ನರಗುಂದ: ಮಠ-ಮಾನ್ಯಗಳು ಶಿವಾನುಭವದ ಜತೆಗೆ ಲೋಕಾನುಭವದ ಮೂಲಕ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಜನಪದ ವಿದ್ವಾಂಸ ಮಲ್ಲಯ್ಯ ತೋಟಗಂಟಿ ಹೇಳಿದರು.
ನಾನು ನನ್ನದು ಎನ್ನುವ ಬದಲು ನಾವು ನಮ್ಮವರು ಎಂಬ ಭಾವನೆ ಪ್ರತಿಯೊಬ್ಬರಲ್ಲಿ ಮೂಡಿ, ವಿಶ್ವಗುರು ಬಸವಣ್ಣನವರು ಕಂಡ ಸಮ ಸಮಾಜದ ಕನಸನ್ನು ನನಸು ಮಾಡಬೇಕಿದೆ. ಇಂದಿನ ಯುವ ಸಮುದಾಯ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ಗ್ರಾಮೀಣ ಪ್ರದೇಶದ ಸಂಸ್ಕೃತಿ ಪರಂಪರೆಯ ನಾಶಕ್ಕೆ ನೇರ ಹೊಣೆಗಾರರಾಗುತ್ತಿದ್ದಾರೆ. ಹೀಗಾಗಿ ಯುವ ಜನತೆ ನಮ್ಮ ಸಂಸ್ಕೃತಿ-ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುವುದು ಅವಶ್ಯವಿದೆ ಎಂದರು. ಸಾನ್ನಿಧ್ಯ ವಹಿಸಿದ್ದ ಶಾಂತಲಿಂಗ ಶ್ರೀಗಳು ಮಾತನಾಡಿ, ಗ್ರಾಮೀಣ ಸಂಸ್ಕೃತಿ ಎಂದರೆ ಹಳ್ಳಿಗಳ ಜನರ ಜೀವನ ಶೈಲಿ, ಆಚರಣೆಗಳು, ನಂಬಿಕೆಗಳು ಮತ್ತು ಕಲೆಗಳು. ಹಳ್ಳಿಯ ಸಂಸ್ಕೃತಿ ನಗರ ಸಂಸ್ಕೃತಿಗಿಂತ ಭಿನ್ನವಾಗಿದ್ದು, ಪ್ರಕೃತಿ ಮತ್ತು ಕೃಷಿಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಗ್ರಾಮೀಣ ಸಂಸ್ಕೃತಿಯಲ್ಲಿ ಆಚರಿಸಲಾಗುವ ಹಬ್ಬಗಳು, ಕಲೆಗಳು, ನೃತ್ಯಗಳು ಮತ್ತು ಕಥೆಗಳು ಇಂದಿಗೂ ಹಳ್ಳಿಗಾಡಿನ ಜನರ ಜೀವನದ ಅವಿಭಾಜ್ಯ ಅಂಗವಾಗಿವೆ ಎಂದರು.ಈ ಸಂದರ್ಭದಲ್ಲಿ ಇತ್ತೀಚಿಗೆ ಸೇವಾನಿವೃತ್ತಿ ಹೊಂದಿದ ಶಿಕ್ಷಕರಾದ ಸಂಗಮೇಶ ಫ. ಕೊಣ್ಣೂರ ಅವರನ್ನು ಸತ್ಕರಿಸಲಾಯಿತು. ವಿಶ್ರಾಂತ ಶಿರಸ್ತೇದಾರ ಬಸವರಾಜ ಕುಕನೂರ, ನ್ಯಾಯಾಂಗ ಇಲಾಖೆಯ ವಿಶ್ರಾಂತ ಪ್ರಥಮ ದರ್ಜೆ ಸಹಾಯಕ ಎ.ಎಸ್. ಮಕಾನದಾರ ಹಾಗೂ ಎಸ್.ವೈ.ಎಸ್. ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಗುರು ಕಲ್ಲೇದ, ಬಿ .ಕೆ. ಹಿರೇಗೌಡ್ರ, ಮುದಬಸಪ್ಪ ನಾಶಿ, ಕರಬಸಪ್ಪ ಐನಾಪುರ, ಪ್ರೊ. ಆರ್.ಬಿ. ಚಿನಿವಾಲರ, ನೀಲಕಂಠ ಮಡಿವಾಳರ ಉಪಸ್ಥಿತರಿದ್ದರು.ಶಿಕ್ಷಕ ಮಹಾಂತೇಶ ಹಿರೇಮಠ ಸ್ವಾಗತಿಸಿದರು. ಪ್ರೊ. ಆರ್.ಕೆ. ಐನಾಪುರ ಕಾರ್ಯಕ್ರಮ ನಿರೂಪಿಸಿ. ವಂದಿಸಿದರು.