ಡಾ.ಅಬ್ದುಲ್ ಕಲಾಂ ಸಂಸ್ಥೆ ನಕಲಿ: ಸಾಬೀತು!

KannadaprabhaNewsNetwork |  
Published : Feb 27, 2025, 12:33 AM IST
ಲಾಂ | Kannada Prabha

ಸಾರಾಂಶ

ನಕಲಿ ಕಲಾಂ ಸಂಸ್ಥೆಗೆ ಡಿಡಿಪಿಐ ಅನುಮತಿ ಕುರಿತು ಕನ್ನಡಪ್ರಭ ಈಚೆಗೆ ಪ್ರಕಟಿಸಿದ್ದ ಸುದೀರ್ಘ ವರದಿ ಪ್ರತಿ.

ಎನ್.ನಾಗೇಂದ್ರಸ್ವಾಮಿ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಪಟ್ಟಣದ ಶ್ರೀನಿವಾಸ ಚಿತ್ರಮಂದಿರದ ಬಸವೇಶ್ವರ ರಸ್ತೆಯಲ್ಲಿ ಡಾ.ಅಬ್ದುಲ್ ಕಲಾಂ ಸಂಸ್ಥೆ ಎಂಬುದೇ ಇಲ್ಲ ಎಂದು ಚಾಮರಾಜನಗರ ಶಿಕ್ಷಣಾಧಿಕಾರಿಗಳ ತಂಡ ಹಿರಿಯ ಅಧಿಕಾರಿಗಳಿಗೆ ಸಂಪೂರ್ಣ ವರದಿ ಸಲ್ಲಿಸಿದ್ದು ನೇಮಕಾತಿ ವೇಳೆ ಕಲಾಂ ಸಂಸ್ಥೆಯ ವಿಳಾಸದಲ್ಲಿ ತಪಾಸಣೆ ಮಾಡಲಾಗಿ ಅಲ್ಲಿ ಸಂಸ್ಥೆಯ ಕಚೇರಿಯೇ ಇಲ್ಲ ಎಂದು ತನಿಖಾ ವರದಿ ಸಲ್ಲಿಸಿದ್ದಾರೆ.

ಇಲ್ಲದ ಕಲಾಂ ಸಂಸ್ಥೆಗೆ ಗಣಕಯಂತ್ರ, ಯೋಗ ಶಿಕ್ಷಕರ ನೇಮಕಾತಿಗೆ ನಿಯಮ ಮೀರಿ ಡಿಡಿಪಿಐ ಅನುಮತಿ ನೀಡಿದ್ದರ ಕುರಿತು ಹಾಗೂ ನೇಮಕಾತಿ ಆದೇಶ ನೀಡಲು ಸಂಸ್ಥೆಯವರೆಂದು ಹೇಳಿಕೊಂಡ ಹಲವರು 50 ಸಾವಿರದಿಂದ 1 ಲಕ್ಷದ 70 ಸಾವಿರದ ತನಕ ವಸೂಲಿ ಮಾಡಿರುವ ಕುರಿತು ಮತ್ತು ಅಟೆಂಡರ್ ನೇಮಕಾತಿಗೆ ಆದೇಶವಿಲ್ಲದಿದ್ದರೂ ನೇಮಕದಲ್ಲೂ ಅಕ್ರಮ ಕುರಿತು ಕನ್ನಡಪ್ರಭ ಸುದೀರ್ಘ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಅಧಿಕಾರಿಗಳ ತಂಡದಿಂದ ತನಿಖೆ ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್, ಯೋಗ ಮತ್ತು ಅಟೆಂಡರ್‌ಗಳನ್ನು ನೇಮಕ ಮಾಡಿಕೊಳ್ಳುವ ಸಂಬಂಧ ಸರ್ಕಾರದ ಆದೇಶವೇ ಇಲ್ಲದಿದ್ದರೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿಡಿಪಿಐ ರಾಮಚಂದ್ರರಾಜೇ ಅರಸ್ ಅವರು ನಿಯಮ ಉಲ್ಲಂಘಿಸಿ ಫೇಕ್ ಕಲಾಂ ಸಂಸ್ಥೆಗೆ ನೇಮಕಾತಿಗೆ ಆದೇಶ ನೀಡಿದ್ದರು.

ಡಿಡಿಪಿಐ ನಿಯಮ ಮೀರಿದ ಆದೇಶ ಪಡೆದ ಕಲಾಂ ಸಂಸ್ಥೆಯ ಮಂದಿ ಜಿಲ್ಲಾದ್ಯಂತ ಗಣಕಯಂತ್ರ ಮತ್ತು ಯೋಗ ಶಿಕ್ಷಕರನ್ನು ನೇಮಿಸಿಕೊಂಡು 5 ವರ್ಷ ನೇಮಕಾತಿ ಅವಧಿ ಎಂದು ತಾವೇ ಲೆಟರ್ ಹೆಡ್‌ನಲ್ಲಿ ನಕಲಿ ಆದೇಶ ವಿತರಿಸಿದ್ದರು. ಈ ಆದೇಶವನ್ನು ಬಳಸಿಕೊಂಡು ಕಲಾಂ ಸಂಸ್ಥೆ ಈ ಪೈಕಿ ಅರ್ಹತೆ ಇಲ್ಲದವರಿಂದ ಲಕ್ಷಾಂತರ ಹಣ ಪಡೆದಿರುವ ಕುರಿತು ವರದಿ ಪ್ರಕಟಿಸಿ ವಾಸ್ತವ ಬೆಳಕು ಚೆಲ್ಲಿತ್ತು. ಎಚ್ಚೆತ್ತ ಸಾರ್ವಜನಿಕ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ತನಿಖೆಗೆ ಆದೇಶಿಸಿತ್ತು. ಜಿಲ್ಲಾ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ್, ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ನಾಗೇಂದ್ರ, ವಿಷಯ ಪರಿವೀಕ್ಷಕ ಗಿರೀಶ್ ಅವರ ತಂಡ ಐದಾರು ದಿನಗಳ ಕಾಲ ತನಿಖೆ ಕೈಗೊಂಡು, ಕೆಲ ಶಿಕ್ಷಣಾಧಿಕಾರಿಗಳು ಮತ್ತು ಕೆಲ ಶಿಕ್ಷಕರ ಅಸಹಕಾರದ ನಡುವೆಯೂ ಹಿರಿಯ ಅಧಿಕಾರಿಗಳು ತಮ್ಮ ತನಿಖಾ ವರದಿ ಸಲ್ಲಿಸಿದ್ದಾರೆ.

ವರದಿಯಲ್ಲಿ ನೇಮಕಾತಿಯಲ್ಲಿ ನಿಯಮ ಮತ್ತು ಅರ್ಹತೆ ಇಲ್ಲದವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಕಲಾಂ ಸಂಸ್ಥೆ ಡಿಡಿಪಿಐಗೆ ನೀಡಿರುವ ವಿಳಾಸದಲ್ಲಿ ಕಲಾಂ ಸಂಸ್ಥೆಯ ಕಚೇರಿಯೂ ಇಲ್ಲ ಎಂಬ ವಾಸ್ತವವನ್ನು ಉಲ್ಲೇಖಿಸಿ ವರದಿ ಸಲ್ಲಿಸಿದ್ದಾರೆ, ತನಿಖೆ ವೇಳೆ ನೇಮಕಗೊಂಡ ಫಲಾನುಭವಿಗಳು ನಮ್ಮಿಂದ ಹಣ ಪಡೆಯಲಾಗಿದೆ ಎಂಬ ವಾಸ್ತವ ಬಾಯ್ಬಿಟ್ಟಿಲ್ಲ. ಹಿರಿಯ ಅಧಿಕಾರಿಯೊಬ್ಬರು ಇತ್ತ ತನಿಖೆಗೂ ನೇಮಿಸಿ ಅತ್ತ, ಇಲಾಖೆಯ ಕೆಲ ಕೆಲಸಗಳಿಗೆ ಅವರನ್ನು ನಿಯೋಜಿಸಿದ್ದು ಹೆಚ್ಚಿನ ರೀತಿ ಫಲಾನುಭವಿ ಪಟ್ಟಿಯೊಂದಿಗೆ ತನಿಖೆ ನಡೆಸಲು ಸಾಧ್ಯವಾಗಿಲ್ಲ, ಉಳಿದಂತೆ ಜಿಲ್ಲಾ ಹಂತದ ಅಧಿಕಾರಿಗಳ ತನಿಖಾ ತಂಡದಲ್ಲಿ ಹನೂರು ಬಿಇಒ ಗುರುಲಿಂಗಯ್ಯರನ್ನು ನೇಮಿಸಲಾಗಿತ್ತು. ಅಟೆಂಡರ್ ನೇಮಕಾತಿ ಆದೇಶದ ಕುರಿತು ಮತ್ತೊಂದು ಆದೇಶ ಹೊರಡಿಸಿ ಬಿಡುಗಡೆಗೆ ಕೆಲ ಶಾಲೆಯ ಮುಖ್ಯ ಶಿಕ್ಷಕರಿಗೆ ಸೂಚಿಸಿ ವಿವಾದಕ್ಕೀಡಾಗಿದ್ದರು. ಈ ಹಿನ್ನೆಲೆ ತನಿಖಾ ತಂಡ ಗುರುಲಿಂಗಯ್ಯರನ್ನು ದೂರವಿಟ್ಟು ವಿಚಾರಣೆ ನಡೆಸಿದೆ. ಅಲ್ಲದೆ ತನಿಖೆ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬರು ತನಿಖಾ ತಂಡದ ಅಧಿಕಾರಿಗಳಿಗೆ ಅಸಹಕಾರ ತೋರಿದ್ದಾರೆ ಎಂದು ಹೇಳಲಾಗಿದ್ದು ನೇಮಕಾತಿ ಪಟ್ಟಿ ವಿತರಣೆಯಲ್ಲಿಯೂ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಡಿಡಿಪಿಐ, ಸಂಸ್ಥೆ ವಿರುದ್ಧ ದೂರು ಸಾಧ್ಯತೆ?:

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹನೂರು ಶೈಕ್ಷಣಿಕ ವಲಯದಿಂದ ನೇಮಕಾತಿ ಆದೇಶ ದೊರೆಯಲಿದೆ ಎಂದು ಡಿಡಿಪಿಐ ಆದೇಶ ನಂಬಿ 50 ಸಾವಿರದಿಂದ ಒಂದೂವರೆ ಲಕ್ಷಕ್ಕೂ ಅಧಿಕ ಹಣ ನೀಡಿ ವಂಚನೆಗೊಳಗಾಗಿರುವ ಅನೇಕರಿದ್ದಾರೆ. ಈ ಪೈಕಿ ಫಲಾನುಭವಿಯೊಬ್ಬರು ದಾಖಲೆ ಸಮೇತ ದೂರು ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಫೇಕ್ ಸಂಸ್ಥೆಗೆ ಆದೇಶ ನೀಡಿದ ಡಿಡಿಪಿಐ, ಸಂಸ್ಥೆಯವರಿಗೆ ಹಣ ನೀಡಿದ ದಾಖಲೆ ಸಮೇತ ದೂರು ನೀಡುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ಕನ್ನಡಪ್ರಭಕ್ಕೆ ಖಚಿತಪಡಿಸಿವೆ.

ದಿನಾಂಕ ತಿಳಿಸದೇ ವಿಚಾರಣೆ ಮುಂದೂಡಿದ ಜೆಡಿ!:

ಡಿಡಿಪಿಐ ವಿರುದ್ಧ ಇಲಾಖೆ ವಿಚಾರಣೆ ನಡೆಸುವಲ್ಲಿ ಮೈಸೂರು ವಿಭಾಗೀಯ ಜಂಟಿ ನಿರ್ದೇಶಕರು 2 ಬಾರಿ ದಿನಾಂಕ ಮುಂದೂಡಿ, ಮತ್ತೊಮ್ಮೆ ದಿನಾಂಕವನ್ನೇ ತಿಳಿಸದೆ 3ನೇ ಬಾರಿ ವಿಚಾರಣೆ ಮುಂದೂಡಿರುವ ವಿಲಕ್ಷಣ ಘಟನೆಯಿದು. ಕಲಾಂ ಸಂಸ್ಥೆಗೆ ಸರ್ಕಾರದ ಆದೇಶವಿಲ್ಲದಿದ್ದರೂ, ಹಿರಿಯ ಅಧಿಕಾರಿಗಳ ಮಾರ್ಗದರ್ಶನ, ಆದೇಶ ಪ್ರತಿಲಭ್ಯವಿಲ್ಲದಿದ್ದರೂ ನಿಯಮ ಮೀರಿ ಡಿಡಿಪಿಐ ನೇಮಕಾತಿ ಆದೇಶ ವಿತರಿಸಿದ್ದಾರೆ. ಸಾಕಷ್ಟು ಭ್ರಷ್ಟಾಚಾರ, ಅಕ್ರಮಕ್ಕೆ ಸಾಥ್ ನೀಡಿದ್ದಾರೆ ಎಂದು ಡಿಡಿಪಿಐ ವಿರುದ್ಧ ನಿರಂಜನ್ ಎಂಬುವರು ಸಿಎಂ, ಶಿಕ್ಷಣ ಸಚಿವರು, ಆಯುಕ್ತರಿಗೆ ಲಿಖಿತ ದೂರು ನೀಡಿದ ಹಿನ್ನೆಲೆ ವಿಚಾರಣೆಗೆ ಆಯುಕ್ತರು ಮೈಸೂರು ಜಂಟಿ ನಿರ್ದೇಶಕ ಪಾಂಡುರಂಗರನ್ನು ನೇಮಿಸಿ ಆದೇಶಿಸಿದ್ದರು.

ಆದೇಶ ಪಡೆದ ಜಂಟಿ ನಿರ್ದೇಶಕರು ಮೊದಲಿಗೆ ದೂರುದಾರ ನಿರಂಜನ್ ರಿಗೆ ಫೆ.7ರಂದು ವಿಚಾರಣೆ ಎಂದು ಸೂಚಿಸಿ ನೋಟಿಸ್ ನೀಡಿ, ಪುನಃ ಫೆ.19ರಂದು ಎಂದು, ಬಳಿಕ 19ರಂದು ಇಲಾಖಾ ಕಾರ್ಯನಿಮಿತ್ತ ಎಂದು ಕಾರಣ ತಿಳಿಸಲಾಗಿತ್ತು. ಆದರೆ ಪುನಃ ದೂರುದಾರರಿಗೆ ಯಾವ ದಿನಾಂಕದಂದು ವಿಚಾರಣೆ ಎಂದು ತಿಳಿಸದೆ ಮುಂದೂಡಿ ಜಂಟಿ ನಿರ್ದೇಶಕರಿಗೆ ದೂರುದಾರರ ಕೆಂಗಣ್ಣಿಗೆ ಗುರಿಯಾಗಿದ್ದ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ ಬಳಿಕ ಫೆ.28ರಂದು ವಿಚಾರಣೆ ನಡೆಯಲಿದೆ ಎಂದು ಹೇಳಲಾಗಿದೆ.

ಇಲಾಖೆ ಕಾರ್ಯನಿಮಿತ್ತ ಡಿಡಿಪಿಐ ವಿರುದ್ಧ ಫೆ.19ರಂದು ನಡೆಯಬೇಕಿದ್ದ ವಿಚಾರಣೆ ದಿನಾಂಕ ನಿಗದಿಗೊಳಿಸದೆ ಮುಂದೂಡಲಾಗಿತ್ತು. ಇದೀಗ ಫೆ.28ಕ್ಕೆ ವಿಚಾರಣೆಗೆ ನಿರ್ಣಯ ಕೈಗೊಳ್ಳಲಾಗಿದ್ದು ಮೈಸೂರಿನ ಜಂಟಿ ನಿರ್ದೇಶಕರ ಕಚೇರಿಯಲ್ಲಿಯೇ ದೂರುದಾರರು ಹಾಗೂ ಡಿಡಿಪಿಐ ವಿಚಾರಣೆಗೊಳಪಡಿಸಿ ಇಬ್ಬರಿಂದಲೂ ಹೇಳಿಕೆ ಪಡೆಯಲಾಗುವುದು. ಮೂಲ ದಾಖಲೆ ಸಮೇತ ಹಾಜರಾಗಲು ಇಬ್ಬರಿಗೂ ಸೂಚಿಸಿದೆ.

- ಪಾಂಡುರಂಗ, ಜಂಟಿ ನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ