ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರಕೇವಲ ಮೂರು ಲಕ್ಷ ಬಂಡವಾಳ ಹಾಕಿದರೆ ಸಾಕು ತಿಂಗಳಿಗೆ ಲಕ್ಷ ಲಾಭ ಸಿಗಲಿದೆ ಎಂದು ನಂಬಿಸಿ ಕಂಪನಿಯೊಂದು ವಿಜಯಪುರ, ವಿಜಯನಗರ, ಬಳ್ಳಾರಿ, ಬಾಗಲಕೋಟೆ, ರಾಯಚೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನೂರಾರು ಜನರಿಗೆ ವಂಚನೆ ಮಾಡಿದೆ. ಕತ್ತೆ ಹಾಲಿನ ವ್ಯಾಪಾರ ಮಾಡಿ ಎಂದು ನಂಬಿಸಿದ ತಂಡ ಅಮಾಯಕರಿಂದ ₹13.50 ಕೋಟಿ ಹಣ ಕಟ್ಟಿಸಿಕೊಂಡು ಪರಾರಿಯಾಗಿದೆ. ಈ ಡಾಂಕಿ ಮಿಲ್ಕ್ ನಂಬಿದವರೆಲ್ಲ ಮೋಸಕ್ಕೆ ಒಳಗಾಗಿದ್ದಾರೆ. ಇನ್ನು, ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಲು ಪೊಲೀಸರು ಕೂಡ ಚಿಂತನೆ ನಡೆಸಿದ್ದಾರೆ.ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ನೂತಲಪತಿ ಮುರಳಿ ಎಂಬ ವ್ಯಕ್ತಿಯೊಬ್ಬ ಕತ್ತೆ ಹಾಲಿನ ವ್ಯಾಪಾರ ಶುರು ಮಾಡಿದ್ದ. ಮೂರು ಲಕ್ಷ ಹೂಡಿಕೆ ಮಾಡಿ ಜಿನ್ನಿ ಮಿಲ್ಕ್ ಬಿಸಿನೆಸ್ ಶುರುಮಾಡಿ ತಿಂಗಳಿಗೆ ಲಕ್ಷಾಂತರ ಹಣ ಗಳಿಸಿ ಎಂದು ಸ್ಥಳೀಯರನ್ನು ನಂಬಿಸಿದ್ದ. ಹೊಸಪೇಟೆಯಲ್ಲಿ ಕಚೇರಿ ತೆರೆದು ಅಲ್ಲಿಂದಲೇ ಜಿನ್ನಿ ಮಿಲ್ಕ್ ಕಂಪನಿ ಹಣಕಾಸಿನ ವ್ಯವಹಾರ ಶುರು ಮಾಡಿತ್ತು. ಇದನ್ನೇ ನಂಬಿದ ರಾಜ್ಯದ ಮೂಲೆ ಮೂಲೆಯಿಂದಲೂ ಆಗಮಿಸಿದ 278 ನಿರುದ್ಯೋಗಿಗಳು ಒಟ್ಟು ₹13.51 ಕೋಟಿ ಹೂಡಿಕೆ ಮಾಡಿದ್ದರು. ಆದರೆ, ಅಮಾಯಕರಿಂದ ಕೋಟ್ಯಂತರ ಹಣ ಕಟ್ಟಿಸಿಕೊಂಡ ವ್ಯಕ್ತಿ ಕಂಪನಿ ಬಂದ್ ಮಾಡಿಕೊಂಡು ಪರಾರಿಯಾಗಿದ್ದಾನೆ.
ವಿಜಯಪುರ ಜಿಲ್ಲೆಯ 59 ಯುವಕರು ಈ ವ್ಯಾಪಾಸಕ್ಕೆ ದುಡ್ಡು ಹಾಕಿದ್ದಾರೆ. ಬರೋಬ್ಬರಿ ₹2 ಕೋಟಿ ಹಣ ಕಳೆದುಕೊಂಡಿದ್ದು, ಜಿಲ್ಲೆಗೊಬ್ಬರಂತೆ ಡಿಸ್ಟ್ರಿಬ್ಯೂಟರ್ಸ್ (ವಿತರಕರು) ಎಂದು ನೇಮಿಸಿ ಅವರಿಂದಲೂ ತಲಾ ಎಂಟತ್ತು ಲಕ್ಷ ಹಣ ದೋಚಲಾಗಿದೆ ಎಂದು ಹೇಳಲಾಗುತ್ತಿದೆ.ಹೇಗಿತ್ತು ಬಿಸಿನೆಸ್ ರೂಪುರೇಷೆ?:
ಮೂರು ಲಕ್ಷ ಕೊಟ್ಟರೆ ಮೂರು ಹೆಣ್ಣು ಕತ್ತೆ ಹಾಗೂ ಮೂರು ಮರಿಗಳಿರುವ ಕತ್ತೆಗಳನ್ನು (ಒಂದು ಯುನಿಟ್) ನಾವೇ ಕೊಡುತ್ತೇವೆ. ಬಳಿಕ ಒಂದು ಲೀಟರ್ ಕತ್ತೆ ಹಾಲನ್ನು ₹2350 ಗೆ ನಾವೇ ಖರೀದಿ ಮಾಡುತ್ತೇವೆ ಎಂದು ನಂಬಿಸಿತ್ತು. ಈ ಬಿಸಿನೆಸ್ ವಿಚಾರ ತಿಳಿದ ಜನರು ಕತ್ತೆಗಳ ಹಾಲು ಒಂದು ಲೀ.ಗೆ ₹2,350 ಎಂಬ ಆಸೆಯಿಂದ ಕತ್ತೆಗಳ ಯುನಿಟ್ ಹಾಕಲು ಮುಗಿ ಬಿದ್ದರು. ಇದನ್ನೇ ಕಾಯುತ್ತಿದ್ದ ವಂಚಕರು ಒಂದು ಯುನಿಟ್‌ಗೆ ₹3 ಲಕ್ಷ ನೀಡಬೇಕು. ಮೂರು ಹೆಣ್ಣು ಕತ್ತೆಗಳು ಮೂರು ಮರಿಗಳು ಒಂದು ಫ್ರೀಡ್ಜ್ ನೀಡುತ್ತೇವೆ ಎಂದು ಭರವಸೆ ನೀಡಿ, ಜಿನ್ನಿ ಮಿಲ್ಕ್ ಕಂಪನಿ ಮಾಲೀಕ ನೂತಲಪತಿ ಮುರಳಿ ಒಂದೊಂದು ಯುನಿಟ್‌ನವರಿಗೂ ಬಾಂಡ್ ಮಾಡಿಕೊಟ್ಟಿದ್ದಾನೆ.ಒಂದೇ ದಿನ 278 ಕೇಸ್:
ರಾಜ್ಯಾದ್ಯಂತ ಯುವಕರಿಗೆಲ್ಲ ವಂಚನೆಯಾದ ಕುರಿತು ವಿಜಯನಗರ ಜಿಲ್ಲೆ ಹೊಸಪೇಟೆಯ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಂಚನೆಗೊಳಗಾದ ಮಾಹಿತಿ ತಿಳಿಯುತ್ತಿದ್ದಂತೆ ಮೊದಲ ಹಂತದಲ್ಲಿ ಬಂದಿದ್ದ 278 ಜನ ದೂರು ದಾಖಲಿಸಿದ್ದಾರೆ. ಒಟ್ಟು ₹13.51 ಕೋಟಿ ಹಣ ವಂಚಿಸಿರುವುದು ಬೆಳಕಿಗೆ ಬಂದಿದೆ. ಇನ್ನೂ ನೂರಾರು ಜನರು ಹಣ ಕಳೆದುಕೊಂಡಿರುವ ಶಂಕೆ ಇದೆ.-----------
ಕೋಟ್....ಜಿನ್ನಿ ಮಿಲ್ಕ್ ಕಂಪನಿಯ ಭರವಸೆಯ ಮೇಲೆ ಸಾಲ ಮಾಡಿ ತಂದಿದ್ದ ಹಣವನ್ನೆಲ್ಲ ಹಾಕಿ ಮೋಸ ಹೋಗಿದ್ದೇವೆ. ಎಲ್ಲ ದಾಖಲೆಗಳನ್ನು ನೀಡಿ ದೂರು ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ನಮಗೆ ನ್ಯಾಯ ನೀಡಬೇಕಿದೆ.
- ಸಚಿನ್, ವಂಚನೆಗೊಳಗಾದವ-----------
ಹೊಸಪೇಟೆಯಲ್ಲಿನ ಜಿನ್ನಿ ಮಿಲ್ಕ್ ಕಂಪನಿ ಜನರಿಗೆ ವಂಚಿಸಿ ಅದರ ಮಾಲೀಕ ನೂತಲಪತಿ ಮುರಳಿ ಹಾಗೂ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಆರೋಪಿಗಳ ಬಂಧನಕ್ಕೆ ಈಗಾಗಲೇ ಮೂರು ತಂಡಗಳನ್ನು ರಚಿಸಲಾಗಿದ್ದು, ವಂಚಕರನ್ನು ಆದಷ್ಟು ಬೇಗ ಬಂಧಿಸಲಾಗುವುದು. ಇದು ಬಹುದೊಡ್ಡ ಪ್ರಕರಣ ಆಗಿರುವುದರಿಂದ ಸಿಒಡಿ ತನಿಖೆಗೆ ಕೊಡಬಹುದಾ ಎಂದು ಮೇಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ.- ಶ್ರೀಹರಿಬಾಬು ಬಿ.ಎಲ್., ವಿಜಯನಗರ ಎಸ್‌ಪಿ
------------ಬಾಕ್ಸ್ಒಪ್ಪಂದದ ಕರಾರಿನಲ್ಲೇನಿದೆ
ಬಾಂಡ್ ಪ್ರಕಾರ ಒಂದು ಯುನಿಟ್‌ಗಾಗಿ ₹3 ಲಕ್ಷ ಹಣ ಭರಿಸಬೇಕು. ಕಂಪನಿಯಿಂದ ಮೂರು ಹೆಣ್ಣು ಕತ್ತೆ ಮೂರು ಮರಿಗಳನ್ನು ಹಾಗೂ ಕತ್ತೆ ಹಾಲನ್ನು ಸಂಗ್ರಹಿಸಲು ಒಂದು ಫ್ರಿಡ್ಜ್ ನೀಡಲಾಗುತ್ತದೆ. ಕತ್ತೆಗಳನ್ನು ನೀಡಿದ ಬಳಿಕ ಅವುಗಳನ್ನು ಸಾಕಿ ನಿತ್ಯ ಹಾಲು ಕರೆದು ಡೀಪ್ ಫ್ರೀಜರ್ ಮಾಡಿ ಸಂಗ್ರಹ ಮಾಡಬೇಕು. ತಿಂಗಳಲ್ಲಿ ಮೂರು ಬಾರಿ ಕತ್ತೆಗಳ ಹಾಲನ್ನು ಕಂಪನಿಯಿಂದಲೇ ಸಂಗ್ರಹ ಮಾಡುತ್ತೇವೆ. ಕತ್ತೆಗಳ ಹಾಲನ್ನು ನಮಗೆ ಮಾತ್ರ ಮಾರಾಟ ಮಾಡಬೇಕು. ಹಾಗೇ ಮೂರು ಬಾರಿ ಹಾಲಿನ ಪೇಮೆಂಟ್ ಮಾಡುತ್ತೇವೆ. ಒಂದು ಯುನಿಟ್‌ನಿಂದ ನಿತ್ಯ 1.5 ದಿಂದ 2 ಲೀಟರ್ ಹಾಲನ್ನು ಮಾತ್ರ ಖರೀದಿಗೆ ಮಾಡಲಾಗುತ್ತದೆ. ಹೆಚ್ಚಿಗೆ ಇದ್ದರೆ ಖರೀದಿಸಲ್ಲ.ಒಂದು ವೇಳೆ ಒಂದು ಯುನಿಟ್‌ನಿಂದ 1.5 ಲೀಟರ್ ಹಾಲು ಸಿಗಲಿಲ್ಲವೆಂದರೆ ಕತ್ತೆಗಳನ್ನು ಬದಲಾಯಿಸಿ ಬೇರೆ ಕತ್ತೆಗಳನ್ನು ನೀಡುತ್ತೇವೆ. ಒಂದು ವೇಳೆ ಅನಾರೋಗ್ಯದಿಂದ ಕತ್ತೆ ಮೃತಪಟ್ಟರೆ ಹಾಗೂ ಕತ್ತೆ ಗರ್ಭ ಧರಿಸಲು ವಿಫಲವಾದರೆ ಬೇರೆ ಕತ್ತೆಯನ್ನು ನೀಡುತ್ತೇವೆಂದು ಬಾಂಡ್‌ನಲ್ಲಿ ಉಲ್ಲೇಖಿಸಿದ್ದಾರೆ. ಒಂದು ವೇಳೆ ಕತ್ತೆಗಳ ಯುನಿಟ್ ಒಂದು ವರ್ಷದೊಳಗೆ ಬಂದ್ ಮಾಡುತ್ತೇವೆಂದರೆ ಶೇ.90 ರಷ್ಟು ಹಣ ವಾಪಸ್ ನೀಡುತ್ತೇವೆ. ಹಾಗೇ 2 ವರ್ಷಕ್ಕೆ ಶೇ. 80 ಹಾಗೂ 3 ವರ್ಷಕ್ಕೆ ಶೇ.70 ಹಣ ವಾಪಸ್ ನೀಡುತ್ತೇವೆ ಎಂದು ಬಾಂಡ್ ನಲ್ಲಿ ಬರೆದುಕೊಟ್ಟಿದ್ದಾರೆ.