ಅನ್ಯಭಾಷೆ ವ್ಯಾಮೋಹದಲ್ಲಿ ಕನ್ನಡ ಸಾಯಿಸದಿರಿ: ಡಾ.ಸೆಲ್ವಿ

KannadaprabhaNewsNetwork | Published : Mar 3, 2024 1:32 AM

ಸಾರಾಂಶ

ಅನ್ಯಭಾಷೆ ವ್ಯಾಮೋಹದಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸುತಿದ್ದೇವೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದೊಂದು ದಿನ ನಮ್ಮ ಮಾತೃಭಾಷೆಯನ್ನು ನಾವೇ ಸಾಯಿಸಿದಂತಾಗುತ್ತದೆ

ಮಲ್ಲಯ್ಯ ಪೋಲಂಪಲ್ಲಿ

ಶಹಾಪುರ: ಅನ್ಯಭಾಷೆ ವ್ಯಾಮೋಹದಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸುತಿದ್ದೇವೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದೊಂದು ದಿನ ನಮ್ಮ ಮಾತೃಭಾಷೆಯನ್ನು ನಾವೇ ಸಾಯಿಸಿದಂತಾಗುತ್ತದೆ ಎಂದು ಚೆನ್ನೈನ ಮದ್ರಾಸ್ ವಿಶ್ವವಿದ್ಯಾಲಯದ ಮುಖ್ಯಸ್ಥರು, ಕನ್ನಡ ಪ್ರಾಧ್ಯಾಪಕರು ಮತ್ತು ಕನ್ನಡ ಸಾಹಿತ್ಯ ಪರಿಷತ್ ತಮಿಳುನಾಡು ಘಟಕದ ಅಧ್ಯಕ್ಷರಾದ ಡಾ.ತಮಿಳ್ ಸೆಲ್ವಿ ಅವರು ಆತಂಕ ವ್ಯಕ್ತಪಡಿಸಿದರು.

ತಾಲೂಕಿನ ಭೀಮರಾಯನಗುಡಿಯ ಸಿದ್ಧಾರೂಢ ಮಠದ ಆವರಣದಲ್ಲಿ ಕನ್ನಡ ವಲಯ ಸಾಹಿತ್ಯ ಪರಿಷತ್‌ವತಿಯಿಂದ ನಡೆದ ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಕೇವಲ ಭಾಷೆ ಮಾತ್ರವಲ್ಲ, ಅದೊಂದು ಸಂಸ್ಕೃತಿ. ಕನ್ನಡ ಭಾಷೆ ಮತ್ತು ಸಾಹಿತ್ಯ ಸಂಸ್ಕೃತಿಯ ಹಿರಿಮೆಯನ್ನು ಅರ್ಥಮಾಡಿಕೊಂಡವರು ಅನ್ಯಭಾಷಾ ವ್ಯಾಮೋಹಕ್ಕೆ ಬಲಿಯಾಗಲಾರರು. ನಮ್ಮ ಭಾಷೆ ಮತ್ತು ಸಂಸ್ಕೃತಿಯ ಶ್ರೇಷ್ಠತೆಯನ್ನು ಸಾರುತ್ತದೆ. ಇಂಥ ವೈಶಿಷ್ಟ ಪೂರ್ಣವಾದ ಕನ್ನಡ ಭಾಷೆಗೆ ಕನ್ನಡ ನೆಲದಲ್ಲಿಯೇ ಮಾತೃಭಾಷೆಗಾಗಿ ಹೋರಾಟ ನಡೆಸಬೇಕಾದ ದುಸ್ಥಿತಿ ಬಂದೊದಗಿರುವುದು ಶೋಚನೀಯ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಡಾ.ರವೀಂದ್ರನಾಥ್ ಹೊಸಮನಿ ಅವರು, ಕನ್ನಡಕ್ಕೆ ಇನ್ನೂ ಭವ್ಯವಾದ ಭವಿಷ್ಯವಿದೆ ಎಂದು ಸಂಭ್ರಮದಿಂದ ಹೇಳಬಹುದು. ಭಾಷೆ, ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯ ಜ್ಞಾನವನ್ನು ಮೈಗೂಸಿಡಿಕೊಳ್ಳುವುದರ ಮೂಲಕ ವ್ಯಕ್ತಿತ್ವ ಬೆಳವಣಿಗೆ ಮಾಡಿಕೊಳ್ಳಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ ಶತಮಾನಗಳಿಂದ ಕನ್ನಡ ಉಳಿಸಿ ಬೆಳೆಸಲು ಅನೇಕ ಕಾರ್ಯಕ್ರಮ ವಿಚಾರ ಸಂಕಿರಣಗಳು-ಗೋಷ್ಠಿಗಳು ನಡೆಸುತ್ತಾ ಬಂದಿವೆ. ಕನ್ನಡದ ಮೇಲೆ ಆಗುತ್ತಿರುವ ಅನ್ಯ ಭಾಷೆಗಳ ದಾಳಿಯನ್ನು ಎಲ್ಲರೂ ಒಗ್ಗಟ್ಟಾಗಿ ಹಿಮ್ಮೆಟ್ಟಿಸೋಣ ಇದಕ್ಕೆ ಪ್ರತಿಯೊಬ್ಬ ಕನ್ನಡಿಗ ಪಣ ತೊಡಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಸಿದ್ದಪ್ಪ ಹೊಟ್ಟಿ ಮಾತನಾಡಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಕ್ರಿಯವಾಗಿದೆ. ಒಂದೇ ವರ್ಷದಲ್ಲಿ ತಾಲೂಕು ಮಟ್ಟದ 2 ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮಾಡಿದೆ. ಮಾಡುವುದು ಅಷ್ಟೇ ಅಲ್ಲ. ಇತಿಹಾಸದ ಪುಟದಲ್ಲಿ ಬರೆದಿಡುವಂತಹ ಮಟ್ಟಿಗೆ ಉತ್ತಮವಾಗಿ ಸಮ್ಮೇಳನ ಮಾಡಿದೆ.

5ನೇ ಜಿಲ್ಲಾ ಸಮ್ಮೇಳನ ಶಹಾಪುರ ತಾಲೂಕಿನಲ್ಲಿ ಮಾಡಲು ಪರಿಷತ್ ಒಪ್ಪಿಕೊಂಡಿರುವುದು ಹೆಮ್ಮೆಯ ವಿಷಯ. ಕನ್ನಡ ನೆಲದಲ್ಲಿ ಬದುಕುತ್ತಿರುವ ನಮಗೆಲ್ಲ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಆಗಬೇಕು. ಕನ್ನಡ ನಮ್ಮ ಮೊದಲ ಆಸ್ಮಿತೆ ಆದಾಗ ಮಾತ್ರ ಕನ್ನಡವನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಬೆಳೆಸಲು ಸಾಧ್ಯವಾಗುತ್ತದೆ ಎಂದರು.

ನಾವು ಕನ್ನಡಿಗರು ಅಂತ ಹೇಳಿಕೊಳ್ಳೋದೇ ಹೆಮ್ಮೆ: ಗುರಪಾದ ಸ್ವಾಮೀಜಿ: ನಾವೆಲ್ಲರೂ ಕನ್ನಡಿಗರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದೇ ಹೆಮ್ಮೆಯ ವಿಷಯವಾಗಿದೆ ಎಂದು ಫಕೀರೇಶ್ವರ ಮಠದ ಪೀಠಾಧಿಪತಿ ಗುರುಪಾದ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಕನ್ನಡ ಭಾಷೆ ಕೇವಲ ಒಂದು ಭಾಷೆಯಲ್ಲ ಅದು ತನ್ನದೇ ಆದ ಭವ್ಯ ಇತಿಹಾಸ ಪರಂಪರೆಯನ್ನು ಹೊಂದಿದೆ. ಭಾರತ ದೇಶದ ಪ್ರಮುಖ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆಯನ್ನು ಕರ್ನಾಟಕದಲ್ಲಿ ಮಾತೃಭಾಷೆಯಾಗಿ ಬಳಸುತ್ತಾರೆ. ಮನುಷ್ಯ ಮನುಷ್ಯರ ನಡುವೆ ಭಾವನೆಗಳನ್ನು ಹಂಚಿಕೊಳ್ಳಲು ಇರುವ ಏಕೈಕ ಮಾರ್ಗ ಎಂದರೆ ಅದು ಕನ್ನಡ ಭಾಷೆ. ಕನ್ನಡ ಭಾಷಾ ಸಾಹಿತ್ಯದಲ್ಲಿ ಅನೇಕ ಪ್ರಕಾರಗಳಿವೆ. ಜನಪದ ಸಾಹಿತ್ಯ, ವಚನ ಸಾಹಿತ್ಯ, ದಲಿತ ಸಾಹಿತ್ಯ, ಬಂಡಾಯ ಸಾಹಿತ್ಯ ಹಾಗೂ ನವೋದಯ ಸಾಹಿತ್ಯ ಕನ್ನಡವು ಸಹ ಭಾಷೆ ಎಂಬ ಏಕತೆಯಲ್ಲಿ ವಿವಿಧತೆಯನ್ನು ತೋರಿಸುತ್ತದೆ.

Share this article