ಬ್ಯಾಡಗಿ: ಸರ್ಕಾರಿ ಶಾಲೆಗೆ ದಾನ ನೀಡಿದ ಜಾಗ ವಿವಾದಕ್ಕೆ ತಿರುಗಿದ ಕಾರಣ ಜಮೀನು ಮಾಲೀಕರು ಸೇರಿ ಮಕ್ಕಳು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಮಲ್ಲೂರ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಖಾತೆ ಮಾಡಿಸಿಲ್ಲ: ಪಾಳು ಬಿದ್ದಿದ್ದ ಭೂಮಿಯೂ ಸಹ ಬೆಲೆ ಬಾಳುತ್ತಿರುವ ಇಂದಿನ ದಿನಗಳಲ್ಲಿ ಶಾಲೆಗೆ ದಾನದ ರೂಪದಲ್ಲಿ ಬಿಟ್ಟುಕೊಟ್ಟಿದ್ದ ಜಾಗೆಯನ್ನು ನಿಯಮನುಸಾರ ಶಾಲೆಯ ಹೆಸರಿಗೆ ಖಾತೆ ಮಾಡಿಸಿಕೊಳ್ಳದ ಶಿಕ್ಷಣ ಇಲಾಖೆ ಹಾಗೂ ಶಾಲೆ ಮುಖ್ಯ ಶಿಕ್ಷಕರು ನಿರ್ಲಕ್ಷ್ಯ ತೋರಿದ್ದು ವಿವಾದಕ್ಕೆ ಕಾರಣವಾಗಿದೆ.
ತಂದೆ ಶಂಕ್ರಪ್ಪ ನೀಡಿರುವ 5 ಗುಂಟೆ ಜಮೀನು ಜಾಗೆಯನ್ನು ಹಸ್ತಾಂತರ ಮಾಡಲು ಈಗಲೂ ಬದ್ಧರಾಗಿದ್ದೇವೆ ಆದರೆ ಎಸ್‌ಡಿಎಂಸಿ ಸೇರಿದಂತೆ ಇನ್ನಿತರ ಕೆಲವರು ಹಲವು ವರ್ಷಗಳಿಂದ ಇದೇ ವಿಚಾರವಾಗಿ ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದರೂ ಸಹ ಉದ್ಧಟತನ ತೋರಿ ಇನ್ನುಳಿದ 10 ಗುಂಟೆ ಜಮೀನನ್ನು ಪಡೆದುಕೊಳ್ಳಲು ಮುಂದಾಗಿದ್ದೇ ವಿವಾದಕ್ಕೆ ಕಾರಣವಾಗಿದೆ ಎಂದು ಭೂಮಾಲಿಕ ವೀರೇಶ ಕುಲಕರ್ಣಿ ಹೇಳಿದ್ದಾರೆ.ಒತ್ತುವರಿ ಜಾಗ ಬಿಟ್ಟುಕೊಡಿ: ಒತ್ತುವರಿ ಮಾಡಿದ ಜಾಗವನ್ನು ಮರಳಿಸುವಂತೆ ಬಿಗಿಪಟ್ಟು ಹಿಡಿದ ವೀರೇಶ ಕುಲಕರ್ಣಿ ಉರ್ದು ಶಾಲೆಗೆ ಬೀಗ ಹಾಕಿದ್ದಲ್ಲದೇ ಮಕ್ಕಳು ತರಗತಿಗಳಿಗೆ ಹಾಜರಾಗದಂತೆ ತಡೆದು ಪ್ರತಿಭಟನೆ ನಡೆಸಿದರು. ಎಂದಿನಂತೆ ಶಾಲೆ ಆರಂಭವಾಗುತ್ತಿದ್ದಂತೆ ಭೂಮಾಲೀಕ ಶಾಲೆಯಲ್ಲಿನ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿ ಶಾಲೆಯ ಮುಖ್ಯದ್ವಾರಕ್ಕೆ ಬೀಗ ಜಡಿದಿದ್ದಾರೆ. ಏಕಾಏಕಿ ನಡೆದ ಘಟನೆಯಿಂದ ಆತಂಕಕ್ಕೆ ಒಳಗಾದ ಶಿಕ್ಷಕರು ದೊಡ್ಡ ತಾಡಪತ್ರಿ ತರಿಸಿ ಶಾಲೆಯ ಹೊರಗಡೆ ಕುಳ್ಳರಿಸಿದರು. ಇದರಿಂದ ಕೆಲಕಾಲ ಮಕ್ಕಳು ಶಾಲೆಯ ಹೊರಗಡೆ ಉಳಿಯುವಂತಾಯಿತು.
ಸ್ಥಳದಲ್ಲಿ ಬಿಗುವಿನ ವಾತಾವರಣ: ಘಟನೆ ನಡೆದ ಹಿನ್ನೆಲೆಯಲ್ಲಿ ಮಲ್ಲೂರ ಗ್ರಾಮದ ಅನ್ಯಕೋಮಿನ ಜನರಿಂದಲೇ ದಾನಕ್ಕಿಂತ ಹೆಚ್ಚಿನ ಭೂಕಬಳಿಕೆ ನಡೆದು ನನಗೆ ನಮ್ಮ ಕುಟುಂಬಕ್ಕೆ ಅನ್ಯಾಯವಾಗುತ್ತಿದೆ ಎಂದು ಭೂಮಾಲೀಕ ಈರಪ್ಪ ಕುಲಕರ್ಣಿ ಆಕ್ರೋಶ ಹಾಕಿದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.ಸ್ಥಳಕ್ಕೆ ತಹಸೀಲ್ದಾರ್:
ಶಾಲೆಗೆ ಬೀಗ ಜಡಿದಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ತಹಸೀಲ್ದಾರ್ ಹಾಗೂ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ ಆಗಮಿಸಿ ಬೀಗ ತೆಗೆಯುವಂತೆ ಮನವಿ ಮಾಡಿದರು. ಭೂ ಮಾಲೀಕರು ಜಗ್ಗದ ಕಾರಣ ಅಧಿಕಾರಿಗಳ ನಡುವೆ ವಾಗ್ವಾದ ನಡೆಸಿದರು. ಇದರ ಬೆನ್ನಲ್ಲೇ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು.ಈಡೇರದ ಭರವಸೆ: ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ವೀರೇಶ ಕುಲಕರ್ಣಿ ನಮ್ಮ ತಂದೆ ದಾನ ನೀಡುವ ಸಂದರ್ಭದಲ್ಲಿ ಮನೆಯಲ್ಲಿನ ಒಬ್ಬರಿಗೆ ಸರಕಾರಿ ನೌಕರಿ ಹಾಗೂ ಬೇರೆಡೆ 2 ಗುಂಟೆ ಜಾಗ ನೀಡುವ ಭರವಸೆ ನೀಡಿದ್ದರು. ಇದೇ ಭರವಸೆ ಮೇಲೆ ನಮ್ಮ ತಂದೆ ಭೂದಾನ ಮಾಡಿದ್ದಾರೆ. ಆದರೆ ಕೊಟ್ಟ ಭರವಸೆ ಈಡೇರಿಸುವ ಬದಲು ಇದೇ ಜಾಗದಲ್ಲಿ ಹೆಚ್ಚಿಗೆ ಒತ್ತುವರಿ ಮಾಡಿಕೊಂಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಹೆಚ್ಚಿಗೆ ನೀಡಲು ಸಿದ್ಧರಿದ್ದೇವೆ: ಮೂರು ಜನ ಅಣ್ಣ ತಮ್ಮಂದಿರು, ಈಗಲು ತಂದೆ ಕೊಟ್ಟಿದ್ದಕ್ಕಿಂದ 5 ಗುಂಟೆ ಜೊತೆಗೆ 3 ಗುಂಟೆ ಜಾಸ್ತಿ ನೀಡಲು ಸಿದ್ಧ. ಆದರೆ ಒಂದು ಸಮುದಾಯದ ಓಲೈಕೆ ಮಾಡಲು ಹೋಗಿ ಭೂಮಿಯ ಮಾಲೀಕರಿಗೆ ಅನ್ಯಾಯ ಮಾಡಲಾಗುತ್ತಿದೆ. ಈಗಲೂ 15 ಗುಂಟೆ ಜಾಗ ನಮ್ಮದೇ ಎಂಬ ದಾಖಲೆ ಇದೆ. ನಮ್ಮ ಸಮಸ್ಯೆ ಸರಿ ಮಾಡಲು ಯಾರೂ ತಯಾರಿಲ್ಲ ಎಂದು ಭೂ ಮಾಲೀಕರು ಹೇಳುತ್ತಾರೆ.ಮಕ್ಕಳಿಗೆ ತೊಂದರೆ ಕೊಡುವ ಉದ್ದೇಶವಿಲ್ಲ, ನಮಗೆ ನ್ಯಾಯಬೇಕು. ತಹಸೀಲ್ದಾರ್ ಕೇಳಿದ ಗಡುವು ಮುಗಿಯುವ ಮೊದಲೇ ನಮ್ಮ ಜಾಗವನ್ನು ಹಿಂದಿರುಗಿಸಲಿ. ಇಲ್ಲದೇ ಹೋದಲ್ಲಿ ಮತ್ತೆ ಶಾಲೆಗ ಬೀಗ ಜಡಿಯುವುದು ಖಚಿತ ಎಂದು ಭೂಮಿ ಮಾಲೀಕ ಗಣೇಶ ಶಂಕ್ರಪ್ಪ ಕುಲಕರ್ಣಿ ಹೇಳಿದರು.