ಚಿತ್ರದುರ್ಗ: ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ 25 ಗ್ಯಾರಂಟಿಗಳ ಘೋಷಣೆ ಮಾಡಿದ್ದು, ಆ ಪಕ್ಷವೇನಾದರೂ ಅಧಿಕಾರಕ್ಕೆ ಬಂದರೆ ದೇಶ ದಿವಾಳಿ ಆಗೋದು ಖಚಿತವೆಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್ ಸೇರಿದಂತೆ ನಲವತ್ತು ಮಂದಿಯ ತಂಡ 2047 ಅವರಿಗೆ ಭವ್ಯ ಭಾರತದ ಭವಿಷ್ಯವನ್ನು ಗುರಿಯಾಗಿರಿಸಿಕೊಂಡು ಸಂಕಲ್ಪ ಪತ್ರ ಬಿಡುಗಡೆಗೊಳಿಸಿದೆ. 1952ರ ಜನಸಂಘದ ಪ್ರಣಾಳಿಕೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಪಡಿಸುವುದಾಗಿ ಘೋಷಿಸಿತ್ತು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸುವುದಾಗಿಯೂ ಭರವಸೆ ನೀಡಿತ್ತು. ಅದರಂತೆ ಎರಡೂ ಈಡೇರಿವೆ ಎಂದರು.
ದೇಶದ ಸುರಕ್ಷತೆ, ಆರ್ಥಿಕವಾಗಿ ಹಿಂದುಳಿದವರ ಸಬಲೀಕರಣ, ಮಧ್ಯಮ ವರ್ಗಕ್ಕೆ ಲಾಭವಾಗುವ ಯೋಜನೆಗಳು, ನಾರಿಶಕ್ತಿ ಸಬಲೀಕರಣ, ರೈತರ ಗ್ಯಾರಂಟಿ, ಯುವಕರ ಗ್ಯಾರಂಟಿ, ಹಿರಿಯ ನಾಗರೀಕರ ಬದುಕು ಸುಧಾರಣೆಗೆ ಪೋರ್ಟಲ್, ಶ್ರಮಿಕ ಬಂಧುಗಳಿಗೆ ರಾಷ್ಟ್ರೀಯ ಕನಿಷ್ಠ ವೇತನ ನೀತಿ, ವಿಶ್ವಬಂಧು ಯೋಜನೆ, ಸಮೃದ್ಧ ಭಾರತ, ಮೂಲಭೂತ ಸೌಕರ್ಯ, ಸಾಂಸ್ಕೃತಿಕ ಪರಂಪರೆ ಎತ್ತಿ ಹಿಡಿಯುವುದು, ಭ್ರಷ್ಟಾಚಾರವಿಲ್ಲದ ಉತ್ತಮ ಆಡಳಿತ ನೀಡುವುದು ಸಂಕಲ್ಪ ಪತ್ರದ ಪ್ರಮುಖ ಯೋಜನೆಗಳಾಗಿವೆ. 25 ಲಕ್ಷ ಕೋಟಿ ರು. ಯೋಜನೆ ಕೊಡಲು ಕಾಂಗ್ರೆಸ್‍ನಿಂದ ಆಗಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಮಿಷಗಳಿಗೆ ಬಲಿಯಾಗದಂತೆ ಕೆ.ಎಸ್.ನವೀನ್ ಮತದಾರರಲ್ಲಿ ವಿನಂತಿಸಿದರು.ರೋಡ್ ಶೋ ಬದಲು ಸಮಾವೇಶ ಏ.24ರಂದು ಚಿತ್ರದುರ್ಗಕ್ಕೆ ಉತ್ತರ ಪ್ರದೇಶದ ಸಿಎಂ ಯೋಗಿ ಅವರು ಆಗಮಿಸಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪರವಾಗಿ ಚುನಾವಣಾ ಪ್ರಚಾರ ಕೈಗೊಳ್ಳುವರು. ಈ ಮೊದಲು ಯೋಗಿ ಅವರು ರೋಡ್ ನಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಈಗ ಸ್ವರೂಪ ಬದಲಾಗಿದ್ದು ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಸಮಾವೇಶ ಆಯೋಜಿಸಲಾಗಿದೆ. ಅಂದು ಹನ್ನೊಂದು ಗಂಟೆಗೆ ಸಮಾವೇಶ ನಡೆಯಲಿದೆ ಎಂದರು. ನಗರಸಭೆ ಸದಸ್ಯರುಗಳಾದ ಸುರೇಶ್, ಹರೀಶ್, ಬಿಜೆಪಿ. ಉಪಾಧ್ಯಕ್ಷ ಶಿವಣ್ಣಾಚಾರ್, ರವಿಕುಮಾರ್, ಪರಮೇಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ವೀರೇಶ್, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ವಕ್ತಾರ ನಾಗರಾಜ್ ಬೇದ್ರೆ ಪತ್ರಿಕಾಗೋಷ್ಠಿಯಲ್ಲಿದ್ದರು.