ಕನ್ನಡಪ್ರಭ ವಾರ್ತೆ ಯಾದಗಿರಿ
ಮನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದ ಕೃಷಿ ಕೂಲಿಕಾರರ ಕುಟುಂಬಗಳಿಗೆ ಗ್ರಾಮ ಪಂಚಾಯಿತಿಗಳಿಂದ ಪ್ರತಿ ವರ್ಷ 100 ದಿನಗಳ ಅಕುಶಲ ಕೂಲಿ ಕೆಲಸದ ಖಾತ್ರಿ ನೀಡಿದೆ. ಹೀಗಾಗಿ, ಕೂಲಿ ಕೆಲಸಕ್ಕಾಗಿ ದೂರದ ನಗರಗಳಿಗೆ ಗುಳೆ (ವಲಸೆ) ಹೋಗದೆ, ನಿಮ್ಮೂರಲ್ಲೇ ಕೂಲಿ ಕೆಲಸ ಮಾಡಿ ಎಂದು ಗರೀಮಾ ಪನ್ವಾರ್ ಗುಳೆ ಹೋಗದಂತೆ ತಿಳಿಸಿದರು.
ಕೂಲಿ ಅರಸಿ ವಲಸೆ ಹೋಗುವ ಗ್ರಾಮೀಣ ಭಾಗದ ಕೃಷಿ ಕೂಲಿಕಾರರಿಗೆ ಮನರೇಗಾ ಯೋಜನೆಯಡಿ ಸಿಗುವ ನಾನಾ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಲು ಯಾದಗಿರಿ ರೈಲು ನಿಲ್ದಾಣದಲ್ಲಿ ತೆರೆದಿರುವ ನರೇಗಾ ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿದ ಪನ್ವಾರ್, ವಲಸೆ ಹೊಗುವ ಕೂಲಿಕಾರೊಂದಿಗೆ ಸಮಾಲೋಚನೆ ಮಾಡಿ, ಮಾತನಾಡಿದರು.ಪಟ್ಟಣ ಪ್ರದೇಶಕ್ಕೆ ಗೂಳೆ ಹೊರಟ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆಯಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದ ಅವರು, ಒಂದು ಆರ್ಥಿಕ ವರ್ಷದಲ್ಲಿ ಒಂದು ಕುಟುಂಬಕ್ಕೆ ನೂರು ದಿನ ಅಕುಶಲ ಕೂಲಿ ಕೆಲಸ ನೀಡಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಕೆಲಸವಿಲ್ಲದ ಸಮಯದಲ್ಲಿ ನರೇಗಾ ಯೋಜನೆಯಲ್ಲೇ ಕೂಲಿ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡಬಹುದು ಎಂದು ತಿಳಿಸಿದರು.
ರೈತರು, ಕೂಲಿಕಾರರ ಮನೆಯಲ್ಲಿ ದನ, ಕುರಿ, ಹಂದಿ, ಕೋಳಿಗಳಿದ್ದರೆ, ನರೇಗಾ ಯೋಜನೆಯಡಿ ದನ ಕುರಿ ಕೋಳಿ ಹಾಗೂ ಹಂದಿ ಶೆಡ್‌ಗಳನ್ನು ನಿರ್ಮಿಸಿಕೊಳ್ಳಲು ಅವಕಾಶವಿದ್ದು, ಪಟ್ಟಣ ಪ್ರದೇಶಕ್ಕೆ ಕೂಲಿ ಕೆಲಸಕ್ಕಾಗಿ ವಲಸೆ ಹೋಗುವುದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಅಲ್ಲದೆ ಅವರ ಉಜ್ವಲ ಭವಿಷ್ಯ ಹಾಳಾಗುತ್ತದೆ ಎಂದು ಪೋಷಕರಿಗೆ ಮನವರಿಕೆ ಮಾಡಿದರು.
ಶಹಾಪುರ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಬಿರಾದಾರ್ ಮಾತನಾಡಿ, ನರೇಗಾ ಯೋಜನೆಯಡಿ ಪ್ರತಿದಿನಕ್ಕೆ ಪುರುಷ ಹಾಗೂ ಮಹಿಳೆಯರಿಗೆ 316 ರು.ಗಳು ಸಮಾನ ಕೂಲಿ ಇದೆ. ಒಂದು ಕುಟುಂಬ ನೂರು ದಿನ ಕೂಲಿ ಕೆಲಸ ಮಾಡಿದರೆ 31,600 ರು.ಗಳು ಕೂಲಿ ಹಣ ಗಳಿಸಬಹುದು. ಕೂಲಿ ಹಣ ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ ಎಂದರು.
ವಡಗೇರಾ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗ್ವಾರ, ತಾಲೂಕು ಯೋಜನಾಧಿಕಾರಿ ಶಶಿಧರ ಹಿರೇಮಠ, ಸಹಾಯಕ ನಿರ್ದೇಶಕ ಮಲ್ಲಣ್ಣ, ವ್ಯವಸ್ಥಾಪಕ ಶಿವರಾಯ, ವಿಷಯ ನಿರ್ವಾಹಕ ಅನ್ಸರ್ ಪಟೇಲ್, ಜಿಲ್ಲಾ ಪಂಚಾಯ್ತಿ ನರೇಗಾ ಯೋಜನೆ ಸಂಯೋಜಕ ಪರಶುರಾಮ, ತಾಂತ್ರಿಕ ಸಂಯೋಜಕ ಉಮೇಶ್ ಸಂಯೋಜಕ ಭೀಮರೆಡ್ಡಿ ವಡಿಗೇರಾ, ಬಸಪ್ಪ, ತಾಂತ್ರಿಕ ಸಹಾಯಕರಾದ ವೆಂಕಟೇಶ, ನಾಗರಾಜ, ಶಶಿಕಾಂತ, ಶ್ರೀನಿವಾಸರೆಡ್ಡಿ ಇತರರಿದ್ದರು.