ಕನ್ನಡಪ್ರಭ ವಾರ್ತೆ ಮಡಿಕೇರಿ
ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದಾಗಿ ಮನೆಯ ಬದಿ ಹಾಗೂ ಮನೆಯ ಸಮೀಪದಲ್ಲಿ ತ್ಯಾಜ್ಯ ನೀರು ಹರಿದು ಹೋಗುತ್ತಿದ್ದು, ದುರ್ವಾಸನೆಯಿಂದ ಕೂಡಿದೆ. ಆದ್ದರಿಂದ ಇಲ್ಲಿನ ನಿವಾಸಿಗಳು ಮೂಗು ಮುಚ್ಚಿಕೊಂಡೇ ಸಂಚರಿಸುವ ಪರಿಸ್ಥಿತಿ ಉಂಟಾಗಿದೆ.
ತ್ಯಾಜ್ಯ ನೀರು ಹರಿದು ಹೋಗಲು ಚರಂಡಿ ನಿರ್ಮಿಸಲಾಗಿದೆ. ಆದರೆ ಈ ಬಡಾವಣೆಯಲ್ಲಿ ಚರಂಡಿಗಳು ವಿಶೇಷ, ತಂತ್ರಜ್ಞಾನ ಉಪಯೋಗಿ ನಿರ್ಮಿಸಲಾಗಿದೆ ಎಂಬಂತೆ ಕಂಡು ಬರುತ್ತಿದೆ!ಒಂದು ಕಡೆಯಿಂದ ಸಂಪೂರ್ಣ ಇಳಿಜಾರು ಪ್ರದೇಶವಿದ್ದರೂ ತಾನಾಗಿಯೇ ನೀರು ಸರಾಗವಾಗಿ ಹರಿದು ಹೋಗುವ ಅವಕಾಶವಿದ್ದರೂ ಕಾಂಕ್ರಿಟ್ ಚರಂಡಿ ನಿರ್ಮಿಸಿ ಕೊಳಚೆ ನೀರನ್ನು ಮನೆಗಳ ಎದುರು ಸಂಗ್ರಹವಾಗುವ ಹಾಗೆ ಮಾಡಲಾಗಿದೆ. ಇದರಿಂದ ಈಗ ನಿವಾಸಿಗಳು ಸಮಸ್ಯೆ ಎದುರಿಸುತ್ತಿದ್ದಾರೆ.
ಈ ಬಗ್ಗೆ ಸಂಬಂಧಿಸಿದವರಿಗೆ ದೂರು ನೀಡಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನೀತಿ ಸಂಹಿತೆ ಹೆಸರು ಹೇಳುವ ಮೂಲಕ ಸಂಬಂಧಿಸಿದವರು ನುಣುಚಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ಕಸ ವಿಲೇವಾರಿ ಘಟಕ ನಿರ್ಮಾಣವಾಗಿದ್ದರೂ ಕೂಡ ಕಸ ವಿಲೇವಾರಿ ಘಟಕಕ್ಕೆ ಕಸವನ್ನು ಸಾಗಿಸಲು ಸರಿಯಾದ ರಸ್ತೆ ಕೂಡ ಇಲ್ಲ. ಕಸವನ್ನು ಸಿಕ್ಕ ಸಿಕ್ಕ ಕಡೆಗಳಲ್ಲಿ ಸುರಿಯಲಾಗಿದೆ. ಸುಂದರವಾದ ಪ್ರದೇಶದಲ್ಲಿ ಚಂದದ ಮನೆಗಳ ಒಳಗೆ ಗಬ್ಬೆದ್ದು ನಾರುವ ಪರಿಸ್ಥಿತಿಯಿಂದ ಬಡಾವಣೆಯ ನಿವಾಸಿಗಳು ವಿಧಿ ಇಲ್ಲದೆ ಬದುಕುವ ಪರಿಸ್ಥಿತ ಎದುರಾಗಿದ್ದು, ಸಂಬಂಧಿಸಿದವರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.