ಚಾರಣಕ್ಕೆ ಹೇಳಿ ಮಾಡಿಸಿದ ನಿಸರ್ಗ ತಾಣ ದೋಣಿಮಲೈ

KannadaprabhaNewsNetwork |  
Published : Jun 23, 2025, 11:47 PM ISTUpdated : Jun 24, 2025, 12:36 PM IST
ಚಿತ್ರ: ೨೨ಎಸ್.ಎನ್.ಡಿ.೦೧- ಸಂಡೂರು ತಾಲೂಕಿನ ದೋಣಿಮಲೈ ಅರಣ್ಯ ವಲಯದಲ್ಲಿನ ದೋಣಿ ಆಕಾರದ ದೋಣಿ ಕಣಿವೆಯ ವಿಹಂಗಮ ನೋಟ.೨೨ಎಸ್.ಎನ್.ಡಿ.೦೨- ಸಂಡೂರು ತಾಲೂಕಿನ ದೋಣಿ ಕಣಿವೆಯಲ್ಲಿ ಚಾರಣ ನಡೆಸುತ್ತಿರುವ ಚಾರಣಿಗ ಎಂ.ಪಿ. ಕಾರ್ತಿಕ್. | Kannada Prabha

ಸಾರಾಂಶ

ತಾಲೂಕಿನಲ್ಲಿ ದೋಣಿಮಲೈನಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಎನ್‌ಎಂಡಿಸಿ (ನ್ಯಾಷನಲ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್) ಕಚೇರಿ ಇದೆ. ಈ ಸ್ಥಳಕ್ಕೆ ದೋಣಿಮಲೈ ಎಂದು ಹೆಸರು ಬರಲು ದೋಣಿ (ಬೋಟ್) ಯಾಕಾರದಲ್ಲಿರುವ ದೋಣಿ ಕಣಿವೆ ಕಾರಣವಾಗಿದೆ.

ವಿ.ಎಂ. ನಾಗಭೂಷಣ

 ಸಂಡೂರು :  ತಾಲೂಕಿನಲ್ಲಿ ದೋಣಿಮಲೈನಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಎನ್‌ಎಂಡಿಸಿ (ನ್ಯಾಷನಲ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್) ಕಚೇರಿ ಇದೆ. ಈ ಸ್ಥಳಕ್ಕೆ ದೋಣಿಮಲೈ ಎಂದು ಹೆಸರು ಬರಲು ದೋಣಿ (ಬೋಟ್) ಯಾಕಾರದಲ್ಲಿರುವ ದೋಣಿ ಕಣಿವೆ ಕಾರಣವಾಗಿದೆ.

ಈ ಕಣಿವೆ ಇರುವುದು ತಾಲೂಕಿನ ಯಾಣ ಎಂದೇ ಹೆಸರಾದ ಉಬ್ಬಲಗಂಡಿಯ ಶಿಲಾ ಬೆಟ್ಟಗಳ ಹಿಂಬದಿಯಲ್ಲಿ. ಉಬ್ಬಲಗಂಡಿಯಿಂದ ಮೂರು ಕಿಮೀ ದೂರದಲ್ಲಿರುವ ರಮ್ಯ ತಾಣವೇ ದೋಣಿ ಕಣಿವೆ. ಸುತ್ತಲು ಹಸಿರುಟ್ಟ ಬೆಟ್ಟಗುಡ್ಡಗಳಿಂದ ಆವೃತವಾಗಿರುವ ಈ ಕಣಿವೆಯನ್ನು ನೋಡಿದರೆ ದೋಣಿ (ಬೋಟ್) ಯಾಕಾರದಲ್ಲಿರುವ ಕಾರಣ, ಈ ಪ್ರದೇಶಕ್ಕೆ ದೋಣಿಮಲೈ ಎಂಬ ಹೆಸರು ಬಂದಿದೆ.

ಈ ಕಣಿವೆಯಿಂದ ಹರಿದು ಬರುವ ಮಳೆ ನೀರು ಉಬ್ಬಲಗಂಡಿಯ ಬಳಿಯಲ್ಲಿ ಜಲಪಾತವಾಗಿ ಧುಮ್ಮಿಕ್ಕುತ್ತದೆ. ಚಾರಣಕ್ಕೆ ಹೇಳಿ ಮಾಡಿಸಿದ ತಾಣ ಇದಾಗಿದೆ. ಹೀಗಾಗಿಯೇ ಹಲವು ಚಾರಣಿಗರು ಇತ್ತೀಚೆಗೆ ಇತ್ತಕಡೆ ಮುಖ ಮಾಡಿದ್ದಾರೆ.

ಅರಣ್ಯ ಇಲಾಖೆಯಿಂದ ಸಂಡೂರು ಸುತ್ತಮುತ್ತಲಿನ ಸ್ವಾಮಿಮಲೈ, ರಾಮಘಡ, ಈಶಾನ್ಯ ಹಾಗೂ ದೋಣಿಮಲೈ ಅರಣ್ಯ ವಲಯಗಳಲ್ಲಿ ಭೀಮತೀರ್ಥ, ರಾಮಘಡ, ಉಬ್ಬಲಗಂಡಿ ಹಾಗೂ ಕುಮಾರಸ್ವಾಮಿ ದೇವಸ್ಥಾನದ ಮಾರ್ಗಗಳಲ್ಲಿ ಒಟ್ಟು ನಾಲ್ಕು ಚಾರಣ ಪಥಗಳನ್ನು ಗುರುತಿಸಲಾಗಿದೆ. ಚಾರಣ ನಡೆಸುವವರು ಅರಣ್ಯ ಇಲಾಖೆಗೆ ತಿಳಿಸಿದರೆ, ಈ ಪಥಗಳಲ್ಲಿ ಚಾರಣ ನಡೆಸಲು ಇಲಾಖೆಯವರು ಮಾರ್ಗದರ್ಶನ ಮಾಡುತ್ತಾರೆ. ಚಾರಣಿಗರು ಮಳೆಗಾಲ ಹಾಗೂ ಚಳಿಗಾಲದಲ್ಲಿ ಇಲ್ಲಿ ಹೆಚ್ಚಾಗಿ ಚಾರಣ ನಡೆಸುತ್ತಾರೆ.

ದೋಣಿ ಕಣಿವೆ ಹೊರಗಿನವರಿಗೆ ಹೆಚ್ಚಿನ ಪರಿಚಯವಿಲ್ಲ. ತಾಲೂಕು ಕೇಂದ್ರದಿಂದಲೂ ದೂರವಿರುವ ಕಾರಣ, ಹೆಚ್ಚಿನ ಜನರು ಇಲ್ಲಿಗೆ ತೆರಳುವುದಿಲ್ಲ. ಇದರ ಪರಿಚಯವಿರುವ ಚಾರಣಿಗರು ಮಾತ್ರ ಈ ಭಾಗದಲ್ಲಿ ಆಗಾಗ್ಗೆ ಚಾರಣ ನಡೆಸುತ್ತಾರೆ.

ತಾಲೂಕಿನ ಪ್ರಮುಖ ಚಾರಣ ಪಥಗಳಲ್ಲಿ ದೋಣಿಮಲೈ ಚಾರಣ ಪಥ ಕೂಡ ಒಂದಾಗಿದ್ದು, ಮುಂಗಾರು ಮಳೆಯ ಸಿಂಚನದಿಂದ ಇದೀಗ ಹಸಿರುಟ್ಟು, ಪ್ರವಾಸಿಗರನ್ನು, ಚಾರಣಿಗರನ್ನು ಕೈಬೀಸಿ ಕರೆಯುತ್ತಿದೆ. ಇದರ ಸೌಂಧರ್ಯವನ್ನು ಸವಿಯಲು ಚಾರಣಿಗರು ಇದರತ್ತ ಮುಖ ಮಾಡಿದ್ದಾರೆ.

ಇದು ದಟ್ಟ ಕಾಡನ್ನು ಹೊಂದಿದ ಪ್ರದೇಶವಾಗಿದೆ. ದೋಣಿ ಕಣಿವೆಯಿಂದ ಭೈರವ ತೀರ್ಥ ಕೇವಲ ೩ ಕಿಮೀ ದೂರದಲ್ಲಿದೆ. ಚಿರತೆ, ಕರಡಿ, ಮೊಲ, ನವಿಲು ಮುಂತಾದ ಕಾಡು ಪ್ರಾಣಿ-ಪಕ್ಷಿಗಳು ಈ ಭಾಗದಲ್ಲಿವೆ. ಮಳೆಯ ಸಿಂಚನದಿಂದಾಗಿ ಹಸಿರುಟ್ಟ ಕಾಡು ಹಾಗೂ ಸುತ್ತಲಿನ ಸುಂದರ ಪರಿಸರ ಚಾರಣಿಗರನ್ನು, ಪ್ರಕೃತಿ ಆರಾಧಕರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದೆ ಎನ್ನುತ್ತಾರೆ ಚಾರಣಿಗ ಎಂ.ಪಿ. ಕಾರ್ತಿಕ್.

ಇದು ಬಹಳ ಸುಂದರ ನೈಸರ್ಗಿಕ ತಾಣವಾಗಿದೆ. ಇಲ್ಲಿ ಮೂರ್ನಾಲ್ಕು ಬಾರಿ ಚಾರಣ ನಡೆಸಿದ್ದೇವೆ. ಸುತ್ತಲೂ ಗುಡ್ಡಬೆಟ್ಟಗಳನ್ನು ಹೊಂದಿ ದೋಣಿಯಾಕಾರದಲ್ಲಿರುವ ಕಾರಣ, ಇದನ್ನು ದೋಣಿ ಕಣಿವೆ ಎಂದು ಕರೆಯಲಾಗುತ್ತಿದೆ ಎನ್ನುತ್ತಾರೆ ಚಾರಣಿಗ ಜಿ. ನಾಗೇಂದ್ರ ಕಾವೂರು.

PREV
Read more Articles on

Recommended Stories

ಫಾರಿನ್‌ಗೆ ಅನ್ನಭಾಗ್ಯ ಅಕ್ಕಿ 2 ರೈಸ್‌ಮಿಲ್‌ ಜಫ್ತಿ: ಕೇಸು
ಮುಂದೇಕೆ, ಈಗ್ಲೆ ಮುಸ್ಲಿಂ ಆಗ್ಬಿಡಿ : ಬಿಜೆಪಿಗರ ಕಿಡಿ