ಸಿರಿಧಾನ್ಯಗಳಿಂದ ಪೌಷ್ಟಿಕಾಂಶ ಭದ್ರತೆ: ಡಾ.ಕೆ.ಎಂ.ಹರಿಣಿಕುಮಾರ್

KannadaprabhaNewsNetwork |  
Published : Sep 21, 2025, 02:00 AM IST
೨೦ಕೆಎಂಎನ್‌ಡಿ-೭ಮಂಡ್ಯ ತಾಲ್ಲೂಕಿನ ವಿ.ಸಿ.ಫಾರಂನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಿದ್ದ ಸಿರಿಧಾನ್ಯಗಳ ಉತ್ಪಾದನೆ ತಾಂತ್ರಿಕತೆ, ಸಂಸ್ಕರಣೆ ಮತ್ತು ಮೌಲ್ಯ ವರ್ಧನೆ ಕುರಿತ ಒಂದು ದಿನದ ಕಾರ್ಯಾಗಾರ ನಡೆಯಿತು. | Kannada Prabha

ಸಾರಾಂಶ

ಸಿರಿಧಾನ್ಯಗಳನ್ನು ವೈಜ್ಞಾನಿಕವಾಗಿ ಬೆಳೆದು ಉತ್ತಮ ಇಳುವರಿ ಪಡೆದುಕೊಳ್ಳಬೇಕು. ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಮಾಡಿದರೆ ರೈತರು ಉದ್ದಿಮೆದಾರರಾಗಿ ಉತ್ತಮ ಆರ್ಥಿಕ ಬದುಕನ್ನು ಕಟ್ಟಿಕೊಳ್ಳಬಹುದು.

ಕನ್ನಡಪ್ರಭ ವಾರ್ತೆ ಮಂಡ್ಯ

ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಒದಗಿಸುವುದರ ಜೊತೆಗೆ ಪೌಷ್ಟಿಕಾಂಶದ ಭದ್ರತೆಯನ್ನು ಕಾಪಾಡುವಲ್ಲಿ ಪೋಷಕಾಂಶಗಳ ಆಗರ ಎನಿಸಿಕೊಂಡಿರುವ ಸಿರಿಧಾನ್ಯಗಳು ಹೆಚ್ಚು ಪ್ರಯೋಜನಕಾರಿಯಾಗಿವೆ ಎಂದು ಕೃಷಿ ವಿವಿ ವಿಶೇಷಾಕಾರಿ ಡಾ.ಕೆ.ಎಂ.ಹರಿಣಿಕುಮಾರ್ ತಿಳಿಸಿದರು.

ತಾಲೂಕಿನ ವಿ.ಸಿ.ಫಾರಂನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಿದ್ದ ಸಿರಿಧಾನ್ಯಗಳ ಉತ್ಪಾದನೆ ತಾಂತ್ರಿಕತೆ, ಸಂಸ್ಕರಣೆ ಮತ್ತು ಮೌಲ್ಯ ವರ್ಧನೆ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸಿರಿಧಾನ್ಯಗಳು ಸಾಂಪ್ರದಾಯಿಕ ಬೆಳೆಗಳಾಗಿದ್ದು ಕಡಿಮೆ ನೀರು, ಕಡಿಮೆ ಖರ್ಚಿನೊಂದಿಗೆ ಖುಷ್ಕಿ ಭೂಮಿಯಲ್ಲಿ ಹೆಚ್ಚಾಗಿ ಬೆಳೆಯಬಹುದು. ಸಿರಿಧಾನ್ಯಗಳು ಆರೋಗ್ಯವರ್ಧಕ, ಹಲವು ಬಗೆಯ ರೋಗ ನಿವಾರಣೆಗೆ ಉಪಯುಕ್ತವಾಗಿವೆ ಎಂದರು. ಕೃಷಿ ವಿವಿಯ ವಿಸ್ತರಣಾ ನಿರ್ದೇಶಕ ಡಾ.ಸಿ.ರಾಮಚಂದ್ರ ಮಾತನಾಡಿ, ಸಿರಿಧಾನ್ಯಗಳನ್ನು ವೈಜ್ಞಾನಿಕವಾಗಿ ಬೆಳೆದು ಉತ್ತಮ ಇಳುವರಿ ಪಡೆದುಕೊಳ್ಳಬೇಕು. ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಮಾಡಿದರೆ ರೈತರು ಉದ್ದಿಮೆದಾರರಾಗಿ ಉತ್ತಮ ಆರ್ಥಿಕ ಬದುಕನ್ನು ಕಟ್ಟಿಕೊಳ್ಳಬಹುದು ಎಂದರು.

ಹೈದರಾಬಾದ್‌ನ ಭಾರತೀಯ ಸಿರಿಧಾನ್ಯಗಳ ಸಂಶೋಧನೆ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ಸಂಗಪ್ಪ ಮಾತನಾಡಿ, ನಮ್ಮ ಸಂಸ್ಥೆ ಸಿರಿಧಾನ್ಯಗಳಿಗೆ ಸಂಬಂಧಪಟ್ಟಂತೆ ದೇಶಾದ್ಯಂತ ಉತ್ತಮ ಕೆಲಸ ಮಾಡುತ್ತಿದೆ. ನವೀನ ತಂತ್ರಜ್ಞಾನಗಳನ್ನು ರೈತರಿಗೆ ತಲುಪಿಸುತ್ತಾ, ಸಿರಿಧಾನ್ಯಗಳ ಉದ್ದಿಮೆದಾರರನ್ನು ಸೃಷ್ಟಿಸಿ ಆರ್ಥಿಕ ಬದುಕನ್ನು ಉತ್ತಮಗೊಳಿಸುವ ಜೊತೆಗೆ ಸಾವಿರಾರು ಜನರಿಗೆ ಉದ್ಯೋಗವನ್ನು ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದೆ ಎಂದರು.

ತಾಂತ್ರಿಕ ಅಧಿವೇಶನದ ಅಂಗವಾಗಿ ಸಿರಿಧಾನ್ಯಗಳ ಉತ್ಪಾದನಾ ತಾಂತ್ರಿಕತೆಗಳು, ಸಿರಿಧಾನ್ಯಗಳ ಮೌಲ್ಯ ಸರಪಣಿಯಲ್ಲಿ ರೈತ ಉತ್ಪಾದಕ ಕಂಪನಿಯ ಪಾತ್ರ, ಸಿರಿಧಾನ್ಯಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಪೌಷ್ಟಿಕ ಮತ್ತು ಆರ್ಥಿಕ ಭದ್ರತೆಗೆ ಸಿರಿಧಾನ್ಯಗಳ ಮಹತ್ವ, ಸಿರಿಧಾನ್ಯಗಳ ಮಾರುಕಟ್ಟೆಯ ತಂತ್ರ ಮತ್ತು ಸಿರಿಧಾನ್ಯಗಳ ಯಶೋಗಾಥೆ ಮುಂತಾದ ವಿಷಯಗಳ ಬಗ್ಗೆ ವಿಜ್ಞಾನಿಗಳು ರೈತರೊಂದಿಗೆ ಮಾಹಿತಿಯನ್ನು ಹಂಚಿಕೊಂಡರು. ಕಾರ್ಯಕ್ರಮ ಮುಗಿದ ನಂತರ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಯಿಂದ ಆಗಮಿಸಿದ್ದ ೫೦ ಪರಿಶಿಷ್ಟ ಜಾತಿಯ ರೈತರುಗಳಿಗೆ ಕೃಷಿ ಪರಿಕರಗಳನ್ನು ವಿತರಿಸಲಾಯಿತು.

ಈ ವೇಳೆ ಹಿರಿಯ ವಿಜ್ಞಾನಿ ಡಾ.ಕಮಲಬಾಯಿ ಕೂಡಗಿ, ಸಹವಿಸ್ತರಣಾ ನಿರ್ದೇಶಕ ಡಾ.ಎ.ಡಿ.ರಂಗನಾಥ್, ಕಿರಿಯ ಬೇಸಾಯ ಶಾಸ್ತ್ರಜ್ಞ ಡಾ. ಸುನಿಲ್, ಪ್ರಾಧ್ಯಾಪಕರಾದ ಡಾ.ಚಂದ್ರಕಲಾ ಅಣಗಿ, ಡಾ.ಅರುಣ್ ಕುಮಾರ್, ಸ.ಪ್ರಾಧ್ಯಾಪಕರಾದ ಡಾ.ಲಕ್ಷ್ಮಿ ಬಳಗನೂರ ಮಠ, ಡಾ.ಸುರೇಶ್, ಡಾ.ಬಸವಲಿಂಗಯ್ಯ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ