ಶಿಗ್ಗಾಂವಿ: ಡಾ. ಬಾಬಾಸಾಹೇಬ ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನರಾಮ್ ಅವರು ಈ ದೇಶದ ಎರಡು ಅರಿವಿನ ಕಣ್ಣುಗಳಿದ್ದಂತೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ್ ಹೇಳಿದರು.ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಕೋಶದಿಂದ ಗುರುವಾರ ಏರ್ಪಡಿಸಿದ್ದ ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನರಾಮ್ ರವರ ೧೧೯ನೇ ಮತ್ತು ಭಾರತ ರತ್ನ, ಡಾ. ಬಿ.ಆರ್. ಅಂಬೇಡ್ಕರ್ ೧೩೫ನೇ ಜನ್ಮ ದಿನಾಚರಣೆಯ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಡಾ.ಬಾಬು ಜಗಜೀವನರಾಮ್ ಅವರು ಸಹ ಈ ದೇಶಕ್ಕೆ ವಿಶಿಷ್ಟ ಕೊಡುಗೆ ನೀಡಿ ಸಮಾನತೆಯ ಸದುದ್ದೇಶದ ಸಾಕಾರಕ್ಕೆ ತಮ್ಮ ಬದುಕನ್ನೇ ಮೀಸಲಿಟ್ಟಿದ್ದರು. ಹೀಗಾಗಿ, ಈ ಎರಡು ಮಹಾನ್ ಚೇತನಗಳು ಈ ದೇಶದ ಎರಡು ಅರಿವಿನ ಕಣ್ಣುಗಳಿದ್ದಂತೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಸಂವಿಧಾನ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಹಿರಿಯ ಚಿಂತಕ ಡಾ. ಬಿ.ಎಂ. ಪುಟ್ಟಯ್ಯ ಅವರು, ಬಹಳ ಕ್ಲಿಷ್ಟಕರವಾದ ಸಮಸ್ಯೆಗಳ ಸುಳಿಗಳಲ್ಲಿ ಸಿಲುಕಿದ್ದ ಈ ದೇಶದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗೌರವದ ಬದುಕನ್ನು ಕಲ್ಪಿಸುವ ನಿಟ್ಟಿನಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ನೀಡಿದ ಸಂವಿಧಾನ ಎಲ್ಲರ ಪಾಲಿನ ಧರ್ಮ ಗ್ರಂಥವಿದ್ದಂತೆ ಎಂದರು.ಸ್ವಾತಂತ್ರ‍್ಯ, ಸಮಾನತೆ, ಸಹಬಾಳ್ವೆ, ಸ್ವಾಭಿಮಾನದ ಬದುಕನ್ನು ನಮ್ಮ ಸಂವಿಧಾನ ಖಾತ್ರಿ ಪಡಿಸುತ್ತದೆ. ಆದರೆ, ಸಂವಿಧಾನದ ಈ ಆಶಯಗಳನ್ನು ದೇಶವನ್ನಾಳಿದ ಸರಕಾರಗಳು ಅನುಷ್ಠಾನಗೊಳಿಸಲೇ ಇಲ್ಲ. ಹೀಗಾಗಿ, ಇಂದಿಗೂ ಭಾರತದಲ್ಲಿ ಜಾತಿ, ಲಿಂಗ ತಾರತಮ್ಯ ತಾಂಡವಾಡುತ್ತಿದೆ. ಆರ್ಥಿಕ ಅಸಮಾನತೆ, ಶೋಷಣೆ ನಿರಂತರವಾಗಿ ಮುಂದುವರಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಂವಿಧಾನದ ಆಶಯಗಳನ್ನು ಯಶಸ್ವಿಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವ ಡಾ.ಕೆ. ಶಿವಶಂಕರ, ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಡಾ.ಗಿರೇಗೌಡ ಅರಳಿಹಳ್ಳಿ, ಹಿರಿಯ ಸಂಶೋಧನಾಧಿಕಾರಿ ಡಾ.ಕೆ. ಪ್ರೇಮಕುಮಾರ, ಸಹಾಯಕ ಪ್ರಾಧ್ಯಾಪಕ ಡಾ. ವೆಂಕನಗೌಡ ಪಾಟೀಲ, ಡಾ. ಬಸವರಾಜ ಸಿ., ಡಾ. ಅರುಣ ಅಂಗಡಿ, ಡಾ. ಚಂದ್ರಪ್ಪ ಸೊಬಟಿ, ಸಹಾಯಕ ಗ್ರಂಥಪಾಲಕ ಶಂಕರಗೌಡ ಮಾಲಿಪಾಟೀಲ ಸೇರಿದಂತೆವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು. ಡಾ. ಮಲ್ಲಿಕಾರ್ಜುನ ಮಾನ್ಪಡೆ ನಿರೂಪಿಸಿದರು. ಸಹಾಯಕ ಕುಲಸಚಿವ ಶಹಜಾನ ಮುದಕವಿ ಸ್ವಾಗತಿಸಿದರು.