ಜಿಲ್ಲಾ ಮಟ್ಟದ ಬೃಹತ್ ಕಾನೂನು ಅರಿವು ಮತ್ತು ಆರೋಗ್ಯ ತಪಾಸಣಾ ಶಿಬಿರ
ಪಟ್ಟಣದ ವೈ.ಟಿ.ಎಸ್.ಎಸ್. ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಅರಣ್ಯವಾಸಿ ಬುಡಕಟ್ಟು ಜನಾಂಗದವರಿಗೆ ಮತ್ತು ಇತರೆ ಸಾಂಪ್ರದಾಯಿಕ ಅರಣ್ಯವಾಸಿಗಳಿಗೆ ಜಿಲ್ಲಾ ಮಟ್ಟದ ಬೃಹತ್ ಕಾನೂನು ಅರಿವು ಮತ್ತು ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ನ್ಯಾಯಾಧೀಶನಾಗಿ ನ್ಯಾಯ ಕೊಡಿಸುವುದು ಬೇರೆ, ನಿಜವಾಗಿ ನ್ಯಾಯ ಕೊಡಿಸುವುದೇ ಬೇರೆ. ನ್ಯಾಯಾಧೀಶನಾಗಿ ಕಾನೂನಿನ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದ ಅವರು, ಎಲ್ಲರಿಗೂ ಸಮಾನವಾದ ಅವಕಾಶ ಸಿಗಬೇಕು ಎಂದು ನಮ್ಮ ಸಂವಿಧಾನದಲ್ಲಿ ಹೇಳಲಾಗಿದೆ. ದೀನ ದಲಿತರಿಗೆ, ಬಡವರಿಗೆ, ಬುಡಕಟ್ಟು ಆದಿವಾಸಿಗಳಿಗೆ ಸರಕಾರದ ಯೋಜನೆಗಳು ಸಂಪೂರ್ಣವಾಗಿ ತಲುಪುತ್ತಿಲ್ಲ. ಎಲ್ಲರಿಗೂ ಸರಕಾರದ ಯೋಜನೆ ತಲುಪಬೇಕು. ಕಾನೂನಿನ ಅರಿವು, ಉಚಿತ ನೆರವು ಎಲ್ಲರಿಗೂ ಸಿಗಬೇಕು ಎನ್ನುವ ನಿಟ್ಟಿನಲ್ಲಿ ನಾಲ್ಸಾ ಕಾರ್ಯ ನಿರ್ವಹಿಸುತ್ತಿದೆ ಎಂದರು.ಬುಡಕಟ್ಟು ಜನರ, ಆದಿವಾಸಿಗಳ ಸಾಂಪ್ರದಾಯಿಕ ಸಂಸ್ಕೃತಿ ಹೆಮ್ಮೆಪಡುವ ಸಂಸ್ಕೃತಿ. ಈ ಸಂಸ್ಕೃತಿ ಉಳಿಯಬೇಕು, ಈ ಸಮುದಾಯದವರನ್ನು ಖುದ್ದಾಗಿ ಭೇಟಿ ಮಾಡಿ ಸಂವಾದ ನಡೆಸಿ ಸಮಸ್ಯೆ ಅರಿಯಬೇಕು ಎನ್ನುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು.ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್. ಶಶಿಧರ ಶೆಟ್ಟಿ ಕಾನೂನು ಅರಿವು, ನೆರವಿನ ಕುರಿತು ಮಾತನಾಡಿ, ಕಾನೂನು ಸೇವಾ ಪ್ರಾಧಿಕಾರ ವಿವಿದ ಇಲಾಖೆಗಳ ಸಮನ್ವಯತೆಯೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಕ್ಕಿನ ಉಲ್ಲಂಘನೆಯಾದಾಗ, ಶೋಷಣೆಗೆ ಒಳಗಾದಾಗ ಕಾನೂನಿನ ಅರಿವಿದ್ದರೆ ವಿರೋಧಿಸುವ ಧ್ವನಿಗೆ ಜೀವ ಬರುತ್ತದೆ. ಈ ನಿಟ್ಟಿನಲ್ಲಿ ಅಗತ್ಯವುಳ್ಳವರಿಗೆ ಉಚಿತ ಕಾನೂನಿನ ನೆರವು ಹಾಗೂ ಕಾನೂನಿನ ಅರಿವನ್ನು ನೀಡುವ ಕಾರ್ಯವನ್ನು ಪ್ರಾಧಿಕಾರ ಮಾಡುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕಿ ಡಾ. ಪೂರ್ಣಿಮಾ ಆರ್.ಟಿ. ಮಾತನಾಡಿ, ಮಹಿಳೆಯರ ಆರೋಗ್ಯ ಚೆನ್ನಾಗಿದ್ದರೆ, ಕುಟುಂಬದ ಆರೋಗ್ಯವೂ ಪರಿಪೂರ್ಣವಾಗುತ್ತದೆ. ಕುಟುಂಬದ ಆರೋಗ್ಯ ಸರಿಯಿದ್ದರೆ ಸಮಾಜದ ಆರೋಗ್ಯ ಅಷ್ಟೇ ಉತ್ತಮವಾಗುತ್ತದೆ. ಈ ನಿಟ್ಟಿನಲ್ಲಿ ತಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ, ಇತರ ಸೌಲಭ್ಯ ಪಡೆದುಕೊಳ್ಳುವಲ್ಲಿ ಶಿಬಿರದ ಪ್ರಯೋಜನ ಪಡೆದುಕೊಳ್ಳಿ ಎಂದರು.ಉಚ್ಚನ್ಯಾಯಾಲಯ ಸರಕಾರಿ ನ್ಯಾಯವಾದಿ ಜೈರಾಮ ಸಿದ್ದಿ ಅನುಸೂಚಿತ ಬುಡಕಟ್ಟು ಮತ್ತು ಇತರೇ ಸಾಂಪ್ರದಾಯಿಕ ಅರಣ್ಯ ವಾಸಿಗಳ ಹಕ್ಕು ಮತ್ತು ಅಧಿನಿಯಮದ ಕುರಿತು, ಯಲ್ಲಾಪುರದ ಅಪರ ಸರಕಾರಿ ವಕೀಲ ಎನ್.ಟಿ. ಗಾಂವ್ಕರ್ ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ, ಬಾಲ ಕಾರ್ಮಿಕ ತಡೆ ಕಾಯ್ದೆ ಕುರಿತು ಉಪನ್ಯಾಸ ನೀಡಿದರು.ಜಿಲ್ಲಾ ಸತ್ರ ನ್ಯಾಯಾಧೀಶ ಜಯಶಂಕರ, ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ್ ಎಸ್., ಹಾವೇರಿ ನ್ಯಾಯಾಧೀಶ ಎಂ.ಜಿ. ಶಿವಳ್ಳಿ, ಜಿಲ್ಲಾ ಪರಿಶಿಷ್ಠ ವರ್ಗಗಳ ಕಲ್ಯಾಣಾಧಿಕಾರಿ ವೈ.ಕೆ. ಉಮೇಶ., ವಕೀಲರ ಸಂಘದ ಅಧ್ಯಕ್ಷ ವಿ.ಟಿ. ಭಟ್ಟ ವೇದಿಕೆಯಲ್ಲಿದ್ದರು. ನಾಲ್ಸಾ ಅಧ್ಯಕ್ಷ ಆರ್.ಗುರುರಾಜನ್ ಹಾಗೂ ಇತರ ನ್ಯಾಯಾಧೀಶರು ಬುಡಕಟ್ಟು ಜನಾಂಗದವರೊಂದಿಗೆ ಸಂವಾದ ನಡೆಸಿದರು.ಸಿವಿಲ್ ನ್ಯಾಯಾಧೀಶೆ ಅನಿತಕುಮಾರಿ ಎಸ್. ಸ್ವಾಗತಿಸಿದರು. ಸೂರ್ಯ ಸಿದ್ದಿ ನಿರ್ವಹಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ.ಎಂ. ವಂದಿಸಿದರು. ಸಿದ್ದಿ ಸಾಂಪ್ರದಾಯಿಕ ನೃತ್ಯ ದಮಾಮಿ ನೃತ್ಯ ನಡೆಯಿತು.ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಲು ಶಿಬಿರದಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು.