ಅವಕಾಶ ಬಂದಾಗ ಕೈಕಟ್ಟಿ ಕೂರಬೇಡಿ: ವಿನಾಯಕ ಪೈ

KannadaprabhaNewsNetwork |  
Published : May 26, 2025, 12:10 AM IST
ಫೋಟೊಪೈಲ್-೨೫ಎಸ್ಡಿಪಿ೬- ಸಿದ್ದಾಪುರದಲ್ಲಿ ಉ.ಕ.ಜಿಲ್ಲಾ ಜಿ.ಎಸ್.ಬಿ.ಸೇವಾವಾಹಿನಿ ರಜತ ಸಂಭ್ರಮದಲ್ಲಿ  ವಿನಾಯಕ ಪೈ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಆತ್ಮ ವಿಶ್ವಾಸವಿದ್ದರೆ ಸಮಾಜದ ಪ್ರೋತ್ಸಾಹ ತನ್ನಿಂದ ತಾನೇ ದೊರೆಯುತ್ತದೆ.

ಸಿದ್ದಾಪುರ; ಪ್ರತಿಯೊಬ್ಬರಲ್ಲೂ ಆತ್ಮವಿಶ್ವಾಸ ಇರಬೇಕು. ಆತ್ಮ ವಿಶ್ವಾಸವಿದ್ದರೆ ಸಮಾಜದ ಪ್ರೋತ್ಸಾಹ ತನ್ನಿಂದ ತಾನೇ ದೊರೆಯುತ್ತದೆ. ಜೀವನದಲ್ಲಿ ಹೊಸ ಅವಕಾಶ ಬಂದಾಗ ಅಳುಕಿ ಕೈಕಟ್ಟಿ ಕೂರದೇ ಅದನ್ನು ಬಾಚಿಕೊಳ್ಳಬೇಕು ಎಂದು ಭಾರತದ ನೂತನ ಸಂಸತ್ ಭವನದ ನಿರ್ಮಾತೃ ಟಾಟಾ ಪ್ರೊಜೆಕ್ಟ ಎಂಡಿ-ಸಿಇಒ ವಿನಾಯಕ ಪೈ ಹೇಳಿದರು.

ಪಟ್ಟಣದ ವಿದ್ಯಾಧಿರಾಜ ಕಲಾಮಂದಿರದಲ್ಲಿ ಉ.ಕ. ಜಿಲ್ಲಾ ಜಿ.ಎಸ್.ಬಿ. ಸೇವಾವಾಹಿನಿಯ ರಜತ ಸಂಭ್ರಮ ಹಾಗೂ ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಸಾಮರ್ಥ್ಯದ ಅರಿವು ನಮಗಿರುವುದಿಲ್ಲ. ಯಾವುದೇ ಕಾರ್ಯವನ್ನೂ ಸಮರ್ಪಣಾ ಭಾವದಿಂದ ಮಾಡಬೇಕು. ಜಿಎಸ್‌ಬಿ ಸಮಾಜದಲ್ಲಿ ಅಪಾರ ಪ್ರತಿಭಾವಂತರಿದ್ದಾರೆ. ಸಮಾಜದ ಭಾಷೆ, ಸಂಸ್ಕೃತಿ, ಭಜನಾ ಪದ್ಧತಿ ಮಾದರಿಯಾದುದು. ಅತ್ಯಂತ ಶ್ರಮದಿಂದ ನಿಷ್ಠೆಯಿಂದ ಉದ್ಯೋಗ ನಡೆಸುವ ಜಿಎಸ್‌ಬಿ ಸಮಾಜದಲ್ಲಿ ಲಕ್ಷ್ಮೀ-ಸರಸ್ವತಿ ನೆಲೆಸಿದ್ದಾರೆ. ನಮ್ಮ ಪಾಲಕರು ನಮಗಾಗಿ ಅಪಾರ ತ್ಯಾಗ ಮಾಡಿರುತ್ತಾರೆ. ಅವರನ್ನು ಕಾಳಜಿಯಿಂದ ನೋಡಿಕೊಳ್ಳಬೇಕು. ಕುಟುಂಬವರ್ಗದವರೊಂದಿಗೆ, ಸಮಾಜದೊಂದಿಗೆ ಬೆರೆಯಬೇಕು. ಎಷ್ಟೇ ಹಣ ಗಳಿಸಿದ್ದರೂ ಸಾಮಾಜಿಕವಾಗಿ ಬೆರೆತು ಸಹಾಯ, ಸಹಕಾರ ನೀಡದಿದ್ದರೆ ಅದು ವ್ಯರ್ಥವಾದಂತೆ ಎಂದರು.

ಭಾರತೀಯರ ಮುಖ್ಯ ಶಕ್ತಿಯೇ ಜ್ಞಾನ. ನಮ್ಮ ದೇಶದಲ್ಲಿ ಅಭಿವೃದ್ಧಿ ಸಾಧಿಸಲು ಸಾಕಷ್ಟು ಮಾರ್ಗಗಳಿವೆ. ನಾವು ಸೋಲಾರ್ ಪವರ್, ವಿಂಡ್ ಪವರ್ ಬಳಕೆ ಮಾಡುವಲ್ಲಿ, ಎಲೆಕ್ಟ್ರಿಕ್‌ ವೆಹಿಕಲ್‌ಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದೇವೆ. ಇಂದು ಭಾರತ ಸೂಪರ್ ಪವರ್ ದೇಶವಾಗಿ ಮಾರ್ಪಟ್ಟಿದೆ. ಈ ಮೊದಲು ಅಮೆರಿಕದಲ್ಲಿ ನಾವು ಮೀಟಿಂಗ್‌ನಲ್ಲಿ ಭಾಗವಹಿಸಿದ್ದನ್ನು ಹೇಳಿಕೊಳ್ಳುತ್ತಿದ್ದೆವು. ಆದರೆ ವಿದೇಶಿಯರು ಇಂದು ಭಾರತದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದನ್ನು ಹೇಳಿಕೊಂಡು ತಿರುಗುವಂತಾಗಿದೆ. ಅಭಿವೃದ್ಧಿಯ ಹಿನ್ನೆಲೆಯಲ್ಲಿ ನಾವು ಜಾಗತಿಕ ಮಟ್ಟದಲ್ಲಿ ಪ್ರಪಂಚದ ನಾಲ್ಕನೇ ಸ್ಥಾನಕ್ಕೆ ಏರುವಂತಾಗಿದೆ. ನಾವು ಮತ್ತಷ್ಟು ಶಿಸ್ತಿನಿಂದ ಕ್ರಮಬದ್ಧವಾದ ಚೌಕಟ್ಟು ಹಾಕಿಕೊಂಡು ಕಾರ್ಯ ನಡೆಸಿದಲ್ಲಿ ಭಾರತ ಪ್ರಪಂಚದ ಬಲಿಷ್ಠ ರಾಷ್ಟ್ರವೆನಿಸಿಕೊಳ್ಳುವಲ್ಲಿ ಸಂಶಯವಿಲ್ಲ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಉ.ಕ. ಜಿಲ್ಲಾ ಸೇವಾವಾಹಿನಿ ಅಧ್ಯಕ್ಷ ರಾಘವ ಬಾಳೇರಿ, ಕಾರ್ಯದರ್ಶಿ ರವಿ ಶಾನಭಾಗ ಮಾತನಾಡಿದರು. ಸಿದ್ದಾಪುರ ಜಿ.ಎಸ್.ಬಿ. ಸಮಾಜದ ಕಾರ್ಯಾಧ್ಯಕ್ಷ ಜಯವಂತ ಪಿ.ಶಾನಭಾಗ, ಜಿಲ್ಲಾ ಸಮಾವೇಶ ಸಮಿತಿಯ ಕಾರ್ಯಾಧ್ಯಕ್ಷ ಕಾಶೀನಾಥ ಪೈ, ಜಿ.ಎಸ್.ಬಿ. ಸಮಾಜ ಯುವಕ ಮಂಡಳಿ ಅಧ್ಯಕ್ಷ ವಿನಾಯಕ ಶಾನಭಾಗ, ಜಿ.ಎಸ್.ಬಿ. ವೈದಿಕ ಮಂಡಳಿ ಅಧ್ಯಕ್ಷ ನಾಗೇಂದ್ರ ಭಟ್ಟ, ಜಿ.ಎಸ್.ಬಿ.ಮಹಿಳಾ ಮಂಡಳಿ ಅಧ್ಯಕ್ಷೆ ಸವಿತಾ ಎನ್.ಕಾಮತ ವೇದಿಕೆಯಲ್ಲಿ ಗೌರವ ಉಪಸ್ಥಿತಿ ನೀಡಿದ್ದರು. ಲಕ್ಮಿವೆಂಕಟೇಶ ದೇವಾಲಯದ ಮೊಕ್ತೇಸರ ಕೃಷ್ಣ ವಾಮನ ಮಹಾಲೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸುಧೀರ ಬೇಂಗ್ರೆ ಅವರ ವಂದೇ ಮಾತರಂ ಗೀತೆ ಹಾಡಿದರು. ಜಿಲ್ಲಾ ಸಮಾವೇಶ ಸಮಿತಿಯ ಕಾರ್ಯಾಧ್ಯಕ್ಷ ಕಾಶೀನಾಥ ಪೈ ಸ್ವಾಗತಿಸಿದರು. ವಿಶ್ರಾಂತ ಪ್ರಾಚಾರ್ಯ ವಿದ್ಯಾಧಿರಾಜ ನಾಟ್ಯ ಸಂಘದ ಅಧ್ಯಕ್ಷ ಡಾ.ಸುರೇಶ ಗುತ್ತಿಕರ ನಿರ್ವಹಿಸಿದರು. ಯುವವಾಹಿನಿ ಉಪಾಧ್ಯಕ್ಷ ರವಿ ಶೆಣೈ ವಂದಿಸಿದರು. ಕಾರ್ಯಕ್ರಮಕ್ಕೆ ಪೂರಕವಾಗಿ ಉಪನ್ಯಾಸ, ಸುಗಮ ಸಂಗೀತ, ಸನ್ಮಾನ, ರೂಪಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ರಜತ ಸಂಭ್ರಮ ಲಾಂಛನ ಬಿಡುಗಡೆ ಮಾಡಲಾಯಿತು. ಈ ಹಿಂದಿನ ಸಮಾವೇಶಗಳ ಚಿತ್ರಣ ಪ್ರದರ್ಶಿಸಲಾಯಿತು.

PREV

Latest Stories

ಜಾಗತಿಕ ತಂತ್ರಜ್ಞಾನ ಶ್ರೇಷ್ಠತೆಗೆ ನೋವಿಗೋ ಸೊಲ್ಯೂಷನ್ಸ್
ಡಿಸಿ ಖಾತೆಯಲ್ಲಿ ಬಳಕೆಯಾಗದ ಮೊತ್ತ ವಾಪಸಿಗೆ ಗಡಿ ಪ್ರಾಧಿಕಾರ ಸಿಎಸ್‌ಗೆ ದೂರು
ಜಲ ಜೀವನ್ ಮಿಷನ್, ನರೇಗಾ ಕಾಮಗಾರಿ ಪರಿಶೀಲನೆ