ಚಿತ್ರದುರ್ಗ: ಕೃಷಿ ಕ್ಷೇತ್ರವನ್ನು ಪೂರ್ಣ ಪ್ರಮಾಣದಲ್ಲಿ ನಾಶಪಡಿಸಲು ಮುಂದಾಗಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹಾಗೂ ಮಿತ್ರ ಪಕ್ಷಗಳಿಗೆ ಲೋಕಸಭೆ ಚುನಾವಣೆಯಲ್ಲಿ ಮತ ಹಾಕಬಾರದೆಂದು ಜನತೆಯಲ್ಲಿ ಜಾಗೃತಿಗೊಳಿಸುವುದಕ್ಕಾಗಿ ಹತ್ತು ಲಕ್ಷ ಕರಪತ್ರಗಳನ್ನು ಪ್ರತಿ ಮನೆ ಮನೆಗೆ ಹಂಚಲಾಗುವುದೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಮಿನಾಥನ್ ವರದಿ ಜಾರಿಗೊಳಿಸಿ ರೈತರ ಆದಾಯವನ್ನು ದುಪ್ಪಟ್ಟು ಮಾಡುವುದಾಗಿ ಹೇಳಿದ ಪ್ರಧಾನಿ ನರೇಂದ್ರ ಮೋದಿ ರೈತರ ಕೃಷಿ ಜಮೀನುಗಳನ್ನು ಕಾರ್ಪೊರೇಟ್ ವಲಯಕ್ಕೆ ಕೊಡಲು ಮುಂದಾಗಿದ್ದಾರೆ. ಮೂರು ರೈತ ವಿರೋಧಿ ಕರಾಳ ಕಾಯಿದೆಗಳನ್ನು ಹಿಂದಕ್ಕೆ ಪಡೆಯುವಂತೆ ದೆಹಲಿಯಲ್ಲಿ 13 ತಿಂಗಳುಗಳ ಕಾಲ ರೈತರು ಚಳುವಳಿಯಲ್ಲಿ ತೊಡಗಿದಾಗ ಮಾನವೀಯತೆಯಿಂದಲಾದರೂ ಪ್ರಧಾನಿ ಬಂದು ಸಮಸ್ಯೆಗಳನ್ನು ಕೇಳಬಹುದಿತ್ತು. 754 ರೈತರು ಚಳುವಳಿಯಲ್ಲಿ ಪ್ರಾಣಬಿಟ್ಟಿದ್ದನ್ನು ಲೆಕ್ಕಿಸದೆ ವಿದ್ಯುತ್ ಖಾಸಗೀಕರಣದ ಕಾಯಿದೆ ಪಾಸ್ ಮಾಡಿತು ಎಂದು ದೂರಿದರು.ಬಿಜೆಪಿ ಮತ್ತು ಮಿತ್ರ ಪಕ್ಷಗಳಿಗೆ ಮತ ಹಾಕದಂತೆ 544 ಸಂಘಟನೆಗಳು ತೀರ್ಮಾನ ತೆಗೆದುಕೊಂಡಿರುವುದರಿಂದ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಹತ್ತು ಲಕ್ಷ ಕರಪತ್ರಗಳನ್ನು ಮನೆಗಳಿಗೆ ವಿತರಿಸಿ ಬಿಜೆಪಿ ಮತ್ತು ಮಿತ್ರ ಪಕ್ಷಗಳಿಗೆ ಮತ ಹಾಕದಂತೆ ಜನತೆಯನ್ನು ವಿನಂತಿಸುವುದಾಗಿ ತಿಳಿಸಿದರು. ಹತ್ತು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ನರೇಂದ್ರ ಮೋದಿ ದೇವರುಗಳನ್ನು ಬೀದಿಗೆ ತಂದು ಜಾತಿ ಧರ್ಮಗಳ ನಡುವೆ ಸಂಘರ್ಷವಿಡುವುದನ್ನು ಬಿಟ್ಟರೆ ಅಭಿವೃದ್ಧಿ ಏನು ಆಗಿಲ್ಲ. ಹಾಗಾಗಿ ಪಾರ್ಲಿಮೆಂಟ್ ಚುನಾವಣೆಯನ್ನು ಆಂದೋಲನವಾಗಿ ತೆಗೆದುಕೊಂಡಿದ್ದು, ಕೋಮುವಾದಿ ಬಿಜೆಪಿ ಹಾಗೂ ಮಿತ್ರ ಪಕ್ಷಗಳಿಗೆ ಮತ ಹಾಕಬಾರದೆಂದು ರೈತರು ಹಾಗೂ ಜನಸಾಮಾನ್ಯರಲ್ಲಿ ಮನವಿ ಮಾಡುವುದಾಗಿ ವೀರಸಂಗಯ್ಯ ಹೇಳಿದರು.
ರೈತ ಮುಖಂಡರಾದ ಚಂದ್ರಶೇಖರ್, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಮಂಜುನಾಥ್, ಸರ್ವೋದಯ ಕರ್ನಾಟಕದ ಮುಖಂಡ ಜೆ.ಯಾದವರೆಡ್ಡಿ, ಬ್ಯಾಡರಹಳ್ಳಿ ಶಿವಕುಮಾರ್, ಅಪ್ಪಣ್ಣ, ತಿಪ್ಪೇಸ್ವಾಮಿ, ಮೇಟಿಕುರ್ಕೆ ತಿಪ್ಪೇಸ್ವಾಮಿ, ಧನಂಜಯ, ಕೆ.ಸಿ.ಹೊರಕೇರಪ್ಪ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ನಿವೃತ್ತ ಪ್ರಾಚಾರ್ಯ ಶಿವಕುಮಾರ್ ಇದ್ದರು.