ವಿಜಯಪುರ ಶಾಸಕ ಯತ್ನಾಳ್ ವಿರುದ್ಧ ಕತ್ತೆ ಮೆರವಣಿಗೆ

KannadaprabhaNewsNetwork |  
Published : Sep 21, 2025, 02:00 AM IST
೨೦ಕೆಎಂಎನ್‌ಡಿ-೮ಮಂಡ್ಯದ ಜೆ.ಸಿ.ವೃತ್ತದಲ್ಲಿ ಯತ್ನಾಳ್ ಪ್ರತಿಕೃತಿಯನ್ನು ಕತ್ತೆಯ ಮೇಲೆ ಕೂರಿಸಿ ದಲಿತ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ದಲಿತ ಸಮುದಾಯದವರ ಬಗ್ಗೆ ನಾಲಿಗೆ ಹರಿಯಬಿಟ್ಟು ಅವಮಾನ ಮಾಡಿದ ಯತ್ನಾಳ್ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಆತನನ್ನು ದಲಿತ ಮಹಿಳೆಯರು ೨೦೨೮ಕ್ಕೆ ಸೋಲಿಸಿ ಮನೆಗೆ ಕಳುಹಿಸುತ್ತಾರೆ. ರಾಜ್ಯಾದ್ಯಂತ ದಲಿತರು ಇವರ ಮೇಲೆ ಕೇಸ್ ಹಾಕಲಿದ್ದಾರೆ. ಯತ್ನಾಳ್ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ದಲಿತ ಮಹಿಳೆಯರನ್ನು ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ದಲಿತ ಸಂಘಟನೆ ಕಾರ್ಯಕರ್ತರು ಶನಿವಾರ ಪ್ರತಿಭಟಿಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ದಸಂಸ ಕಾರ್ಯಕರ್ತರು, ಯತ್ನಾಳ್ ಪ್ರತಿಕೃತಿಯನ್ನು ಕತ್ತೆ ಮೇಲೆ ಕೂರಿಸಿ ಮೆರವಣಿಗೆ ಮಾಡಿ, ನಂತರ ಪ್ರತಿಕೃತಿ ದಹಿಸಲು ಮುಂದಾದಾಗ ಪೊಲೀಸರು ತಡೆದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಆದಾಗ್ಯೂ ಪ್ರತಿಕೃತಿ ದಹನಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ.

ದಲಿತ ಸಮುದಾಯದವರ ಬಗ್ಗೆ ನಾಲಿಗೆ ಹರಿಯಬಿಟ್ಟು ಅವಮಾನ ಮಾಡಿದ ಯತ್ನಾಳ್ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಆತನನ್ನು ದಲಿತ ಮಹಿಳೆಯರು ೨೦೨೮ಕ್ಕೆ ಸೋಲಿಸಿ ಮನೆಗೆ ಕಳುಹಿಸುತ್ತಾರೆ. ರಾಜ್ಯಾದ್ಯಂತ ದಲಿತರು ಇವರ ಮೇಲೆ ಕೇಸ್ ಹಾಕಲಿದ್ದಾರೆ. ಯತ್ನಾಳ್ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ದಲಿತ ಸಂಘಟನೆ ಮುಖಂಡರಾದ ನರಸಿಂಹಮೂರ್ತಿ, ಕೃಷ್ಣ, ಚೀರನಹಳ್ಳಿ ಲಕ್ಷ್ಮಣ್, ನಿರಂಜನ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ಆಟೋಕೃಷ್ಣ, ನಂಜುಂಡಮೌರ್ಯ ಇತರರು ಭಾಗವಹಿಸಿದ್ದರು.

ಎಟಿಎಂ ಕೇಂದ್ರಕ್ಕೆ ನಾಯಿಗಳ ಲಗ್ಗೆ: ಗ್ರಾಹಕರು ಭಯಭೀತ

ಕನ್ನಡಪ್ರಭ ವಾರ್ತೆ ಮಂಡ್ಯ

ಬೀದಿ ನಾಯಿಗಳ ಉಪಟಳ ದಿನೇ ದಿನೇ ಹೆಚ್ಚುತ್ತಲೇ ಇದೆ. ಇಲ್ಲಿನ ಎಟಿಎಂ ಕೇಂದ್ರಕ್ಕೆ ಏಳೆಂಟು ಬೀದಿನಾಯಿಗಳು ಲಗ್ಗೆ ಇಟ್ಟು ಗ್ರಾಹಕರನ್ನು ಭಯಭೀತಗೊಳಿಸಿದ ಘಟನೆ ನಡೆದಿದೆ.

ನಗರದ ಪಿಇಎಸ್ ಎಂಜಿನಿಯರಿಂಗ್ ಕಾಲೇಜು ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕ್ಯಾತುಂಗೆರೆ ಶಾಖೆಯ ಎಟಿಎಂ ಕೇಂದ್ರಕ್ಕೆ ನಾಯಿಗಳ ಹಿಂಡು ಲಗ್ಗೆಯಿಟ್ಟು ಗ್ರಾಹಕರು ಭಯಭೀತರನ್ನಾಗುವಂತೆ ಮಾಡಿತು. ಎಟಿಎಂ ಕೇಂದ್ರದೊಳಗೆ ನಾಯಿಗಳು ಬೀಡು ಬಿಟ್ಟಿದ್ದರಿಂದ ಹಣ ಡ್ರಾ ಮಾಡಲು ಬರುವ ಗ್ರಾಹಕರಲ್ಲಿ ಕೆಲಕಾಲ ಆತಂಕವನ್ನು ಸೃಷ್ಟಿಸಿದ್ದವು.

ನಾಯಿಗಳಿಗೆ ಹೆದರಿ ಎಟಿಎಂ ಕೇಂದ್ರದಿಂದ ಹಣ ಡ್ರಾ ಮಾಡುವ ಸಾಹಸಕ್ಕೆ ಮುಂದಾಗದ ಗ್ರಾಹಕರು ಬೇರೆ ಎಟಿಎಂ ಕೇಂದ್ರಗಳತ್ತ ಮುಖ ಮಾಡಿದ್ದರು. ನಾಯಿಗಳನ್ನು ಎಟಿಎಂ ಕೇಂದ್ರದಿಂದ ಹೊರಗೆ ಓಡಿಸುವ ಧೈರ್ಯವನ್ನೂ ಯಾರೂ ಕೂಡ ಮಾಡಲಿಲ್ಲ.

ಎಟಿಎಂ ಕೇಂದ್ರದಲ್ಲಿ ವಾಚ್ ಮೆನ್ ಇಲ್ಲದಿದ್ದ ಕಾರಣ ನಾಯಿಗಳ ಗುಂಪು ಒಳ ಹೊಕ್ಕು ಮಲಗಿದ್ದವು. ಎಟಿಎಂ ಕೇಂದ್ರಕ್ಕೆ ಶ್ವಾನ ಪಡೆಗಳೇ ಝಡ್- ಶ್ರೇಣಿಯ ಭದ್ರತೆ ಒದಗಿಸುತ್ತಿರುವುದಾಗಿ ಸಾರ್ವಜನಿಕರು ಕಿಡಿಕಾರಿ ವಾಚ್‌ಮೆನ್ ನಿಯೋಜಿಸುವಂತೆ ಬ್ಯಾಂಕ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

PREV

Recommended Stories

ಕುಕ್ಕೆ ಸುಬ್ರಹ್ಮಣ್ಯದಲ್ಲಿ 40 ಸೇವೆಗಳ ದರ ಪರಿಷ್ಕರಣೆ
ಟಾಕ್ಸಿಕ್‌ ಮುಂಬೈ ಶೂಟ್‌ ಮುಗಿಸಿ ಲಂಡನ್‌ಗೆ ಹಾರಿದ ಯಶ್‌