ನರಗುಂದ:ನಿರಂತರ ಹೋರಾಟದಿಂದ ಮಹದಾಯಿ ಯೋಜನೆ ಜಾರಿಯಾಗುವ ಹಂತಕ್ಕೆ ಬಂದಿದೆ. ಅರಣ್ಯನಾಶ ನೆಪದಲ್ಲಿ ಪರಿಸರವಾದಿಗಳು ಯೋಜನೆಗೆ ಅಡ್ಡಿ ಮಾಡಬಾರದು ಎಂದು ಕರ್ನಾಟಕ ರೈತ ಸೇನೆ ರಾಜ್ಯ ಕಾರ್ಯದರ್ಶಿ ಎಸ್.ಬಿ. ಜೋಗಣ್ಣವರ ಮನವಿ ಮಾಡಿದರು.
ಈ ಎಲ್ಲ ಹೋರಾಟಗಳ ಫಲವಾಗಿ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದೆ. ಈ ಜಲ ವಿವಾದಕ್ಕೆ ನೇಮಕವಾದ ನ್ಯಾಯಾಧೀಕರಣ ನ್ಯಾಯಾಧೀಶರು ಕೂಡ ಕಳಸಾ ಬಂಡೂರಿಯ ಹಳ್ಳಗಳಲ್ಲಿ ಹರಿಯುವ ನೀರಿನಲ್ಲಿ 13 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿದ್ದಾರೆ. ರಾಜ್ಯ ಸರ್ಕಾರ ಈ ಯೋಜನೆ ಕಾಮಗಾರಿಗೆ ಅನುದಾನ ಕಾಯ್ದಿರಿಸಿದೆ. ಸದ್ಯ ವನ್ಯಜೀವಿಗಳ ಇಲಾಖೆಯ ಪರವಾನಗಿ ಸಿಗುವ ಹಂತದಲ್ಲಿದೆ. ಇಂತಹ ಸಮಯದಲ್ಲಿ ಬೆಳಗಾವಿ ಹಾಗೂ ಖಾನಾಪುರ ಭಾಗದ ಕೆಲವು ಪರಿಸರವಾದಿಗಳು ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯಿಂದ ಪರಿಸರ ನಾಶವಾಗುತ್ತದೆ ಎಂದು ಧ್ವನಿ ಎತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಯೋಜನೆಯಿಂದ ಅರಣ್ಯ ನಾಶವಾಗುವುದಿಲ್ಲ ಎಂದು ಕೇಂದ್ರ ಅರಣ್ಯ ಇಲಾಖೆಯೇ ಹೇಳಿದೆ. ಪರಿಸರವಾದಿಗಳು ರಾಜಕೀಯ ಕುತಂತ್ರಿಗಳ ಮಾತು ಕೇಳಿಕೊಂಡು ಯೋಜನೆಗೆ ಅಡ್ಡಿ ಮಾಡಬಾರದು. ಈ ಯೋಜನೆಯಿಂದ ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ ಜಿಲ್ಲೆಗಳ 11 ತಾಲೂಕಗಳ ನೂರಾರು ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಆಗಲಿದೆ ಎಂದು ಹೇಳಿದರು.ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರಭಸಪ್ಪ ಹೂಗಾರ ಮಾತನಾಡಿ, ಕಳೆದ ಹತ್ತು ವರ್ಷ ರೈತರು ಹೋರಾಟ ಮಾಡುವ ಸಮಯದಲ್ಲಿ ಏಕೆ ಈ ಪರಿಸರವಾದಿಗಳು ಮೌನವಾಗಿದ್ದರು? ಸದ್ಯ ಯೋಜನೆ ಜಾರಿಯಾಗುವ ಸಂದರ್ಭದಲ್ಲಿ ಕೆಲವು ದುಷ್ಟ ರಾಜಕಾಣಿಗಳು ಮಾತು ಕೇಳಿ ಈ ಪರಿಸರವಾದಿಗಳು ಯೋಜನೆಗೆ ಅಡ್ಡಿಪಡಿಸುತ್ತಿರುವುದು ಖಂಡನೀಯ ಎಂದರು.
ಪರಶುರಾಮ ಜಂಬಗಿ, ಸಿ.ಎಸ್. ಪಾಟೀಲ, ಸುಭಾಸ ಗಿರಿಯಣ್ಣವರ, ಹನುಮಂತ ಸರನಾಯ್ಕರ, ಚನ್ನಬಸಪ್ಪ ಆಯಿಟ್ಟಿ, ಮಲ್ಲೇಶ ಅಣ್ಣಿಗೇರಿ, ಅರ್ಜುನ ಮಾನೆ, ಶಂಕ್ರಪ್ಪ ಜಾಧವ, ಫಕೀರಪ್ಪ ಅಣ್ಣಿಗೇರಿ, ಅನಸವ್ವ ಶಿಂದೆ, ನಾಗರತ್ನಾ ಸವಳಭಾವಿ, ವಾಸು ಚವ್ಹಾಣ, ವಿಜಯಕುಮಾರ ಹೂಗಾರ ಇದ್ದರು.