂದ ವೈರಸ್ ನ್ನು ಹೊರಹಾಕುತ್ತದೆ. ಇದರಿಂದ ಒಂದು ಪಕ್ಷಿಯಿಂದ ಇನ್ನೊಂದು ಪಕ್ಷಿಗೆ ರೋಗ ಹರಡುತ್ತದೆ ಎಂದರು.

ಜಿಲ್ಲೆಯಲ್ಲಿ ಹಾಲಿ ಕಾರ್ಯನಿರ್ವಹಣೆಯಲ್ಲಿರುವ 420 (ಮಾಂಸದ) ಬ್ರಯ್ಲರ್ ಕೋಳಿ ಫಾರಂಗಳಲ್ಲಿ- 2519050 ಕೋಳಿಗಳು ಹಾಗೂ 23 ಮೊಟ್ಟೆ ಕೋಳಿ ಫಾರಂಗಳಲ್ಲಿ- 526500, ಮನೆಯಲ್ಲಿ ಸಾಕುವ ಕೋಳಿಗಳು-599333 ಕೋಳಿಗಳು ಇರುತ್ತದೆ. ಇವುಗಳ ಬಗ್ಗೆ ಆಯಾ ತಾಲೂಕಿನಲ್ಲಿ ನಿಗಾ ವಹಿಸಲು ತಂಡ ರಚಿಸಿ ಎಂದು ಸೂಚಿಸಿದರು.

ಕೋಳಿ ಸಾಕಾಣಿಕೆಯ ವಿಭಾಗಕ್ಕೆ ಬಾರದೆ ಇರುವ ಕಾಡು ಪಕ್ಷಿಗಳು, ಕೆರೆ ಕಟ್ಟೆ ಪಕ್ಷಿಧಾಮದ ಬಳಿ ವಾಸಿಸುವ ಪಕ್ಷಿಗಳಲ್ಲಿ ರೋಗದ ಲಕ್ಷಣ ಅಥವಾ ಕೋಳಿ ಜ್ವರ ಕಂಡು ಬಂದಲ್ಲಿ ತಕ್ಷಣ ಕ್ರಮವಹಿಸಲು ತಂಡ ರಚಿಸಬೇಕು ಎಂದರು.

ಸಾರ್ವಜನಿಕರು ಯಾವುದೇ ವದಂತಿಗೆ ಕಿವಿ ಕೊಡಬೇಡಿ, ಕೋಳಿ ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಬಹುದು. ಕೋಳಿ ಫಾರಂ ನಲ್ಲಿ ಕೆಲಸ ನಿರ್ವಹಿಸುವವರು ಕೆಲಸಗಾರರು ಕೋಳಿಗಳ ಜೊತೆ ನಿಕಟ ಸಂಪರ್ಕದಲ್ಲಿರುತ್ತಾರೆ‌. ಅವರಿಗೆ ಕೋಳಿ ಜ್ವರದ ಬಗ್ಗೆ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ ಎಂದರು.

ಜಿಲ್ಲೆಯಲ್ಲಿ ಯಾವುದೇ ಕೋಳಿ ಜ್ವರ ಪ್ರಕರಣಗಳು ದಾಖಲಾದರೆ ಅವುಗಳನ್ನು ವೈಜ್ಞಾನಿಕ ವಿಧಾನದಿಂದ ಮಣ್ಣು ಮಾಡುವುದಕ್ಕೆ ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಕೋಳಿಜ್ವರ ಪತ್ತೆಯಾದ ಜಾಗದಿಂದ 1 ಕಿ.ಮೀ ವ್ಯಾಪ್ತಿ ಇನ್ಫೆಕ್ಟೆಡ್ ಜೋನ್ ಎಂದು ಪರಿಗಣಿಸಲಾಗುವುದು ಎಂದರು.

ಇನ್ಫೆಕ್ಟೆಡ್ ಜೋನ್ ನಲ್ಲಿ ಯಾವುದೇ ಪಕ್ಷಿಗಳು ಇರದಂತೆ ಹಾಗೂ ಬಾರದಂತೆ ಕ್ರಮ ವಹಿಸಲಾಗುವುದು. ಜಿಲ್ಲೆಯಲ್ಲಿ ಈಗಾಗಲೇ ವಿಶೇಷ ತಂಡಗಳನ್ನು ರಚಿಸಿ ಜಿಲ್ಲೆಯ ಎಲ್ಲಾ ಕೋಳಿ ಫಾರಂ ವಿವರಗಳನ್ನು ತೆಗೆದುಕೊಳ್ಳಲಾಗಿದೆ. ಫಾರಂ ಮಾಲೀಕರು ಕೋಳಿಗಳು ಅನುಮಾನಾಸ್ಪದವಾಗಿ ಸತ್ತು ಹೋದರೆ ಕೂಡಲೇ ಅಧಿಕಾರಿಗಳ ಗಮನಕ್ಕೆ ತರುವಂತೆ ಸೂಚಿಸಲಾಗಿದೆ ಎಂದರು.

ಸಭೆಯಲ್ಲಿ ಅಪರ ಪೋಲಿಸ್ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ, ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಕೆ. ಮೋಹನ್, ಪಶುವೈದ್ಯಾಧಿಕಾರಿ ಡಾ ಸುರೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ