ಮೈಷುಗರ್‌: ಟ್ಯಾಂಕ್ ಒಡೆದು ಮೊಲಾಸಸ್ ಮಣ್ಣುಪಾಲು..!

KannadaprabhaNewsNetwork |  
Published : Sep 21, 2025, 02:00 AM IST
೨೦ಕೆಎಂಎನ್‌ಡಿ-೧ಮೈಷುಗರ್ ಕಾರ್ಖಾನೆಯೊಳಗಿನ ಮೊಲಾಸಸ್ ಟ್ಯಾಂಕ್ ಬಿರುಕುಬಿಟ್ಟು ದ್ರವರೂಪದ ಮೊಲಾಸಸ್ ನೆಲಕ್ಕೆ ಸುರಿಯುತ್ತಿರುವ ದೃಶ್ಯ. | Kannada Prabha

ಸಾರಾಂಶ

ಮೈಷುಗರ್ ಕಾರ್ಖಾನೆಯಲ್ಲಿ ಮೊಲಾಸಸ್ ಟ್ಯಾಂಕ್ ಒಡೆದ ಪರಿಣಾಮ ೧೨೦೦ಕ್ಕೂ ಹೆಚ್ಚು ಟನ್ ಮೊಲಾಸಸ್ ಮಣ್ಣುಪಾಲಾಗಿರು ಘಟನೆ ತಡರಾತ್ರಿ ನಡೆದಿದೆ. ಬೆಳಗ್ಗೆ ಟ್ಯಾಂಕ್ ಒಡೆದು ಮೊಲಾಸಸ್ ನೆಲಕ್ಕೆ ಸುರಿಯುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಅಷ್ಟರ ವೇಳೆಗೆ ಕೋಟ್ಯಂತರ ರು. ಮೌಲ್ಯದ ಮೊಲಾಸಸ್ ನಷ್ಟವಾಗಿರುವುದು ಕಂಡುಬಂದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಷುಗರ್ ಕಾರ್ಖಾನೆಯಲ್ಲಿ ಮೊಲಾಸಸ್ ಟ್ಯಾಂಕ್ ಒಡೆದ ಪರಿಣಾಮ ೧೨೦೦ಕ್ಕೂ ಹೆಚ್ಚು ಟನ್ ಮೊಲಾಸಸ್ ಮಣ್ಣುಪಾಲಾಗಿರು ಘಟನೆ ತಡರಾತ್ರಿ ನಡೆದಿದೆ. ಬೆಳಗ್ಗೆ ಟ್ಯಾಂಕ್ ಒಡೆದು ಮೊಲಾಸಸ್ ನೆಲಕ್ಕೆ ಸುರಿಯುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಅಷ್ಟರ ವೇಳೆಗೆ ಕೋಟ್ಯಂತರ ರು. ಮೌಲ್ಯದ ಮೊಲಾಸಸ್ ನಷ್ಟವಾಗಿರುವುದು ಕಂಡುಬಂದಿದೆ.

ಕಾರ್ಖಾನೆಯಲ್ಲಿರುವ ಒಂಬತ್ತನೇ ನಂಬರ್‌ನ ಟ್ಯಾಂಕ್‌ನಲ್ಲಿ ಬಿರುಕು ಕಾಣಿಸಿಕೊಂಡು ಮೊಲಾಸಸ್ ನೀರಿನಂತೆ ಹರಿಯಲಾರಂಭಿಸಿದೆ. ತಡರಾತ್ರಿಯಿಂದಲೇ ಆವರಣ ದ್ರವರೂಪದ ಮೊಲಾಸಸ್‌ನಿಂದ ತುಂಬಿಹೋಗಿತ್ತು. ಮೊಲಾಸಸ್ ಸಂಗ್ರಹಿಸುವ ಟ್ಯಾಂಕ್‌ನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದೇ ಘಟನೆಗೆ ಕಾರಣವೆಂದು ಹೇಳಲಾಗಿದೆ.

ಟ್ಯಾಂಕ್‌ನ ಬಿರುಕು ಬಿಟ್ಟಿರುವ ಜಾಗವನ್ನು ಮುಚ್ಚುವುದಕ್ಕೆ ಕಾರ್ಖಾನೆ ಸಿಬ್ಬಂದಿ ಹರಸಾಹಸ ನಡೆಸಿದ್ದಾರೆ. ಅಷ್ಟರಲ್ಲಾಗಲೇ ೧೨೦೦ ಟನ್‌ಗೂ ಹೆಚ್ಚು ಮೊಲಾಸಸ್ ಟ್ಯಾಂಕ್‌ನಿಂದ ನೆಲಕ್ಕೆ ಸುರಿದುಹೋಗಿತ್ತು. ಆರಂಭದಲ್ಲೇ ಗಮನಿಸಿದ್ದರೆ ಹೆಚ್ಚು ನಷ್ಟವಾಗುವುದನ್ನು ತಪ್ಪಿಸಬಹುದಾಗಿತ್ತು ಎಂದು ಕಾರ್ಖಾನೆಯೊಳಗಿನ ಹಲವರು ಹೇಳುವ ಮಾತಾಗಿದೆ.

ಒಂಬತ್ತನೇ ಟ್ಯಾಂಕ್‌ನಲ್ಲಿ ಬಿರುಕು:

ಕಾರ್ಖಾನೆಯಲ್ಲಿ ಮೊಲಾಸಸ್ ಸಂಗ್ರಹಿಸುವ ೯ ಟ್ಯಾಂಕ್‌ಗಳಿದ್ದು, ಈಗ ಬಿರುಕು ಬಿಟ್ಟಿರುವ ಟ್ಯಾಂಕ್ ೯ನೇ ಟ್ಯಾಂಕ್ ಆಗಿದೆ. ಸುಮಾರು ೪೦೦೦ ಟನ್ ಮೊಲಾಸಸ್ ಸಂಗ್ರಹ ಸಾಮರ್ಥ್ಯವಿರುವ ಈ ಟ್ಯಾಂಕ್‌ನ್ನು ಅನ್‌ಲೋಡ್ ಉದ್ದೇಶಕ್ಕೆ ಬಳಸಲಾಗುತ್ತಿತ್ತು. ಕಬ್ಬಿಣದ ಶೀಟ್‌ಗಳನ್ನು ವೆಲ್ಡಿಂಗ್ ಮಾಡಿರುವ ಜಾಗ ತುಕ್ಕು ಹಿಡಿದಿತ್ತು. ಅದೇ ಜಾಗದಲ್ಲಿ ನೇರವಾಗಿ ಬಿರುಕು ಕಾಣಿಸಿಕೊಂಡು ಮೊಲಾಸಸ್ ಸೋರಿಕೆಯಾಗಿದೆ.

೧೨೦೦ ಟನ್ ಮೊಲಾಸಸ್ ನಷ್ಟ:

ಈಗಾಗಲೇ ಕಾರ್ಖಾನೆ ಆಡಳಿತ ಮಂಡಳಿ ೫ ಸಾವಿರ ಟನ್ ಮೊಲಾಸಸ್‌ನ್ನು ಟನ್‌ಗೆ ೧೧,೪೦೦ ರು.ನಂತೆ ಮದ್ದೂರು ತಾಲೂಕು ಕೊಪ್ಪದಲ್ಲಿರುವ ಎನ್‌ಎಸ್‌ಎಲ್ ಕಾರ್ಖಾನೆಗೆ ಮಾರಾಟಕ್ಕೆ ಒಪ್ಪಂದವಾಗಿತ್ತು. ಹಣ ಕಟ್ಟುವುದು ಬಾಕಿ ಇತ್ತು. ಅಷ್ಟರಲ್ಲೇ ಈ ದುರಂತ ನಡೆದಿದೆ. ೧೨೦೦ ಟನ್ ಮೊಲಾಸಸ್ ಮಣ್ಣುಪಾಲಾಗಿರುವುದರಿಂದ ಕಾರ್ಖಾನೆಗೆ ಸುಮಾರು ೧.೩೬ ಕೋಟಿ ರು.ನಷ್ಟು ನಷ್ಟವಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಕಾರ್ಖಾನೆಯಲ್ಲಿ ಇದುವರೆಗೂ ೧ ಲಕ್ಷಕ್ಕೂ ಹೆಚ್ಚು ಟನ್ ಕಬ್ಬನ್ನು ಅರೆಯಲಾಗಿದ್ದು, ಶೇ.೬.೫ರಷ್ಟು ಇಳುವರಿ ಇದೆ. ಇಳುವರಿ ಕಡಿಮೆ ಇರುವುದರಿಂದ ಹೆಚ್ಚು ಪ್ರಮಾಣದಲ್ಲಿ ಮೊಲಾಸಸ್ ಸಂಗ್ರಹವಾಗಿತ್ತು. ೯ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಬಹುದಾದ ಮೊಲಾಸಸನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದಿರುವುದೇ ಈ ದುರಂತಕ್ಕೆ ಕಾರಣವೆಂದು ಹೇಳಲಾಗಿದೆ.

ಮ್ಯಾನೇಜರ್, ಚೀಫ್ ಕೆಮಿಸ್ಟ್ ನಿರ್ಲಕ್ಷ್ಯ:

ಮೊಲಾಸಸ್ ಸಂಗ್ರಹಿಸುವ ಟ್ಯಾಂಕ್‌ಗಳು ಶಿಥಿಲಾವಸ್ಥೆಯಲ್ಲಿದ್ದು, ಅವುಗಳನ್ನು ತುರ್ತಾಗಿ ದುರಸ್ತಿ ಮಾಡಬೇಕಿರುವ ಬಗ್ಗೆ ಸಂಬಂಧಪಟ್ಟ ಕಾರ್ಖಾನೆ ಸಿಬ್ಬಂದಿ ಲಿಖಿತ ರೂಪದಲ್ಲಿ ಮ್ಯಾನೇಜರ್ ಅವರಿಗೆ ನೀಡಿದ್ದರು ಎಂದು ಹೇಳಲಾಗಿದ್ದು, ಅದನ್ನು ಕಾರ್ಖಾನೆ ಆರಂಭಕ್ಕೂ ಮುನ್ನವೇ ಎಚ್ಚೆತ್ತುಕೊಂಡು ದುರಸ್ತಿ ಮಾಡಿಸಬೇಕಿತ್ತು. ಈ ವಿಚಾರದಲ್ಲಿ ಕಾರ್ಖಾನೆಯ ಮ್ಯಾನೇಜರ್ ಮತ್ತು ಚೀಫ್ ಕೆಮಿಸ್ಟ್ ಅವರು ವಹಿಸಿರುವ ನಿರ್ಲಕ್ಷ್ಯದಿಂದಲೇ ಮೊಲಾಸಸ್ ಟ್ಯಾಂಕ್ ಬಿರುಕು ಬಿಡುವುದಕ್ಕೆ ಮೂಲ ಕಾರಣವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈಗ ಆಗಿರುವ ನಷ್ಟಕ್ಕೂ ಅವರೇ ಹೊಣೆಗಾರರು ಎಂದು ದೂರಲಾಗುತ್ತಿದೆ.

ಅಬಕಾರಿ ಅಧಿಕಾರಿಗಳಿಂದ ಪರಿಶೀಲನೆ:

ಮೊಲಾಸಸ್ ಟ್ಯಾಂಕ್ ಬಿರುಕು ಬಿಟ್ಟು ಸೋರಿಕೆಯಾಗಿರುವ ವಿಷಯ ತಿಳಿದು ಕಾರ್ಖಾನೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಷ್ಟು ಪ್ರಮಾಣದಲ್ಲಿ ಮೊಲಾಸಸ್ ಸೋರಿಕೆಯಾಗಿದೆ, ಎಷ್ಟು ಸಂಗ್ರಹವಾಗಿತ್ತು. ಸೋರಿಕೆಗೆ ಕಾರಣವೇನು ಎಂಬೆಲ್ಲಾ ಮಾಹಿತಿಯನ್ನು ಕಾರ್ಖಾನೆ ಅಧಿಕಾರಿಗಳಿಂದ ಪಡೆದುಕೊಂಡಿದ್ದಾರೆ.ಒಂಬತ್ತು ಟ್ಯಾಂಕ್‌ಗಳ ಮೊಲಾಸಸ್ ಸಂಗ್ರಹ ಸಾಮರ್ಥ್ಯವೆಷ್ಟು?

ಕಾರ್ಖಾನೆಯಲ್ಲಿ ಮೊಲಾಸಸ್ ಸಂಗ್ರಹಿಸುವ ಒಟ್ಟು ೯ ಟ್ಯಾಂಕ್‌ಗಳಿದ್ದು, ಕೆಲವೊಂದು ಟ್ಯಾಂಕ್‌ಗಳ ಎತ್ತರ ಮತ್ತು ಸಂಗ್ರಹಣಾ ಸಾಮರ್ಥ್ಯ ಬೇರೆ ಬೇರೆಯಾಗಿದೆ. ಇವುಗಳಲ್ಲಿ ಈಗ ಬಿರುಕು ಬಿಟ್ಟಿರುವ ೯ನೇ ಟ್ಯಾಂಕ್ ಅತಿ ದೊಡ್ಡ ಟ್ಯಾಂಕ್ ಆಗಿದ್ದು, ೩೨ ಅಡಿ ಎತ್ತರವಿದ್ದು, ಒಂದು ಅಡಿಗೆ ೧೨೫ ಟನ್ ಮೊಲಾಸಸ್ ಸಂಗ್ರಹಿಸಬಹುದಾಗಿದೆ. ಇದರ ಒಟ್ಟಾರೆ ಸಾಮರ್ಥ್ಯ ೪ ಸಾವಿರ ಟನ್ ಆಗಿದೆ. ಇನ್ನುಳಿದಂತೆ ಮೊದಲನೇ, ಎರಡನೇ ಮತ್ತು ಆರನೇ ಟ್ಯಾಂಕ್ ೨೦ ಅಡಿ ಎತ್ತರವಿದ್ದು ೧೫೦೦ ಟನ್ ಮೊಲಾಸಸ್ ಸಂಗ್ರಹಣಾ ಸಾಮರ್ಥ್ಯ ಹೊಂದಿವೆ. ಮೂರನೇ ಟ್ಯಾಂಕ್ ೨೪ ಅಡಿ ಎತ್ತರವಿದ್ದು ೨೬೦೦ ಟನ್, ನಾಲ್ಕನೇ ಟ್ಯಾಂಕ್ ೩೪ ಅಡಿ ಎತ್ತರವಿದ್ದು ೧೭೦೦ ಟನ್, ಐದನೇ ಟ್ಯಾಂಕ್ ೩೬ ಅಡಿ ಎತ್ತರವಿದ್ದು, ೧೮೦೦ ಟನ್, ಏಳನೇ ಮತ್ತು ಎಂಟನೇ ಟ್ಯಾಂಕ್ ೩೦ ಅಡಿ ಎತ್ತರವಿದ್ದು ೭೫೦ ಟನ್ ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿವೆ.೧೦ ರಿಂದ ೧೫ ಟನ್ ಮೊಲಾಸಸ್ ನಷ್ಟ: ಸಿ.ಡಿ.ಗಂಗಾಧರ್

ಕಾರ್ಖಾನೆಯ ಟ್ಯಾಂಕ್ ಬಿರುಕು ಬಿಟ್ಟು ೧೦ ರಿಂದ ೧೫ ಟನ್ ಮೊಲಾಸಸ್ ನಷ್ಟವಾಗಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ನಷ್ಟದ ಪ್ರಮಾಣವನ್ನು ಅಂದಾಜಿಸುತ್ತಿದ್ದಾರೆ. ೫ ಸಾವಿರ ಟನ್ ಮೊಲಾಸಸ್‌ನ್ನು ಟನ್‌ಗೆ ೧೧,೪೦೦ ರು.ನಂತೆ ಎನ್‌ಎಸ್‌ಎಲ್ ಷುಗರ್ಸ್‌ಗೆ ಮಾರಾಟ ಮಾಡಲಾಗಿದ್ದು, ಅದನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಸರಿಯಾದ ಸಮಯಕ್ಕೆ ಟ್ಯಾಂಕ್‌ನ ಬಿರುಕನ್ನು ಮುಚ್ಚಿ ಹೆಚ್ಚು ನಷ್ಟವಾಗುವುದನ್ನು ತಡೆದಿದ್ದೇವೆ. ಮೊಲಾಸಸ್ ನಷ್ಟದ ಬಗ್ಗೆ ಹಬ್ಬಿಸಲಾಗುತ್ತಿರುವ ಸುಳ್ಳು ಮಾಹಿತಿಗಳನ್ನು ನಂಬಬಾರದು. ಕಾರ್ಖಾನೆಯಲ್ಲಿ ಸಂಗ್ರಹವಾಗಿದ್ದ ೧೨ ಸಾವಿರ ಕ್ವಿಂಟಾಲ್ ಸಕ್ಕರೆಯನ್ನು ಕ್ವಿಂಟಾಲ್‌ಗೆ ೩೮೬೫ ರು.ನಂತೆ ಮಾರಾಟ ಮಾಡಲಾಗಿದೆ. ರೈತರ ಕಬ್ಬಿನ ಹಣ ಪಾವತಿಗೆ ಯಾವುದೇ ತೊಂದರೆ ಇಲ್ಲ. ಇದುವರೆಗೆ ೧.೦೨ ಲಕ್ಷ ಟನ್ ಕಬ್ಬು ಅರೆಯಲಾಗಿದ್ದು, ಶೇ.೭ರಷ್ಟು ಇಳುವರಿ ದೊರಕಿದೆ.

- ಸಿ.ಡಿ.ಗಂಗಾಧರ್, ಅಧ್ಯಕ್ಷರು, ಮೈಷುಗರ್ ಕಾರ್ಖಾನೆಜನರ ತೆರಿಗೆ ಹಣ ಪೋಲು

ಮೈಷುಗರ್ ಕಾರ್ಖಾನೆ ಸುಧಾರಣೆಗೆ ಸರ್ಕಾರ ಎಷ್ಟೇ ಕೋಟಿ ಬಿಡುಗಡೆ ಮಾಡಿದರೂ ಕಂಪನಿ ಚೇತರಿಕೆ ಕಾಣುವ ಲಕ್ಷಣಗಳೇ ಕಂಡುಬರುತ್ತಿಲ್ಲ. ಒಂದಲ್ಲಾ ಒಂದು ರೀತಿಯಲ್ಲಿ ಜನರ ತೆರಿಗೆ ಹಣ ಪೋಲಾಗುತ್ತಲೇ ಇದೆ. ನೇಪಾಳಕ್ಕೆ ಸಕ್ಕರೆ ಮಾರಾಟಕ್ಕೆ ಕಟ್ಟಿದ್ದ ೬೫ ಲಕ್ಷ ರು. ವಾಪಸ್ ಬರಲಿಲ್ಲ. ನಾಗರಾಜಪ್ಪ ಅಧ್ಯಕ್ಷರಾಗಿದ್ದಾಗ ಡಮ್ಮಿ ಒಡೆದು ಸ್ಪಿರಿಟ್ ಸೋರಿಕೆ ಹಗರಣ ತಾರ್ಕಿಕ ಅಂತ್ಯ ಕಾಣಲಿಲ್ಲ. ಹಿಂದೆ ಆ್ಯಂಟೋನಿ ಮೆಂಡೋಜಾ ಸಕ್ಕರೆ ಬರದೆ ಮೊಲಾಸಸ್ ಮಾಡಿದ್ದ ಪ್ರಕರಣವೂ ಮುಚ್ಚಿಹೋಯಿತು. ಈಗ ಮೊಲಾಸಸ್ ಸೋರಿಕೆ. ನಿರ್ವಹಣೆ ಕೊರತೆ, ಆಡಳಿತಮಂಡಳಿಯ ಬೇಜವಾಬ್ದಾರಿತನದಿಂದ ಕಾರ್ಖಾನೆ ನಷ್ಟದಲ್ಲೇ ಸೊರಗುವಂತಾಗಿದೆ.

- ಎಸ್.ಕೃಷ್ಣ, ಅಧ್ಯಕ್ಷರು, ಮೈಷುಗರ್ ಕಬ್ಬು ಒಪ್ಪಿಗೆದಾರರ ಸಂಘನಿರ್ವಹಣೆ ಕೊರತೆಯಿಂದ ಬಿರುಕು

ಟ್ಯಾಂಕ್‌ಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವ ಕಾರಣದಿಂದ ಬಿರುಕು ಬಿಟ್ಟಿದೆ. ಸುಮಾರು ೧೫೦೦ ಸಾವಿರ ಟನ್ ದ್ರವರೂಪದ ಮೊಲಾಸಸ್ ಮಣ್ಣು ಸೇರಿದೆ. ಇಳುವರಿ ಕಡಿಮೆ ಇರುವುದರಿಂದ ಮೊಲಾಸಸ್ ಹೆಚ್ಚು ಉತ್ಪಾದನೆಯಾಗಿರುವುದರಿಂದ ವಾಸ್ತವವನ್ನು ಅಧಿಕಾರಿಗಳು ಮುಚ್ಚಿಡುತ್ತಿದ್ದಾರೆ. ೫ ಸಾವಿರ ಟನ್ ಮೊಲಾಸಸ್ ಮಾರಾಟಕ್ಕೆ ಸಿದ್ಧವಾಗಿತ್ತಷ್ಟೇ. ಎನ್‌ಎಸ್‌ಎಲ್ ಕಂಪನಿಯವರು ಇನ್ನೂ ಹಣ ಕಟ್ಟಿಲ್ಲ. ಅಷ್ಟರಲ್ಲೇ ದುರಂತ ನಡೆದುಹೋಗಿದೆ. ಇದರಿಂದ ಕಾರ್ಖಾನೆಗೆ ಕೋಟ್ಯಂತರ ರು. ನಷ್ಟವಾಗಿದೆ. ಇದಕ್ಕೆ ಮ್ಯಾನೇಜರ್, ಚೀಫ್ ಕೆಮಿಸ್ಟ್ ನೇರ ಹೊಣೆಗಾರರು.

- ಸಾತನೂರು ವೇಣುಗೋಪಾಲ್, ಅಧ್ಯಕ್ಷರು, ಕಬ್ಬು ಬೆಳೆಗಾರರ ಸಂಘಡಿಸ್ಟಿಲರಿ ಟ್ಯಾಂಕ್‌ಗೆ ವರ್ಗಾವಣೆ

ಮುಂಜಾನೆ ಮೊಲಾಸಸ್‌ ಟ್ಯಾಂಕ್‌ನಲ್ಲಿ ಬಿರುಕು ಮೂಡಿ ಸೋರಿಕೆಯಾಗುತ್ತಿತ್ತು. ತಕ್ಷಣವೇ ಅದನ್ನು ನಿಲ್ಲಿಸಿದ್ದೇವೆ. ತಕ್ಷಣವೇ ಜೆಸಿಬಿಯಿಂದ ಗುಂಡಿ ತೋಡಿ ಮೊಲಾಸಸ್‌ ನಷ್ಟವಾಗದಂತೆ ಸಂಗ್ರಹಿಸಿದ್ದೇವೆ. ಬಿರುಕು ಮೂಡಿದ್ದ ಟ್ಯಾಂಕ್‌ನಿಂದ ಡಿಸ್ಟಿಲರಿ ಟ್ಯಾಂಕ್‌ಗೆ ಮೊಲಾಸಸ್‌ನ್ನು ವರ್ಗಾವಣೆ ಮಾಡಿಸಿದ್ದೇವೆ. ಟ್ಯಾಂಕರ್‌ಗಳನ್ನು ಕರೆಸಿ ಎನ್‌ಎಸ್‌ಎಲ್‌ ಷುಗರ್ಸ್‌ಗೆ ಮೊಲಾಸಸ್‌ನ್ನು ಕಳುಹಿಸಲಾಗುತ್ತಿದೆ. ಸೋರಿಕೆ ಸಂಪೂರ್ಣ ನಿಲುಗಡೆಯಾಗಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ. 4 ರಿಂದ 5 ಟನ್‌ ಮೊಲಾಸಸ್‌ ಹೋಗಿದೆಯಷ್ಟೇ. ಅದನ್ನೂ ಗುಂಡಿಯಲ್ಲಿ ಸಂಗ್ರಹಿಸಿಟ್ಟಿದ್ದೇವೆ. ಅಬಕಾರಿ ಇಲಾಖೆ ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದಾರೆ. ನಾವೂ ಎಲ್ಲಾ ಮಾಹಿತಿ ನೀಡಿದ್ದೇವೆ.

- ಪಾಪಣ್ಣ, ಚೀಫ್‌ ಕೆಮಿಸ್ಟ್‌, ಮೈಷುಗರ್‌ ಕಾರ್ಖಾನೆ

ಕಾರ್ಖಾನೆ ಮುಟ್ಟುಗೋಲು ಹಾಕಿಕೊಳ್ಳಲು ಒತ್ತಾಯ

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಷುಗರ್ ಕಾರ್ಖಾನೆಯಲ್ಲಿ ಟ್ಯಾಂಕ್ ಬಿರುಕು ಬಿಟ್ಟು ಸಾವಿರಾರು ಟನ್ ದ್ರವರೂಪದ ಮೊಲಾಸಸ್ ನೆಲಕ್ಕೆ ಬಿದ್ದು ಹಾಳಾಗಿ ಕೋಟ್ಯಂತರ ರು. ನಷ್ಟ ಸಂಭವಿಸಿದೆ. ಹಾಗಾಗಿ ಕಾರ್ಖಾನೆಯನ್ನು ತಕ್ಷಣದಿಂದಲೇ ಮುಟ್ಟುಗೋಲು ಹಾಕಿಕೊಳ್ಳುವಂತೆ ಜಿಲ್ಲಾಧಿಕಾರಿಗಳನ್ನು ನಗರಸಭೆ ಮಾಜಿ ಸದಸ್ಯ ಶಿವಕುಮಾರ ಕೆಂಪಯ್ಯ ಒತ್ತಾಯಿಸಿದ್ದಾರೆ.

ಮೊಲಾಸಸ್ ಹಾಳಾಗಿರುವುದಕ್ಕೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಕೆ.ಮಂಗಲ್‌ದಾಸ್, ಪ್ರಧಾನ ವ್ಯವಸ್ಥಾಪಕ ಅಪ್ಪಾಸಾಹೇಬ್ ಪಾಟೀಲ್ ಬೇಜವಾಬ್ದಾರಿತನವೇ ಈ ನಷ್ಟಕ್ಕೆ ಪ್ರಮುಖ ಕಾರಣವಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ರೈತರನ್ನು ಹೊರತುಪಡಿಸಿ ಹಣಕಾಸು ವಿಭಾಗದಿಂದ ತಾಂತ್ರಿಕ ವಿಭಾಗ ಮತ್ತು ಆರ್.ಬಿ.ಟೆಕ್ ಕಂಪನಿಗೆ ತಕ್ಷಣದಿಂದಲೇ ಹಣ ಬಿಡುಗಡೆ ಮಾಡುವುದನ್ನು ನಿಲ್ಲಿಸಬೇಕು. ಜಿಲ್ಲಾಡಳಿತ ಹಾಗೂ ಜಿಲ್ಲಾ ಕೈಗಾರಿಕೆ ಇಲಾಖೆ ಹಣಕಾಸಿನ ವಿಭಾಗವನ್ನು ಮುಟ್ಟುಗೋಲು ಹಾಕಿಕೊಂಡು ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾರ್ಖಾನೆ ಆಗುತ್ತಿರುವ ನಷ್ಟವನ್ನು ಸರ್ಕಾರದ ಗಮನಕ್ಕೆ ತಂದು ನಷ್ಟವನ್ನು ತಪ್ಪಿಸಬೇಕಾಗಿ ಕೋರಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ
ರಾಜಕೀಯಕ್ಕಾಗಿ ಪಿಣರಾಯಿ ಮಾತು: ಪ್ರಿಯಾಂಕ್‌ ಆಕ್ರೋಶ