ಶಿವಾನಂದ ಗೊಂಬಿ
ವಿದ್ಯುತ್ ಖಾಸಗೀಕರಣಗೊಳಿಸಲು ಮುಂದಾಗುತ್ತಿದ್ದಂತೆ ಹೆಸ್ಕಾಂ ವ್ಯಾಪ್ತಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಯಾವುದೇ ಕಾರಣಕ್ಕೂ ಖಾಸಗಿಗೆ ಕೊಡಬಾರದು. ಹೆಸ್ಕಾಂನ ಪರಿಸ್ಥಿತಿಯೂ ಬಿಎಸ್‌ಎನ್‌ಎಲ್ ಆದಂತೆ ಆಗುತ್ತದೆ ಎಂಬ ಆತಂಕ ವ್ಯಕ್ತಪಡಿಸುತ್ತಿರುವ ನೌಕರರ ಸಂಘ, ಇದರ ವಿರುದ್ಧ ಹೋರಾಟಕ್ಕೆ ಸಜ್ಜಾಗುತ್ತಿದೆ.
ಏನಿದು?:ಈಗಾಗಲೇ ದೇಶದ ಅನ್ಯ ರಾಜ್ಯಗಳಲ್ಲಿ ವಿದ್ಯುತ್ ಪೂರೈಕೆಯನ್ನು ಖಾಸಗಿ ಕಂಪನಿಗಳು ಮಾಡುತ್ತಿವೆ. ಮುಂಬೈ, ಅಸ್ಮೀರ್, ಗ್ವಾಲಿಯರ್, ಗಯಾ, ಕಾನ್ಪುರ ಸೇರಿದಂತೆ ಹಲವು ನಗರಗಳಲ್ಲಿ ವಿದ್ಯುತ್ ಪೂರೈಕೆಯನ್ನು ಖಾಸಗಿ ಕಂಪನಿಗಳು ಮಾಡುತ್ತಿವೆ. ಅದರಂತೆ ರಾಜ್ಯದಲ್ಲೂ ಕೆಲವೊಂದಿಷ್ಟು ನಗರಗಳಲ್ಲಿ ವಿದ್ಯುತ್ ವಿತರಣೆ ಮಾಡಲು ಅನುಮತಿ ಕೋರಿ ಕೆಇಆರ್‌ಸಿಗೆ ಅರ್ಜಿಯನ್ನು ಟಾಟಾ ಪವರ್ ಕಂಪನಿ ಲಿಮಿಟೆಡ್ ಕೇಳಿಕೊಂಡಿದೆ.
ಅತ್ತ ಆಕ್ಷೇಪಗಳು ಸಲ್ಲಿಕೆಯಾಗುತ್ತಿದ್ದರೆ ಇತ್ತ ಹೆಸ್ಕಾಂ ಎಂಪ್ಲಾಯಿಸ್ ಯೂನಿಯನ್ (ನೌಕರರ ಸಂಘ) ತೀವ್ರ ಆಕ್ಷೇಪಿಸಿದೆ. ಯಾವುದೇ ಕಾರಣಕ್ಕೂ ಖಾಸಗೀಕರಣಕ್ಕೆ ಅನುಮತಿ ಕೊಡಬಾರದು. ಕೊಟ್ಟರೆ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಕೆಯನ್ನೂ ನೀಡುತ್ತಿದೆ.
ಗ್ರಾಹಕರಿಗೆ ಯಾವ ವಿದ್ಯುತ್ ಬಳಸಬೇಕೆಂದು ನಿರ್ಧರಿಸಲು ಆಯ್ಕೆ ಇರುತ್ತದೆ. ಹೆಸ್ಕಾಂ ಬೇಕಾದವರು ಹೆಸ್ಕಾಂನಿಂದ ಅಥವಾ ಖಾಸಗಿಯಿಂದ ಬೇಕಾದವರು ಖಾಸಗಿ ಕಂಪನಿಗೆ ಅರ್ಜಿ ಸಲ್ಲಿಸಿ ವಿದ್ಯುತ್ ಪಡೆಯಲು ಅವಕಾಶವಿದೆ. ಒಂದು ರೀತಿಯಲ್ಲಿ ಮೊಬೈಲ್ ನೆಟ್‌ವರ್ಕ್‌ನಂತೆ ಇರಲಿದ್ದು ಗ್ರಾಹಕರು ತಮಗೆ ಯಾವುದು ಬೇಕೋ ಅದರ ಸೇವೆ ಪಡೆದುಕೊಳ್ಳಬಹುದು. ಹೀಗಾದರೆ ವಿದ್ಯುತ್ ಸರಬರಾಜುವಿನ ಮೇಲೆ ಸರ್ಕಾರದ ಹಿಡಿತವೇ ಇರುವುದಿಲ್ಲ. ಖಾಸಗಿ ಕಂಪನಿಗಳು ಮೊದಲಿಗೆ ರಿಯಾಯಿತಿ ನೀಡಿ ನಂತರ ಬೇಕಾಬಿಟ್ಟಿಯಾಗಿ ದರ ಹೆಚ್ಚಿಸುವ ಸಾಧ್ಯತೆಗಳು ಹೆಚ್ಚು. ಇನ್ನು ಗ್ಯಾರಂಟಿ ಯೋಜನೆ ಗೃಹಜ್ಯೋತಿ, ನಿರಂತರ ಜ್ಯೋತಿ, ರೈತರ ಪಂಪ್‌ಸೆಟ್‌ಗಳಿಗೆ ಸಬ್ಸಿಡಿ ನೀಡಲು ಖಾಸಗಿ ಕಂಪನಿಗಳು ಮುಂದಾಗುವುದಿಲ್ಲ. ಇದರಿಂದ ಗ್ರಾಹಕರಿಗೆ ತೊಂದರೆಯಾಗುತ್ತದೆ. ಸರ್ಕಾರದ ಯಾವುದೇ ಬಗೆಯ ಸಬ್ಸಿಡಿಗಳು ದೊರೆಯುವುದಿಲ್ಲ. ಮೊದ ಮೊದಲು ಬಿಎಸ್‌ಎನ್‌ಎಲ್ ಲಾಭದಲ್ಲೇ ಇತ್ತು. ನಂತರ ಖಾಸಗಿ ಕಂಪನಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟ ಮೇಲೆ ದಿನದಿಂದ ದಿನಕ್ಕೆ ತನ್ನ ವೈಭವ ಕಳೆದುಕೊಂಡಂತೆ ಹೆಸ್ಕಾಂ ಕೂಡ ಕಳೆದುಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂಬ ಕಳವಳ ಹೆಸ್ಕಾಂ ನೌಕರರ ವರ್ಗದ್ದು.
ಟಾಟಾ ಪವರ್ ಕಂಪನಿ ಲಿಮಿಟೆಡ್ ಸೇರಿದಂತೆ ಯಾವುದೇ ಕಂಪನಿಗೂ ಯಾವುದೇ ಕಾರಣಕ್ಕೂ ವಿದ್ಯುತ್ ಸರಬರಾಜಿಗೆ ಅನುಮತಿ ನೀಡಬಾರದು. ನೀಡಲು ಮುಂದಾದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆ ಸಂದೇಶವನ್ನು ಸಂಘ ನೀಡಿದೆ.
ಟಾಟಾ ಪವರ್ ಕಂಪನಿ ಲಿಮಿಟೆಡ್ ರಾಜ್ಯದಲ್ಲಿ 15 ಜಿಲ್ಲೆಗಳಲ್ಲಿ ವಿದ್ಯುತ್ ಪೂರೈಕೆ ಮಾಡಲು ಅವಕಾಶ ಕೊಡಿ ಎಂದು ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ. ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಸರ್ಕಾರದ ಸಬ್ಸಿಡಿ, ಗ್ಯಾರಂಟಿ ಯೋಜನೆಗಳು ಖಾಸಗಿ ಕಂಪನಿಯಲ್ಲಿ ಸಿಗಲ್ಲ. ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲು ಸಾಧ್ಯವಾಗಲ್ಲ. ಇದರ ವಿರುದ್ಧ ಹೋರಾಟ ನಡೆಸಬೇಕಾದೀತು.