ವದಂತಿ ನಂಬದಿರಿ, ಇಂಧನಕ್ಕಿಲ್ಲ ವರಿ

KannadaprabhaNewsNetwork |  
Published : Mar 27, 2026, 02:00 AM IST
ಹುಬ್ಬಳ್ಳಿಯ ಕಾಟನ್‌ ಮಾರ್ಕೇಟ್‌ ಬಳಿಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ ಭೇಟಿ ನೀಡಿ ಪರಿಶೀಲಿಸಿದರು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ 12 ಖಾಸಗಿ ಸೇರಿ ಒಟ್ಟು 204 ಪೆಟ್ರೋಲ್ ಬಂಕ್‌ಗಳಿದ್ದು, 1,115 ಕೆಎಲ್ ಪೆಟ್ರೋಲ್ ಮತ್ತು 1,735 ಕೆಎಲ್ ಡೀಸೆಲ್‌ ಸಂಗ್ರಹವಿದೆ. ವಾರದ ಹಿಂದೆ ಪ್ರತಿದಿನ 260 ಕೆಎಲ್ ಪೆಟ್ರೋಲ್ ಮತ್ತು 450 ಕೆಎಲ್ ಡೀಸೆಲ್‌ ಮಾರಾಟವಾಗುತ್ತಿತ್ತು. ಆದರೆ, ಮಧ್ಯಪ್ರಾಚ್ಯ ಯುದ್ಧದಿಂದಾಗಿ ಜನ‌ ಆತಂಕಕ್ಕೀಡಾಗಿದ್ದಾರೆ.

ಹುಬ್ಬಳ್ಳಿ:

ಪೆಟ್ರೋಲ್‌, ಡೀಸೆಲ್‌ ಕೊರತೆ ಇದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಾರ್ವಜನಿಕರು ಆತಂಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ, ನಗರದ ವಿವಿಧ ಪೆಟ್ರೋಲ್‌ ಬಂಕ್‌ಗಳಿಗೆ ತೆರಳಿ ಪರಿಶೀಲಿಸಿದರು.

ಇಲ್ಲಿನ ಕಾಟನ್‌ ಮಾರ್ಕೇಟ್‌ ಬಳಿಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ಗೆ ಭೇಟಿ ನೀಡಿ ಇಂಧನ ಲಭ್ಯತೆಯ ಕುರಿತು ಮಾಹಿತಿ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ಯಾವುದೇ ಕೊರತೆಯಿಲ್ಲ. ಇನ್ನೂ ಐದು ದಿನ ವರೆಗೆ ಲಭ್ಯವಾಗುವಷ್ಟು ಇಂಧನ ಸಂಗ್ರಹವಿದೆ ಎಂದು ಸ್ಪಷ್ಟನೆ ನೀಡಿದರು.

ಭಯ ಬೇಡ, ಸಾಕಷ್ಟು ಸಂಗ್ರಹ:

ಜಿಲ್ಲೆಯಲ್ಲಿ 12 ಖಾಸಗಿ ಸೇರಿ ಒಟ್ಟು 204 ಪೆಟ್ರೋಲ್ ಬಂಕ್‌ಗಳಿದ್ದು, 1,115 ಕೆಎಲ್ ಪೆಟ್ರೋಲ್ ಮತ್ತು 1,735 ಕೆಎಲ್ ಡೀಸೆಲ್‌ ಸಂಗ್ರಹವಿದೆ. ವಾರದ ಹಿಂದೆ ಪ್ರತಿದಿನ 260 ಕೆಎಲ್ ಪೆಟ್ರೋಲ್ ಮತ್ತು 450 ಕೆಎಲ್ ಡೀಸೆಲ್‌ ಮಾರಾಟವಾಗುತ್ತಿತ್ತು. ಆದರೆ, ಮಧ್ಯಪ್ರಾಚ್ಯ ಯುದ್ಧದಿಂದಾಗಿ ಜನ‌ ಆತಂಕಕ್ಕೀಡಾಗಿದ್ದಾರೆ. ಇದರಿಂದಾಗಿ ಕಳೆದೊಂದು ವಾರದಿಂದ ನಿತ್ಯ 371 ಕೆಎಲ್ ಪೆಟ್ರೋಲ್ ಮತ್ತು 582 ಕೆಎಲ್ ಡೀಸೆಲ್‌ ಮಾರಾಟವಾಗುತ್ತಿದೆ. ನಿತ್ಯವೂ ಬೆಳಗಾವಿ ಮತ್ತು ಧಾರವಾಡದ ರಾಯಾಪುರದ ಸಂಗ್ರಹಗಾರದಿಂದ ಸಮರ್ಪಕ ಇಂಧನ ಪೂರೈಕೆಯಾಗುತ್ತದೆ ಎಂದರು.

ಸುಳ್ಳು ಸುದ್ದಿಗಳ ಪರಿಣಾಮವಾಗಿ ಜನರು ಸಾಮಾನ್ಯವಾಗಿ ಹಾಕಿಸಿಕೊಳ್ಳುವ 4 ಲೀಟರ್ ಬದಲು ಈಗ 10 ಲೀಟರ್‌ ವರೆಗೆ ಇಂಧನ ತುಂಬಿಸಿಕೊಳ್ಳುತ್ತಿದ್ದಾರೆ. ಇದರಿಂದ ಕೆಲವು ಬಂಕ್‍ಗಳಲ್ಲಿ ತಾತ್ಕಾಲಿಕವಾಗಿ ಸ್ಟಾಕ್ ಖಾಲಿಯಾಗುತ್ತಿದೆ. ಆದರೂ ತಕ್ಷಣವೇ ಸರಬರಾಜು ಮಾಡಿಕೊಂಡು ಪುನರಾರಂಭವಾಗುತ್ತಿದೆ ಎಂದು ಹೇಳಿದರು.

ಅಕ್ರಮ ತಡೆಗೆ ವಿಶೇಷ ತಂಡ:

ಅನಧಿಕೃತವಾಗಿ ಗ್ಯಾಸ್ ಸಿಲಿಂಡರ್‌ ಸಂಗ್ರಹಿಸಿಕೊಂಡು ಇಟ್ಟುಕೊಂಡಿರುವವರ ವಿರುದ್ಧ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಈಗಾಗಲೇ 3 ಪ್ರಕರಣ ದಾಖಲಿಸಲಾಗಿದ್ದು, ಒಟ್ಟು 75 ವಾಣಿಜ್ಯ ಗ್ಯಾಸ್ ಸಿಲಿಂಡರ್‌ ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಚಟುವಟಿಕೆಗಳಿಗೆ ತಡೆಯೊಡ್ಡಲು ವಿಶೇಷ ತಂಡ ರಚಿಸಲಾಗಿದೆ ಎಂದರು.

ಸರ್ಕಾರದ ಮಾರ್ಗಸೂಚಿಗಳಂತೆ ಗ್ಯಾಸ್ ಸಿಲಿಂಡರ್ ಸರಬರಾಜಿನಲ್ಲಿ ಮೊದಲ ಆದ್ಯತೆಯನ್ನು ಶಿಕ್ಷಣ ಸಂಸ್ಥೆ ಹಾಗೂ ಆಸ್ಪತ್ರೆಗಳಿಗೆ ನೀಡಲಾಗುತ್ತಿದ್ದು, ನಂತರ ಹೋಟೆಲ್‍ಗಳಿಗೆ ವಿತರಣೆ ಮಾಡಲಾಗುತ್ತಿದೆ. ಸಾರ್ವಜನಿಕರು ಯಾವುದೇ ಅನಧಿಕೃತ ಸಂಗ್ರಹಣೆ ಅಥವಾ ಮಾರಾಟ ಕಂಡು ಬಂದರೆ ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.

ಕೆಲವು ಖಾಸಗಿ ಪೆಟ್ರೋಲ್ ಬಂಕ್‌ಗಳಲ್ಲಿ ಬೆಲೆ ಹೆಚ್ಚಳ ಮಾಡಿರುವ ಮಾಹಿತಿ ಕೇಳಿಬಂದಿದ್ದು, ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಶಹರ ತಹಸೀಲ್ದಾರ್ ಮಹೇಶ ಗಸ್ತೆ, ಉಪನಗರ ಪೊಲೀಸ್ ಠಾಣೆಯ ಇನ್‌ಸ್ಪಕ್ಟರ್ ಪ್ರಭು ಗಂಗೇನಹಳ್ಳಿ, ಕಂದಾಯ ನಿರೀಕ್ಷಕ ರವಿ ಬೆನ್ನೂರ ಸೇರಿದಂತೆ ಹಲವರಿದ್ದರು.

ಬಾಕ್ಸ್‌...

ಖಾಸಗಿ ಪೆಟ್ರೋಲ್‌ ಬಂಕ್‌ಗಳಲ್ಲಿ ಬೆಲೆ ಹೆಚ್ಚಳ

ನಗರ ಸೇರಿದಂತೆ ರಾಜ್ಯಾದ್ಯಂತ ಇರುವ ನಯಾರ ಪೆಟ್ರೋಲ್ ಬಂಕ್‌ಗಳಲ್ಲಿ ದರ ಏರಿಕೆಯಾಗಿದ್ದು ಗ್ರಾಹಕರಿಗೆ ಬಿಸಿ ತಟ್ಟಿದೆ. ಪ್ರತಿ ಲೀಟರ್‌ ಪೆಟ್ರೋಲ್‌ಗೆ ₹5 ಹಾಗೂ ಡೀಸಲ್‌ಗೆ ₹ 3 ಏರಿಕೆ ಮಾಡಲಾಗಿದೆ. ಇದರಿಂದಾಗಿ ಪೆಟ್ರೋಲ್ ಬೆಲೆ ₹103ರಿಂದ ₹108ಕ್ಕೆ ಹಾಗೂ ಡೀಸಲ್ ಬೆಲೆ ₹91ರಿಂದ ₹94ಕ್ಕೆ ತಲುಪಿದೆ. ಈ ಏರಿಕೆ ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ ಎಂದು ವರದಿಯಾಗಿದೆ. ಸರ್ಕಾರಿ ಸ್ವಾಮ್ಯದ ಕಂಪನಿಗಳಾದ ಇಂಡಿಯನ್ ಆಯಿಲ್ (ಐಒಸಿಎಲ್‌), ಬಿಪಿಸಿಎಲ್, ಎಚ್‌ಪಿಸಿಎಲ್ ಬಂಕ್‌ಗಳಲ್ಲಿ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.

26ಎಚ್‌ಯುಬಿ25, 26

ಹುಬ್ಬಳ್ಳಿಯ ಕಾಟನ್‌ ಮಾರ್ಕೇಟ್‌ ಬಳಿಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ ಭೇಟಿ ನೀಡಿ ಪರಿಶೀಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಲ ಬಳಿಯುವ ಪದ್ಧತಿ ನಿಷೇಧ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಿ-ಜಿಲ್ಲಾಧಿಕಾರಿ
ಅಕ್ರಮ ಸಂಬಂಧವೇ ಮಾಜಿ ಶಾಸಕರ ಮಗನ ಕೊಲೆಗೆ ಕಾರಣ