ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ಈಗಾಗಲೇ ಎಂಟು ವಿಧಾನಸಭಾ ಕ್ಷೇತ್ರವನ್ನೂ ಸುತ್ತಿ ಬಂದಿದ್ದೇನೆ. ಎಲ್ಲ ಕಡೆ ಕಾರ್ಯಕರ್ತರ ಸಂಘಟನೆಯ ಕೆಲಸವಾಗುತ್ತಿದೆ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಇದುವರೆಗ ಎಲ್ಲ ಕ್ಷೇತ್ರಗಳಿಗೆ ಭೇಟಿ ನೀಡಲೇ ಸಾಧ್ಯವಾಗಿಲ್ಲ ಎಂದರು.
ನನ್ನ ಬೆಂಬಲಕ್ಕೆ ಹಿಂದುಳಿದ ವರ್ಗದ ದೊಡ್ಡ ಸಂಖ್ಯೆಯ ಜನರೇ ನಿಂತಿದ್ದಾರೆ. ದಲಿತರು ಜೊತೆಯಾಗಿದ್ದಾರೆ. ಮುಂದುವರೆದ ಜಾತಿ ಎಂದು ಹೇಳುವ ಬ್ರಾಹ್ಮಣರು, ಲಿಂಗಾಯಿತರು ಮತ್ತು ಒಕ್ಕಲಿಗರು ಅವರದೇ ಆದ ಬೇರೆ ಬೇರೆ ಕಾರಣಕ್ಕೆ ನನಗೆ ಬೆಂಬಲ ಸೂಚಿಸಿದ್ದಾರೆ. ಇದು ನನಗೆ ದೊಡ್ಡ ಆತ್ಮವಿಶ್ವಾಸ ಮೂಡಿಸಿದೆ ಎಂದು ಹೇಳಿದರು.ನಾನು ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ ಎಂದು ಕೆಲವು ಶಕ್ತಿಗಳು ವಿನಾಕಾರಣ ಸುದ್ದಿ ಹಬ್ಬಿಸುತ್ತಿದ್ದಾರೆ. ಸೋಲಿನ ಭಯವೇ ಇದಕ್ಕೆ ಕಾರಣ. ಆದರೆ ನನ್ನ ಉದ್ದೇಶದಿಂದ ನಾನು ಹಿಂದೆ ಸರಿಯುವುದಿಲ್ಲ. ನನ್ನ ಕಾರ್ಯಕರ್ತರು ಇಂತಹ ಯಾವುದೇ ಸುದ್ದಿಯನ್ನು ನಂಬಬಾರದು ಎಂದು ಮನವಿ ಮಾಡಿದರು.
ಪಕ್ಷದೊಳಗಿರುವ ಇನ್ನೂ ಅನೇಕ ನಾಯಕರಿಗೆ ತೀವ್ರ ಅಸಮಾಧಾನ ಇದೆ. ಕಾಲಕಾಲಕ್ಕೆ ಅದನ್ನು ಹೊರ ಹಾಕಿದ್ದಾರೆ. ನಾನು ಧೈರ್ಯವಾಗಿ ಪಕ್ಷದಿಂದ ಹೊರ ಬಂದು ಪಕ್ಷ ಶುದ್ಧೀಕರಣದ ಹೋರಾಟ ನಡೆಸಿದ್ದೇನೆ. ಅವರುಗಳು ಒಳಗಿದ್ದುಕೊಂಡೇ ಹೋರಾಟ ನಡೆಸುತ್ತಿದ್ದಾರೆ ಎಂದರು.
ನಾಮಪತ್ರದ ಸಲ್ಲಿಸುವ ಠೇವಣಿ ಹಣವಾಗಿ ನಗರದ ಮಹಿಳೆಯರು ಮತ್ತು ಮುತ್ತೈದೆಯರು ಸೇರಿ 24 ಸಾವಿರ ರು. ಮತ್ತು ತೀರ್ಥಹಳ್ಳಿಯ ಭೀಮನಕಟ್ಟೆ ಮಠದ ಶ್ರೀಗಳು 1 ಸಾವಿರ ರು. ನೀಡಿದ್ದು, ನನ್ನ ಗೆಲುವಿಗೆ ಈ ನೆಲದ ಶ್ರೇಷ್ಠರಾದ ಸಾಧು ಸಂತರು ಮತ್ತು ತಾಯಂದಿರುವ ಹರಸಿ ಒಟ್ಟು 25 ಸಾವಿರ ರು. ನೀಡಿದ್ದಾರೆ. ಇದು ನನ್ನ ಗೆಲುವಿನ ಸಂಕೇತ ಎಂದರು.
ಮುಸ್ಲಿಂರ ಮತಗಳೂ ಬರಲಿವೆ!: ಹಿಂದೂ ಭಕ್ತನಿಗೆ ರಾಷ್ಟ್ರಭಕ್ತ ಮುಸಲ್ಮಾನರು ಮತ ಖಂಡಿತವಾಗಿಯೂ ಬೀಳುತ್ತದೆ. ನನ್ನನ್ನು ಅರ್ಥ ಮಾಡಿಕೊಂಡ, ನನ್ನಿಂದ ಸಹಾಯ ಪಡೆದ ಮುಸಲ್ಮಾನರು ಖಂಡಿತವಾಗಿಯೂ ನನಗೆ ಮತ ಚಲಾಯಿಸುತ್ತಾರೆ. ಪ್ರತಿ ಚುನಾವಣೆಯಲ್ಲಿಯೂ ಮಸ್ಲಿಂರು ನನಗೆ ಮತ ನೀಡಿದ್ದಾರೆ ಎಂದು ಈಶ್ವರಪ್ಪ ಹೇಳಿದರು.ಈಶ್ವರಪ್ಪ, ಗೀತಾ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರುತ್ತಿದ್ದು, ಈ ನಡುವೆ ಸ್ವತಂತ್ರವಾಗಿ ಕಣಕ್ಕಿಳಿದಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಗೀತಾ ವಿರುದ್ಧ ಬಿಜೆಪಿ ಪಕ್ಷ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ಬಿ.ವೈ.ರಾಘವೇಂದ್ರರನ್ನು ಕಣಕ್ಕಿಳಿಸಲಾಗಿದೆ. ಅದೇ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸು ತ್ತಿರುವ ಕೆ.ಎಸ್.ಈಶ್ವರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು, ಭಾವಚಿತ್ರ ಪ್ರಚಾರ ಮಾಡುತ್ತಿದ್ದಾರೆ. ಈ ಮೂಲಕ ಜನಸಾಮಾನ್ಯರನ್ನು ದಾರಿ ತಪ್ಪಿಸುತ್ತಿದ್ದಾರೆ. ಜೊತೆಗೆ ಬಿಜೆಪಿ ಭಾಗವೆಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಮತದಾರರನ್ನು ಗೊಂದಲಕ್ಕೆ ದೂಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದೆ.