ಡಾ.ಅಂಬರೀಷ್ ಫೌಂಡೇಷನ್ ಸೇವೆಯನ್ನು ರಾಜ್ಯಕ್ಕೆ ವಿಸ್ತರಣೆ: ಮಾಜಿ ಸಂಸದೆ ಸುಮಲತಾ

KannadaprabhaNewsNetwork |  
Published : May 30, 2025, 12:07 AM IST
29ಕೆಎಂಎನ್ ಡಿ22 | Kannada Prabha

ಸಾರಾಂಶ

ಸಿನಿಮಾದಲ್ಲಿ ಇದ್ದಾಗಲೇ ಅಂಬರೀಷ್ ಕಲಿಯುಗ ಕರ್ಣನಾಗಿದ್ದರು. ರಾಜಕೀಯಕ್ಕೆ ಬಂದ ಮೇಲೆ ಜನರಿಗೆ ಇನ್ನಷ್ಟು ಹತ್ತಿರವಾದರು. ಸಂಸದರ ಅನುದಾನ ಏನು ಎಂಬುದು ಜನರಿಗೆ ಗೊತ್ತಿರಲಿಲ್ಲ. ಅದು ಖರ್ಚಾಗದೆ ವಾಪಸ್ ಹೋಗುತ್ತಿತ್ತು. ಆದರೆ, ಅಂಬರೀಷ್ ಸಂಸದರಾದ ನಂತರ ಪ್ರತಿಯೊಂದು ಪೈಸೆಯನ್ನು ಖರ್ಚು ಮಾಡಿ ಹಳ್ಳಿ ಹಳ್ಳಿಗಳಿಗೂ ಸಮುದಾಯ ಭವನಗಳಿಗೆ ಅನುದಾನ ನೀಡಿ ನೆರವಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಚಿತ್ರನಟ ಅಂಬರೀಷ್ ಅವರ ಉದ್ದೇಶಗಳನ್ನು ಈಡೇರಿಸುವ ಗುರಿಯೊಂದಿಗೆ ಡಾ.ಅಂಬರೀಷ್ ಫೌಂಡೇಷನ್ ತನ್ನ ಸೇವೆಯನ್ನು ರಾಜ್ಯಕ್ಕೆ ವಿಸ್ತರಿಸುವ ಮೂಲಕ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸಲಿದೆ ಎಂದು ಮಾಜಿ ಸಂಸದೆ ಸುಮಲತಾ ತಿಳಿಸಿದರು.

ನಗರದ ಕೆ.ವಿ.ಶಂಕರಗೌಡ ಸಭಾಂಗಣದಲ್ಲಿ ಡಾ.ಅಂಬರೀಷ್ ಫೌಂಡೇಷನ್ (ಸಮಾಜಮುಖಿ ಕೈಂಕರ್ಯಗಳ ವೇದಿಕೆ) ಬೆಂಗಳೂರು, ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘ, ಪರಿಸರ ರೂರಲ್ ಡೆವಲಪ್ ಮೆಂಟ್ ಸೊಸೈಟಿ ಮಂಗಲ ಯುವ ಮುನ್ನಡೆ ವತಿಯಿಂದ ಡಾ.ಎಂ.ಎಚ್.ಅಂಬರೀಷ್ ಅವರ 73ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಅಂಬರೀಷ್ ಸೇವಾ ಪ್ರಶಸ್ತಿ, ಪ್ರತಿಭಾ ಪುರಸ್ಕಾರ, ಯುವ ವಿವೇಕ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಸಮಾಜಮುಖಿ ಕೆಲಸಗಳ ಮೂಲಕ ಅಂಬರೀಷ್ ಹುಟ್ಟುಹಬ್ಬ ಆಚರಿಸಲು ಡಾ.ಅಂಬರೀಷ್ ಫೌಂಡೇಷನ್ ಕಳೆದ ಮೂರ್ನಾಲ್ಕು ವರ್ಷಗಳಿಂದ ಜಿಲ್ಲೆಯಲ್ಲಿ ಸ್ಥಳೀಯವಾಗಿ ಸಾಧಕರನ್ನು ಗುರುತಿಸಿ ಅಭಿನಂದಿಸುವ ಕೆಲಸ ಮಾಡುತ್ತಿದೆ. ಅದನ್ನು ರಾಜ್ಯಕ್ಕೆ ವಿಸ್ತರಿಸಿ ಸಮಾಜದಲ್ಲಿರುವ ಬಡವರು, ಬಡ ವಿದ್ಯಾರ್ಥಿಗಳು, ಸಾಧಕ ಮಹಿಳೆಯರು, ಪರಿಸರ, ಕ್ರೀಡೆ, ಕಲೆ ಹೀಗೆ ಹಲವು ಕ್ಷೇತ್ರಗಳಲ್ಲಿ ದುಡಿಯುತ್ತಿರುವವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಾಗುವುದು ಎಂದರು.

ಸಿನಿಮಾದಲ್ಲಿ ಇದ್ದಾಗಲೇ ಅಂಬರೀಷ್ ಕಲಿಯುಗ ಕರ್ಣನಾಗಿದ್ದರು. ರಾಜಕೀಯಕ್ಕೆ ಬಂದ ಮೇಲೆ ಜನರಿಗೆ ಇನ್ನಷ್ಟು ಹತ್ತಿರವಾದರು. ಸಂಸದರ ಅನುದಾನ ಏನು ಎಂಬುದು ಜನರಿಗೆ ಗೊತ್ತಿರಲಿಲ್ಲ. ಅದು ಖರ್ಚಾಗದೆ ವಾಪಸ್ ಹೋಗುತ್ತಿತ್ತು. ಆದರೆ, ಅಂಬರೀಷ್ ಸಂಸದರಾದ ನಂತರ ಪ್ರತಿಯೊಂದು ಪೈಸೆಯನ್ನು ಖರ್ಚು ಮಾಡಿ ಹಳ್ಳಿ ಹಳ್ಳಿಗಳಿಗೂ ಸಮುದಾಯ ಭವನಗಳಿಗೆ ಅನುದಾನ ನೀಡಿ ನೆರವಾಗಿದ್ದಾರೆ. ನಾನು ಹಳ್ಳಿಗಳಿಗೆ ಭೇಟಿ ನೀಡಿದಾಗ ಜನರು ಈಗಲು ಸ್ಮರಿಸುತ್ತಾರೆ ಎಂದರು.

ಅಂಬರೀಷ್ ಸಂಸದರಾಗಿ, ಕೇಂದ್ರ ಮಂತ್ರಿಯಾಗಿ, ಶಾಸಕರಾಗಿ, ಸಚಿವರಾಗಿ ಜನರ ಸೇವೆ ಮಾಡಿದ್ದಾರೆ. ಸಿನಿಮಾದಲ್ಲಿ 40 ರಿಂದ 45 ವರ್ಷ ಕೆಲಸ ಮಾಡಿದರೂ, ರಾಜಕೀಯದಲ್ಲಿದರೂ ಅವರಲ್ಲಿ ಇದ್ದುದ್ದು ಒಂದೇ ಗುಣ ಅದು ಸೇವೆ. ಅವರು ಇರುವರೆಗೂ ಯೋಜನೆ ಮಾಡಿ ಮಾಡುತ್ತಿರಲ್ಲಿಲ್ಲ. ಸಹಜವಾಗಿ ಅನಿಸಿದ್ದನ್ನು ಮಾಡಿಕೊಂಡು ಬರುತ್ತಿದ್ದರು ಎಂದರು.

ಅಂಬರೀಷ್ ಅವರ ಹಲವು ಗುಣಗಳು ನಾನು ಹೆಂಡತಿಯಾಗಿದ್ದರೂ ಗೊತ್ತಿರಲಿಲ್ಲ. ಅವರ ಹತ್ತಿರದಲ್ಲಿದ್ದವರಿಂದ ನೋಡಿ ತಿಳಿದುಕೊಳ್ಳುತ್ತಿದ್ದೇನೆ. ಅಂಬರೀಷ್ ಹೆಂಡತಿಯಾಗಿ, ಜಿಲ್ಲೆಯ ಸೊಸೆಯಾಗಿ, ಸಂಸದೆಯಾಗಿ ಇರುವಷ್ಠು ದಿನ ಒಂದು ಕಳಂಕ, ಕಪ್ಪು ಚುಕ್ಕಿ ಇಲ್ಲದೆ ಕೆಲಸ ಮಾಡಿದ್ದೇನೆ ಎಂಬ ಹೆಮ್ಮೆ ಇದೆ ಎಂದರು.

ನಾನು ಸಂಸದರಾಗಿದ್ದಾಗ ಜಿಲ್ಲೆಗೆ ಅಂತಾರಾಷ್ಟ್ರೀಯ ಕ್ರೀಡಾಂಗಣ ತರಲು ಆಸೆ ಇತ್ತು. ಜಾಗ ಗುರುತಿಸಲಾಗಿತ್ತು. ಆದರೆ, ಸರ್ಕಾರದ ಮಟ್ಟದಲ್ಲಿ ಸರಿಯಾದ ಪ್ರೋತ್ಸಾಹ ಸಿಗದೆ ಆಸೆ ಈಡೇರಲಿಲ್ಲ. ಆದರೆ, ಮುಂದೆ ಆ ಆಸೆ ಈಡೇರುವ ನಿರೀಕ್ಷೆ ಇದೆ ಎಂದರು.

ಇದೇ ವೇಳೆ ಪ್ರೊ.ಜಯಪ್ರಕಾಶ್ ಗೌಡ (ಕನ್ನಡ ನುಡಿ ಸಾಹಿತ್ಯ, ಚಿಂತನೆ -ಸಂಸ್ಕೃತಿ), ಡಾ.ಮನೋಹರ್ (ಪ್ರಖ್ಯಾತ ಸ್ತ್ರೀ ರೋಗ ತಜ್ಞರು), ಸವಿತ (ಅಂತಾರಾಷ್ಟ್ರೀಯ ಮಟ್ಟದ ಪೂಜಾ ಕುಣಿತ ಕಲಾವಿದರು) ಅವರಿಗೆ ಅಂಬರೀಷೇ ಸೇವಾ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಜಿಲ್ಲೆಯ ಕೆ.ಆರ್. ಪೇಟೆ ವಿದ್ಯಾರ್ಥಿನಿ ಧೃತಿ ಜೆ. ಹಾಗೂ ಮದ್ದೂರಿನ ಪುನೀತಾ ಸಿ. ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಪಿಯುಸಿ ಕಲಾ ವಿಭಾಗ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಆದಿಚುಂಚನಗಿರಿಯ ವಿದ್ಯಾರ್ಥಿನಿ ಸೌಮ್ಯ(573), ದ್ವಿತೀಯ ಸ್ಥಾನ ಪಡೆದ ಮದ್ದೂರಿನ ಹಂಸವೇಣಿ ಸಿ.(569), ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪಾಂಡವಪುರ ಮೋನಿಕಾ ಎಸ್ ಕೆ. (586) ದ್ವಿತೀಯ ಸ್ಥಾನ ಪಡೆದ ನಾಗಮಂಗಲ ಬಿಜಿಎಸ್ ನ ವಿದ್ಯಾರ್ಥಿ ಮನೀಸ್ ಗೌಡ.ಎ (585), ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಮಂಡ್ಯದ ವಿದ್ಯಾರ್ಥಿನಿ ಹಿಮಾನಿ. ಎಸ್.ಡಿ.(ಪಡೆದ ಅಂಕ 592) ದ್ವಿತೀಯ ಸ್ಥಾನ ಪಡೆದ ಶ್ರೀರಂಗಪಟ್ಟಣ ಸಂಜನಾ ಗೌಡ (591) ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಪರಿಸರ ಗ್ರಾಮೀಣಾಭಿವೃದ್ಧಿ ಸೊಸೈಟಿ ಮಂಗಲ ವತಿಯಿಂದ ವಿವೇಕ ಪುರಸ್ಕಾರವನ್ನು ನಂಜುಂಡಸ್ವಾಮಿ (ನಾಟಕ ರಚನೆ ನಿರ್ದೇಶನ) ವಿನಯಕುಮಾರ್ (ಯುವ ಉದ್ಯಮಿ) ಬಾಣಸವಾಡಿ ಹರೀಶ್ (ಸಂಘಟನೆ) ಹರ್ಷ( ಯುವಜನ ಸೇವೆ )

ಅಲ್ಲದೇ ಹರ್ಷಿತ -ಎನ್ ಎಸ್ ಎಸ್, ಶಶಾಂತ್ -ಎನ್ ಸಿಸಿ, ಸಾತ್ವಿಕ್ - ಸ್ಕೌಟ್ಸ್ ಮತ್ತು ಗೈಡ್ಸ್ ಪ್ರತಿಭೆಗಳನ್ನು ಗುರುತಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ನಿವೃತ್ತ ಪ್ರಾಂಶುಪಾಲ ಶಂಕರೇಗೌಡ, ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘ ಅಧ್ಯಕ್ಷ ಬೇಲೂರು ಸೋಮಶೇಖರ್, ಪರಿಸರ ರೂರಲ್ ಡೆವೆಲಪ್ ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೇಶ್, ಕಾರ್ಯದರ್ಶಿ ಕೆ.ಪಿ.ಅರುಣ ಕುಮಾರಿ ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ