ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯ ಪರಿಶೀಲನಾ ಸಮಿತಿಯಲ್ಲಿ ಕೃಷಿ ಆರ್ಥಿಕ ತಜ್ಞರು, ಪರಿಸರ ತಜ್ಞರು ಹಾಗೂ ಸಮಾಜ ವಿಜ್ಞಾನಿಗಳನ್ನು ಸೇರ್ಪಡೆ ಮಾಡಿಲ್ಲ. ಜೊತೆಗೆ ಯೋಜನೆ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡದಿರುವುದು ಹಾಗೂ ಎಲ್ಲ ರೈತರಿಗೆ ಅಹವಾಲು ಹೇಳಿಕೊಳ್ಳಲು ಅವಕಾಶ ನೀಡದಿರುವುದು ನಿವೃತ್ತ ನ್ಯಾಯಮೂರ್ತಿ ಗುಹನಾಥನ್ ನರೇಂದರ್ ಸಮಿತಿ ಮೇಲೆ ಅನುಮಾನ ಮೂಡಿದೆ ಎಂದು ಕರ್ನಾಟಕ ಪ್ರಾಂತ ರೈತಸಂಘ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್ ಪ್ರತಿಕ್ರಿಯಿಸಿದ್ದಾರೆ.
ತಮ್ಮ ಅಮೂಲ್ಯ ಫಲವತ್ತಾದ ನೀರಾವರಿ ಸಮೃದ್ಧ, ಬಹು ವಾರ್ಷಿಕ ಕೃಷಿ ಭೂಮಿ ಉಳಿಸಿಕೊಳ್ಳಲು ಸುಮಾರು ಎರಡು ವರ್ಷಗಳಷ್ಟು ದೀರ್ಘಕಾಲದಿಂದ ನಡೆಯುತ್ತಿರುವ ಹೋರಾಟದ ಮುಂಚೂಣಿಯಲ್ಲಿರುವ ರೈತ ಮಹಿಳೆಯರು ದೂರು, ಅಹವಾಲು, ಆಕ್ಷೇಪಣೆ ಸಲ್ಲಿಸದಂತೆ ತಡೆಯಲು, ಪಹಣಿ ತಮ್ಮ ಹೆಸರಿನಲ್ಲಿ ಇರುವುದನ್ನು ಖಚಿತಪಡಿಸಿಕೊಂಡು ಪೂರ್ವ ನೋಂದಣಿ ಮಾಡುವುದನ್ನು ಸಮಿತಿ ಕಡ್ಡಾಯ ಮಾಡಿದೆ.
ಇದರಿಂದ ರೈತ ಮಹಿಳೆಯರಿಗೆ ದೂರು ಸಲ್ಲಿಸುವ ಅವಕಾಶ ನಿರಾಕರಿಸಲಾಗಿದೆ. ಇದೇ ರೀತಿ ಸಾವಿರಾರು ಕೃಷಿ ಕೂಲಿಕಾರರು, ಮೃತ ಕುಟುಂಬ ಸದಸ್ಯರ ಹೆಸರಿನಲ್ಲಿ ಪಹಣಿ ಇರುವ ಸಾವಿರಾರು ಬಡ ರೈತರು, ಪಾಲು ಹಾಗೂ ಗುತ್ತಿಗೆ ಆಧಾರದ ಮೇಲೆ ಕೃಷಿ ಮಾಡುತ್ತಿರುವ ನೂರಾರು ರೈತರನ್ನು ದೂರು ಸಲ್ಲಿಸದಂತೆ ತಡೆಯಲಾಗಿದೆ ಎಂದು ಟೀಕಿಸಿದ್ದಾರೆ.ರಾಜ್ಯದ ಒಂದು ಪ್ರದೇಶದಲ್ಲಿ ಜಾರಿ ಮಾಡುವ ಅದೂ ಕೃಷಿ ಭೂಮಿ ನಾಶ ಮಾಡುವ, ಒಟ್ಟಾರೆ ಇಡೀ ರಾಜ್ಯದ ಮೇಲೆ ವಿಶೇಷವಾಗಿ ಬೆಂಗಳೂರು ಜೀವ ಪರಿಸರದ ಮೇಲೆ ದುಷ್ಪರಿಣಾಮ ಬೀರಬಹುದಾದ ಬಿಡದಿ ಟೌನ್ ಶಿಪ್ ಯೋಜನೆ ಸಂಬಂಧಿಸಿದ ವಿಷಯದ ಮೇಲೆ ಇಡೀ ರಾಜ್ಯದ ಎಲ್ಲಾ ನಾಗರಿಕರಿಗೆ ಆಕ್ಷೇಪಣೆ-ದೂರು-ಅಹವಾಲು ಸಲ್ಲಿಸಲು ಕೂಡ ಅವಕಾಶ ನಿರಾಕರಿಸಿರುವುದನ್ನು ಒಪ್ಪುವಂತಹದ್ದಲ್ಲ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದಂತೆ ಕೃಷಿ ಆರ್ಥಿಕ ತಜ್ಞರು, ಪರಿಸರ ತಜ್ಞರು ಹಾಗೂ ಸಮಾಜ ವಿಜ್ಞಾನಿಗಳನ್ನು ಕೂಡ ಈ ಸಮಿತಿಗೆ ಸೇರ್ಪಡೆ ಮಾಡಿಲ್ಲ. ನಾಡಿನ ಅನ್ನದಾತರು ಡಿ.ಕೆ. ಶಿವಕುಮಾರ್ ಸರ್ಕಾರದ ಇಂತಹ ಎರಡು ನಾಲಿಗೆಯ ಆಟಗಳನ್ನು ಗಮನಿಸುತ್ತಿದ್ದಾರೆ ಎಂದು ಟಿ.ಯಶವಂತ್ ಕಿಡಿಕಾರಿದ್ದಾರೆ.
ಟಿ.ಯಶವಂತ್.