ಕುಷ್ಟಗಿ: ಕುಷ್ಠ ರೋಗಿಗಳನ್ನು ಯಾರೂ ಅಮಾನವೀಯವಾಗಿ ಕಾಣಬಾರದು. ಅವರು ನಮ್ಮ ತರ ಮನುಷ್ಯರು. ಕುಷ್ಠರೋಗದ ಕುರಿತು ಸಂಪೂರ್ಣ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಈ ರೋಗದಿಂದ ಹೆದರುವ ಅಗತ್ಯವೇ ಇಲ್ಲ ಎಂದು ವೈದ್ಯಾಧಿಕಾರಿ ಡಾ. ಸಂತೋಷಕುಮಾರ ಬಿರಾದಾರ ಹೇಳಿದರು.
ತಾಲೂಕಿನ ದೋಟಿಹಾಳ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಯಾನಂದಪುರಿ ಕ್ರೀಡಾ ಸಂಘ, ಹಾಗೂ ಗಾಯತ್ರಿ ಮಹಿಳಾ ಸಂಘ, ಗ್ರಾಪಂ ದೋಟಿಹಾಳ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನಡೆದ ಕುಷ್ಠರೋಗ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಾನವನ ದೇಹದಲ್ಲಿ ವಾಸಿಯಾಗದಂತಹ ಮಚ್ಚೆಗಳನ್ನು ಕಂಡು ಬಂದರೆ ಸಮೀಪದ ಆಸ್ಪತ್ರೆಗೆ ಭೇಟಿ ನೀಡುವ ಮೂಲಕ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಮುಂದಾಗುವ ಅನಾಹುತ ತಡೆಗಟ್ಟಬಹುದು ಎಂದರು.
ಆರೋಗ್ಯ ಹಿರಿಯ ನಿರೀಕ್ಷಣಾಧಿಕಾರಿ ರವೀಂದ್ರ ನಂದಿಹಾಳ ಮಾತನಾಡಿ, ಕುಷ್ಠರೋಗದಿಂದ ಬಳಲುವ ರೋಗಿಗಳು ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಹಿಂಜರಿಯುತ್ತಾರೆ. ಹೀಗಾಗಿ ಕಾಯಿಲೆ ನಿಯಂತ್ರಣಕ್ಕೆ ತರುವುದು ಇಂದಿಗೂ ಕಷ್ಟವಾಗಿದೆ. ಇಂದು ತಂತ್ರಜ್ಞಾನದಲ್ಲಿ ಭಾರತ ಎಷ್ಟೇ ಮುಂದುವರಿದರೂ ನಾವು ಮೂಢನಂಬಿಕೆಯಿಂದ ಹೊರಬರುತ್ತಿಲ್ಲ.
ಕುಷ್ಠ ರೋಗವು ಇವತ್ತಿನ ರೋಗವಲ್ಲ, ಎರಡು ಸಾವಿರ ವರ್ಷಗಳ ಹಿಂದೆ ಈ ರೋಗ ಹುಟ್ಟಿಕೊಂಡಿತು. ಇದಕ್ಕೆ ಯಾರು ಹೆದರಬೇಕಾಗಿಲ್ಲ. ಈಗಾಗಲೇ ನಾವು ಪ್ಲೇಗ್‌ನಂತಹ ಅನೇಕ ರೋಗಗಳನ್ನು ಹೊಡೆದು ಓಡಿಸಿದ್ದೇವೆ ಎಂದರು.ಈಗ ಕ್ಷಯರೋಗ, ಕುಷ್ಠರೋಗ, ಹಾಗೂ ಮಲೇರಿಯಾದಂತಹ ರೋಗವು 2030 ರೊಳಗೆ ಜಾಗೃತಿ ಹಾಗೂ ಚಿಕಿತ್ಸೆಯನ್ನು ನೀಡುವ ಮೂಲಕ ಸಂಪೂರ್ಣವಾಗಿ ಈ ಮೂರು ರೋಗಗಳನ್ನು ತೊಲಗುವಂತೆ ಮಾಡಬೇಕು ಈ ರೋಗವು ಸರಿಯಾಗಿ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಸಂಪೂರ್ಣ ಗುಣಮುಖವಾಗುತ್ತದೆ ಆದರೆ ನಮ್ಮಲ್ಲಿ ಇನ್ನೂ ಸಾಮಾಜಿಕ ಪಿಡುಗು ಇದ್ದು ಇದನ್ನು ಹೋಗಲಾಡಿಸುವ ಕೆಲಸ ಮಾಡಬೇಕು ಎಂದರು.
ಅಂಗನವಾಡಿ ಮೇಲ್ವಿಚಾರಕಿ ಅನ್ನಪೂರ್ಣ ಪಾಟೀಲ,ಗ್ರಾಪಂ ಅಧ್ಯಕ್ಷ ಮಹೇಶ ಕಾಳಗಿ, ಶಾಲಾ ಮುಖ್ಯೋಪಾದ್ಯಾಯ ಸಿದ್ರಾಮಪ್ಪ ಅಮರಾವತಿ ಮಾತನಾಡಿದರು.ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಶ್ರೀನಿವಾಸ ಕಂಟ್ಲಿ, ಶಿಕ್ಷಕ ದೊಡ್ಡಬಸವ ಪಾಟೀಲ, ಎಸ್ಡಿಎಂಸಿ ಅಧ್ಯಕ್ಷ ಪರಸಪ್ಪ ಸರೂರು, ಬಸವರಾಜ ಕಡಿವಾಲ, ರಹೀನಾಬೇಗಂ ಕಂದಕೂರು, ಗಾಯತ್ರಿ ಮಹಿಳಾ ಸಂಘದ ಸದಸ್ಯರಾದ ಗಾಯತ್ರಿ ಕುದರಿಮೋತಿ, ಶಂಕ್ರಮ್ಮ ಕಾಳಗಿ, ಪೂರ್ಣಿಮಾ ದೇವಾಂಗಮಠ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.