ಶ್ರೀರಂಗಪಟ್ಟಣ: ವಿಸಿ ನಾಲೆಯಲ್ಲಿ ಮೊಸಳೆ ಪ್ರತ್ಯಕ್ಷ; ಜನರು, ರೈತರಲ್ಲಿ ಆತಂಕ

KannadaprabhaNewsNetwork |  
Published : May 26, 2025, 12:09 AM IST
25ಕೆಎಂಎನ್ ಡಿ19 | Kannada Prabha

ಸಾರಾಂಶ

ನಾಲೆಯ ಮಡುವಿನಲ್ಲಿ ರೈತ ಹಸುಗಳಿಗೆ ನೀರು ಕುಡಿಸಲು ಹೋದಾಗ ಮೊಸಳೆ ಕಾಣಿಸಿಕೊಂಡಿದೆ. ಸತತ ಮಳೆಯಿಂದಾಗಿ ವಿ.ಸಿ.ನಾಲೆಯಲ್ಲಿ ನಾಲ್ಕೈದು ದಿನಗಳಿಂದ ನೀರು ನಿಲ್ಲಿಸಲಾಗಿದೆ. ನೀರು ಸಂಪೂರ್ಣ ಕಡಿಮೆಯಾಗಿದ್ದರಿಂದ ಬಿಸಿಲು ಕಾಯಲು ಕಾಲುವೆ ದಡದ ಬಳಿ ಬಂದಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಚಿಕ್ಕಾಯರಹಳ್ಳಿಯ ಬಳಿಯ ವಿ.ಸಿ.ನಾಲೆಯಲ್ಲಿ ಮೊಸಳೆ ಪ್ರತ್ಯಕ್ಷಗೊಂಡು ಸಾರ್ವಜನಿಕರು ಹಾಗೂ ರೈತರಲ್ಲಿ ಆತಂಕ ಉಂಟು ಮಾಡಿದೆ.

ನಾಲೆಯ ಮಡುವಿನಲ್ಲಿ ಭಾನುವಾರ ಬೆಳಗ್ಗೆ ರೈತ ಹಸುಗಳಿಗೆ ನೀರು ಕುಡಿಸಲು ಹೋದಾಗ ಮೊಸಳೆ ಕಾಣಿಸಿಕೊಂಡಿದೆ.

ಸತತ ಮಳೆಯಿಂದಾಗಿ ವಿ.ಸಿ.ನಾಲೆಯಲ್ಲಿ ನಾಲ್ಕೈದು ದಿನಗಳಿಂದ ನೀರು ನಿಲ್ಲಿಸಲಾಗಿದೆ. ನೀರು ಸಂಪೂರ್ಣ ಕಡಿಮೆಯಾಗಿದ್ದರಿಂದ ಬಿಸಿಲು ಕಾಯಲು ಕಾಲುವೆ ದಡದ ಬಳಿ ಬಂದಿದೆ.

ನಂತರ ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಕೆ.ಆರ್.ಸಾಗರ ಪೊಲೀಸ್ ಠಾಣಾ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ನಂತರ ನಾಲೆ ನೀರಿನಲ್ಲಿ ಕಂಡು ಬಂದ ಮೊಸಳೆ ಹೊರ ಬಾರದ ಕಾರಣ ಡಿಆರ್‌ಎಫ್‌ಒ ಧರ್ಮೇಂದ್ರ ನೇತೃತ್ವದಲ್ಲಿ ಕೂಬಿಂಗ್ ನಡೆಸಿದ್ದು ಮೊಸಳೆ ಸಿಗದ ಕಾರಣ, ಮೊಸಳೆ ಹಿಡಿಯಲು ಬೋನ್ ಇಡಲಾಗಿದೆ.

ಮೊಸಳೆ ಸಾಮಾನ್ಯ ವಯಸ್ಸಿನದ್ದಾಗಿದೆ. ಪೂರ್ಣ ಹೊರಬಾರದ ಕಾರಣ ಮೊಸಳೆ ಪೂರ್ಣ ಚಹರೆ ಹೇಳಲು ಸಾಧ್ಯವಿಲ್ಲ ಎಂದು ಡಿಆರ್‌ಎಫ್‌ಒ ಧರ್ಮೇಂದ್ರ ತಿಳಿಸಿದ್ದಾರೆ. ಕೆ.ಆರ್.ಸಾಗರ ಅಣೆಕಟ್ಟೆಯಿಂದ ನೀರು ಹೊರ ಬಿಟ್ಟಾಗಿ ಬಂದಿರುವ ಸಾಧ್ಯತೆ ಇದೆ. ಈ ಭಾಗದಲ್ಲಿ ಮೊಸಳೆ ಇಲ್ಲ ಎಂದರು.

ಈ ವೇಳೆ ಪಾಂಡವಪುರ ಅರಣ್ಯ ಇಲಾಖೆ ಸಿಬ್ಬಂದಿ ಕುಮಾರ್ ಲಮಾಣಿ, ವಾಚರ್ ಕುಮಾರ್ ಇದ್ದರು.

ವಿ.ಸಿ.ನಾಲೆಯ ಮಡುವಿಗೆ ನಾವು ದನ, ಹಸುಗಳಿಗೆ ನೀರು ಕುಡಿಸಲು ಹೋಗುತ್ತೇವೆ. ಪಕ್ಕದಲ್ಲೆ ಸೋಪಾನ ಕಟ್ಟೆಯಿದ್ದು ಮಹಿಳೆಯರು ಬಟ್ಟೆ ಒಗೆಯಲು ಹೋಗುತ್ತಾರೆ. ಮನೆಗಳು ಸಹ ಇವೆ. ಅರಣ್ಯ ಇಲಾಖೆ ತುರ್ತಾಗಿ ಮೊಸಳೆ ಹಿಡಿದು ಸ್ಥಳಾಂತರ ಮಾಡುವಂತೆ ಚಿಕ್ಕಾಯರಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಜಿಲ್ಲಾದ್ಯಂತ ರಾತ್ರಿವರೆಗೂ ಸುರಿದ ಜಿಟಿ ಜಿಟಿ ಮಳೆ: ಸಾರ್ವಜನಿಕರಿಗೆ ತೊಂದರೆ

ಮಂಡ್ಯ:

ಜಿಲ್ಲಾದ್ಯಂತ ಭಾನುವಾರ ಬೆಳಗ್ಗೆಯಿಂದ ರಾತ್ರಿವರೆಗೂ ಸುರಿದ ಜಿಟಿ ಜಿಟಿ ಮಳೆಯಿಂದಾಗಿ ಸಾರ್ವಜನಿಕರಿಗೆ ತೊಂದರೆ ಎದುರಾಯಿತು.

ಕಳೆದ ಕೆಲ ದಿನಗಳಿಂದ ಮೊಡ ಕವಿದ ವಾತಾವರಣವಿತ್ತು. ಆಗಾಗ್ಗೆ ಮಳೆಯೂ ಸುರಿಯುತ್ತಿತ್ತು. ಭಾನುವಾರ ಬೆಳಗ್ಗೆಯಿಂದಲೆ

ಮಂಡ್ಯ ನಗರ, ಗ್ರಾಮಾಂತರ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳು ಮಳೆ ಸುರಿಯಲು ಆರಂಭವಾಗಿ ರಾತ್ರಿವರೆಗೂ ಮಳೆ ಸುರಿಯುತ್ತಲೆ ಇತ್ತು.

ಭಾನುವಾರ ರಜಾ ದಿನವಾಗಿದ್ದರಿಂದ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ತೊಂದರೆಯಾಯಿತು. ಸಾರ್ವಜನಿಕರ ಸಂಚಾರ ವಿರಳವಾಗಿದ್ದರೂ ಬಹುತೇಕರೂ ಮಳೆಯಿಂದಾಗಿ ಹೊರಗೆ ಬರಲು ಸಾಧ್ಯವಾಗದೇ ಮನೆಯಲ್ಲೆ ಕುಳಿತು ಕಾಲ ಕಳೆಯುವಂತಾಯಿತು.

ಜಿಲ್ಲೆಯ ಮದ್ದೂರು, ಮಳವಳ್ಳಿ, ಪಾಂಡವಪುರ, ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್.ಪೇಟೆ ತಾಲೂಕುಗಳಲ್ಲಿ ಮಳೆಯಿಂದಾಗಿ ಜಿಲ್ಲೆಯ ಪ್ರವಾಸಿ ತಾಣಗಳಲ್ಲೂ ಪ್ರವಾಸಿಗರ ಕೊರತೆ ಕಂಡು ಬಂತು. ಸಾರ್ವಜನಿಕರು ಛತ್ರಿ, ಜರ್ಕಿನ್ ತೊಟ್ಟು ಸಂಚರಿಸುತ್ತಿದ್ದ ದೃಶ್ಯ ಕಂಡು ಬಂತು. ಬಹುತೇಕರು ತಮ್ಮ ಕಾರಿನಲ್ಲೇ ಸುತ್ತಾಟ ನಡೆಸುತ್ತಿದ್ದರು.

ಇಡೀ ದಿನ ಮಳೆ ಸುರಿದರೂ ಯಾವುದೇ ಅನಾಹುತಗಳು ಸಂಭವಿಸಿದ ವರದಿಗಳು ಆಗಲಿಲ್ಲ. ಆದರೆ, ಗ್ರಾಮಾಂತರ ಪ್ರದೇಶಗಳಲ್ಲಿ ಭತ್ತ, ರಾಗಿ ಕೊಯ್ಲು ಆರಂಭವಾಗಿದ್ದು, ಮಳೆಯಿಂದಾಗಿ ರೈತರಿಗೆ ತೊಂದರೆಯಾದ ವರದಿಯಾಗಿದೆ.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು