ಅಡುಗೆಗೆ ರುಚಿ ನೀಡುವ ಕರಿಬೇವನ್ನು ಊಟ ಮಾಡುವಾಗ ಹೇಗೆ ಬದಿಗಿಡಲಾಗುತ್ತದೆಯೋ ಹಾಗೆಯೇ ರಾಜಕೀಯ ಪಕ್ಷಗಳು ಮಹಿಳೆಯರನ್ನು ಕೇವಲ ಮತಕ್ಕಾಗಿ ಬಳಸಿ ಅಧಿಕಾರ ಹಂಚಿಕೆಯ ವೇಳೆ ಕಡೆಗಣಿಸುತ್ತಿವೆ. ಇಂತಹ ‘ಕರಿಬೇವು’ ಪದ್ಧತಿಗೆ ಈಗ ಅಂತ್ಯ ಹಾಡಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ನಾಯಕಿ ಮಂಜುಳಾ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.
ಉಡುಪಿ: ಅಡುಗೆಗೆ ರುಚಿ ನೀಡುವ ಕರಿಬೇವನ್ನು ಊಟ ಮಾಡುವಾಗ ಹೇಗೆ ಬದಿಗಿಡಲಾಗುತ್ತದೆಯೋ ಹಾಗೆಯೇ ರಾಜಕೀಯ ಪಕ್ಷಗಳು ಮಹಿಳೆಯರನ್ನು ಕೇವಲ ಮತಕ್ಕಾಗಿ ಬಳಸಿ ಅಧಿಕಾರ ಹಂಚಿಕೆಯ ವೇಳೆ ಕಡೆಗಣಿಸುತ್ತಿವೆ. ಇಂತಹ ‘ಕರಿಬೇವು’ ಪದ್ಧತಿಗೆ ಈಗ ಅಂತ್ಯ ಹಾಡಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ನಾಯಕಿ ಮಂಜುಳಾ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ನಾರಿಶಕ್ತಿ ಫೋರಂ ವತಿಯಿಂದ ಲೋಕಸಭೆಯಲ್ಲಿ ನಾರಿಶಕ್ತಿ ವಂದನಾ ಅಧಿನಿಯಮವನ್ನು ಜಾರಿಗೊಳಿಸದಂತೆ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ನಿಲುವನ್ನು ಖಂಡಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.ಕೇವಲ ಒಂದು ನಿರ್ದಿಷ್ಟ ಕುಟುಂಬದವರಷ್ಟೇ ಮಹಿಳಾ ನಾಯಕಿಯರಾಗಬೇಕು ಎನ್ನುವ ಗುಲಾಮಗಿರಿಯ ಮನಃಸ್ಥಿತಿಯಿಂದ ಮಹಿಳೆಯರು ಹೊರಬರಬೇಕು. ರಾಣಿ ಅಬ್ಬಕ್ಕ, ಕಿತ್ತೂರು ಚೆನ್ನಮ್ಮ ಹಾಗೂ ಝಾನ್ಸಿ ರಾಣಿ ಲಕ್ಷ್ಮೀಬಾಯಿಯಂತಹ ವೀರ ವನಿತೆಯರು ಕೂಡ ನಮ್ಮಂತೆ ಮಹಿಳೆಯರೇ ಆಗಿದ್ದರು. ಮಹಿಳೆಯರಿಗೂ ಅಗಾಧವಾದ ಸಾಮರ್ಥ್ಯ ಇದೆ ಎಂಬುದನ್ನು ಮನಗಾಣಬೇಕು ಎಂದ ಅವರು, ಇಂದು ಪ್ರಧಾನಿ ಮೋದಿಯವರು ಮಹಿಳೆಯರಿಗೆ ಗೌರವ ನೀಡಿ ಮೀಸಲಾತಿ ನೀಡಲು ಮುಂದಾಗಿದ್ದರೆ, ಪ್ರತಿ ಪಕ್ಷದವರು ಬ್ರಿಟಿಷ್ ಮನಸ್ಥಿತಿಯೊಂದಿಗೆ ಅದನ್ನು ತಡೆಯುತ್ತಿದ್ದಾರೆ ಎಂದು ಕಿಡಿಕಾರಿದರು.
ಉಡುಪಿ ಜಿಲ್ಲೆಯು ಅತಿ ಹೆಚ್ಚು ಮಹಿಳಾ ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆಯಾಗಿದೆ. ಹೀಗಿರುವಾಗ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳೆಯರಿಗೆ ಅರ್ಹ ಪ್ರಾತಿನಿಧ್ಯ ನೀಡಬೇಕು ಎಂದು ಅವರು ಒತ್ತಾಯಿಸಿದರು. ಮನೆಯ ಕೆಲಸವನ್ನೂ, ಕಚೇರಿಯ ಕೆಲಸವನ್ನೂ ನಿಭಾಯಿಸುವ ಮಹಿಳೆಯರು ಹುಟ್ಟುತ್ತಲೇ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಮಹಿಳೆಯರು ಅಸಮರ್ಥರು ಎಂದು ಭಾವಿಸುವವರಿಗೆ ತಕ್ಕ ಉತ್ತರ ನೀಡುವ ಸಮಯ ಬಂದಿದೆ ಎಂದು ಹೇಳಿದರು. ನಾರಿಶಕ್ತಿ ಫೋರಂ ಮತ್ತು ಬಿಜೆಪಿ ಮಹಿಳಾ ಮೋರ್ಚಾ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಜಿಲ್ಲೆಯ ನೂರಾರು ಮಹಿಳಾ ಕಾರ್‍ಯಕರ್ತೆಯರು ಪಾಲ್ಗೊಂಡು ಮಹಿಳಾ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭ ಬಿಜೆಪಿ ಪ್ರಮುಖರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ದಿನಕರ ಶೆಟ್ಟಿ ಹೆರ್ಗ, ಸಂಧ್ಯಾ ರಮೇಶ್, ನೀತಾ ಪ್ರಭು, ಸೌರಭಿ ಪೈ, ಅನಿತಾ ಶ್ರೀಧರ್, ರಶ್ಮಿತಾ ಶೆಟ್ಟಿ, ಸುಮಿತ್ರಾ ನಾಯಕ್, ಪ್ರಭಾಕರ ಪೂಜಾರಿ, ಕಿರಣ್ ಕುಮಾರ್, ದಿನೇಶ್ ಅಮೀನ್, ಜ್ಯೋತಿ ಪೂಜಾರಿ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.