ನಾವೆಲ್ಲ ಒಂದೇ ಸಿದ್ಧಾಂತ ನೀಡಿದ್ದ ಡಾ.ಅಂಬೇಡ್ಕರ್‌

KannadaprabhaNewsNetwork |  
Published : Apr 16, 2025, 12:34 AM IST
ಬೆಳಗಾವಿಯಲ್ಲಿ ಡಾ.ಬಿ.ಆರ್‌. ಅಂಬೇಡ್ಕರ ಜಯಂತಿ ಕಾರ್ಯಕ್ರಮವನ್ನು ಮೇಯರ್‌ ಮಂಗೇಶ ಪವಾರ ಉದ್ಘಾಟಿಸಿದರು. | Kannada Prabha

ಸಾರಾಂಶ

ನಮ್ಮ‌ ದೇಶದ‌ ಮೂಲ ತತ್ವ, ನಮ್ಮ ಜೀವನದ ಮೂಲ‌ ಮೌಲ್ಯ, ವಿಭಿನ್ನತೆಯಲ್ಲಿ‌ ಏಕತೆ ಮೂಲಕ‌ ನಾವೆಲ್ಲರೂ ಒಂದೇ ಎಂಬ ಮೂಲ‌ ಸಿದ್ಧಾಂತವನ್ನು ನೀಡಿದ್ದು‌ ಡಾ.ಬಿ.ಆರ್.ಅಂಬೇಡ್ಕರ ಅವರು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ನಮ್ಮ‌ ದೇಶದ‌ ಮೂಲ ತತ್ವ, ನಮ್ಮ ಜೀವನದ ಮೂಲ‌ ಮೌಲ್ಯ, ವಿಭಿನ್ನತೆಯಲ್ಲಿ‌ ಏಕತೆ ಮೂಲಕ‌ ನಾವೆಲ್ಲರೂ ಒಂದೇ ಎಂಬ ಮೂಲ‌ ಸಿದ್ಧಾಂತವನ್ನು ನೀಡಿದ್ದು‌ ಡಾ.ಬಿ.ಆರ್.ಅಂಬೇಡ್ಕರ ಅವರು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.

ನಗರದ ಡಾ.ಬಾಬಾಸಾಹೇಬ ಅಂಬೇಡ್ಕರ ಉದ್ಯಾನದಲ್ಲಿ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ‌ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಜರುಗಿದ ಡಾ.ಬಾಬಾಸಾಹೇಬ ಅಂಬೇಡ್ಕರ ಅವರ 134ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು‌.ಬಾಬಾಸಾಹೇಬರ ಮಹಾನ್‌ ವಿಚಾರಧಾರೆಗಳನ್ನು ಶಾಯರಿ‌ ಮೂಲಕ ವ್ಯಕ್ತಪಡಿಸಿದ ಅವರು, ಕೇವಲ‌ ಒಬ್ಬ ವ್ಯಕ್ತಿಯಾಗಿರದೇ ಒಂದು ದೊಡ್ಡ ಶಕ್ತಿ ಎಂಬ ವಿಚಾರವನ್ನು‌ ನಾವೆಲ್ಲರೂ ಮನಗಾಣಬೇಕು. ಅವರನ್ನು ಕೇವಲ‌ ಒಂದೇ ಜಾತಿಗೆ ಸೀಮಿತಗೊಳಿಸಬಾರದು. ಡಾ.ಬಿ.ಆರ್.ಅಂಬೇಡ್ಕರ‌ ಅವರು ಭಾರತದ ಗುರುತಾಗಿದ್ದು ನಾವೆಲ್ಲರೂ ಒಂದೇ ಎಂಬ ಮನೋಭಾವನೆ‌ ಹೊಂದಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು‌ ನುಡಿದರು.ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ವಿಚಾರವಾದಿ ಭೀಮಪುತ್ರ‌ ಸಂತೋಷ, ಡಾ.ಬಿ.ಆರ್.ಅಂಬೇಡ್ಕರ್‌ ಅವರ‌ ಜೀವನ ಸಾಧನೆಗಳ‌ ಕುರಿತು ಮಾತನಾಡಿದರು. ಡಾ.ಅಂಬೇಡ್ಕರ ಅವರು ಈ ದೇಶದ ನಿಜವಾದ ಅಗ್ರಗಣ್ಯ ನಾಯಕರು. ಅಂಬೇಡ್ಕರ ಅವರು ಪುತ್ಥಳಿಯಲ್ಲಿ ಇಲ್ಲ‌. ಅವರು ಪುಸ್ತಕದಲ್ಲಿದ್ದು ಅವರನ್ನು ಅರಿತುಕೊಳ್ಳಲು ಪ್ರತಿಯೊಬ್ಬರು ಸಂವಿಧಾನ ಓದಬೇಕು ಎಂದರು.ಬಾಬಾಸಾಹೇಬ ಅವರು ಈ ದೇಶದ ಹೃದಯವಿದ್ದಂತೆ. ಅಂಬೇಡ್ಕರ ಅವರನ್ನು ಅಸ್ಪೃಶ್ಯರ‌ ರೀತಿ ಕಾಣಲಾಗುತ್ತಿದೆ. ಆದರೆ ಇಡೀ ಜಗತ್ತಿನಲ್ಲಿ‌ ಅವರಲ್ಲಿನ ಜ್ಞಾನವನ್ನು ತಲುಪಲು ಯಾರಿಂದಲೂ ಸಾಧ್ಯವಾಗಿಲ್ಲ. ಬಾಬಾ ಸಾಹೇಬರನ್ನು ಆಚರಿಸದೆ ಅವರನ್ನು ಅನುಸರಿಸಬೇಕು‌. ಇದರಿಂದಾಗಿ ಸಮಾಜವನ್ನು ಸಮ‌ ಸಮಾಜ‌ ಮಾಡಲು ಸಾಧ್ಯವಾಗುತ್ತದೆ. ಶತ್ರುಗಳು ಓದಿಗೆ ಮಾತ್ರ ಹೆದರುತ್ತಾರೆ ಎಂದು ತಿಳಿಸಿದರು.ಎಂದಿಗೂ‌ ಮುಳುಗದ ಸೂರ್ಯ ಬಾಬಾಸಾಹೇಬರು. ಅವರು ಸಂವಿಧಾನ ಪೀಠಿಕೆ ಬರೆಯುವಾಗ ಭಾರತದ ನಾಗರಿಕರಾದ ನಾವು ಎಂಬ ಪದವನ್ನು‌ ಬಳಸುವ ಮೂಲಕ ದೇಶದ ಐಕ್ಯತೆಗೆ ಪ್ರಾಮುಖ್ಯತೆ ನೀಡಿದರು. ಬಾಬಾಸಾಹೇಬ ಅಂಬೇಡ್ಕರ ಅವರ ವಾಹನ ಕೇವಲ ಬಟ್ಟೆ ಅಂಗಡಿ ಹಾಗೂ ಗ್ರಂಥಾಲಯದ ಹತ್ತಿರ ಮಾತ್ರ ನಿಲುಗಡೆಯಾಗುತ್ತಿತ್ತು. ಇದರಿಂದಾಗಿ ಜನ ಪ್ರೇರೇಪಣೆಗೊಂಡು ಒಳ್ಳೆ ಬಟ್ಟೆ ಧರಿಸಲು ಹಾಗೂ ಓದಿನ ಕಡೆ ಹೆಚ್ಚಿನ ಗಮನ ನೀಡಲಿ ಎಂಬ ಕಾರಣವಿತ್ತು ಎಂದು ತಿಳಿಸಿದರು.ಬಾಬಾಸಾಹೇಬರಿಗೆ ಹಣ ಮತ್ತು ಸಂಪತ್ತು ಮುಖ್ಯವಾಗಿರಲಿಲ್ಲ. ಅವರಿಗೆ ದೇಶದ ಜನರ ಭವಿಷ್ಯವೇ ಪ್ರಮುಖವಾಗಿತ್ತು. ಆದ್ದರಿಂದ ಬಾಬಾಸಾಹೇಬರನ್ನು ಕೇವಲ ಜಯಂತಿಗೆ ಸೀಮಿತಗೊಳಿಸದೆ ಅವರನ್ನು ಹಾಗೂ ಅವರ ಸಿದ್ಧಾಂತಗಳನ್ನು ಅನುಸರಿಸುವ ಮೂಲಕ‌ ಸದೃಢ ರಾಷ್ಟ್ರ‌ ನಿರ್ಮಾಣಕ್ಕೆ ಮುಂದಾಗುವಂತೆ ಕರೆ ನೀಡಿದರು.ಮೇಯರ್‌ ಮಂಗೇಶ ಪವಾರ, ಉಪಮೇಯರ್‌ ವಾಣಿ ಜೋಶಿ, ನಗರ ಸೇವಕರಾದ ಶ್ರೇಯಸ್, ಜಯತೀರ್ಥ, ಸಿದ್ದರಾಯ ಮೇತ್ರಿ, ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ ಶಿಂಧೆ, ಅಪರ‌ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ, ಗಣ್ಯರುಗಳಾದ ಬಸವರಾಜ, ಮಲ್ಲೇಶ ಚೌಗಲೆ, ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಂಘಟನೆಯ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಸಮಾಜ‌ ಕಲ್ಯಾಣ ಇಲಾಖೆ ಉಪನಿರ್ದೆಶಕ ರಾಮನಗೌಡ ಕನ್ನೋಳಿ ಸ್ವಾಗತಿಸಿದರು.ಹನುಮಂತ‌‌ ಪೂಜಾರ ಅವರು ಸಂವಿಧಾನದ ಪ್ರಸ್ತಾವನೆ ವಾಚಿಸಿದರು. ಬೌದ್ಧ ಮಹಾಸಭಾ ಅಧ್ಯಕ್ಷ ಯಮನಪ್ಪ‌ ಗಡಿನಾಯಕ ಅವರು ಬೌದ್ಧ ಮಹಾಸಭಾದ ಕಾರ್ಯಕ್ರಮಗಳ‌ ಕುರಿತು ಮಾಹಿತಿ ನೀಡಿದರು. ವಿಧ್ಯಾರ್ಥಿಯಾದ ಧನರಾಜ ತಳವಾರ ಡಾ.ಬಿ.ಆರ್.ಅಂಬೇಡ್ಕರ ಅವರ ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕಾರಿಗೆ ಸನ್ಮಾನ‌, ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್‌ಗಳನ್ನು ಹಾಗೂ ಪೌರಕಾರ್ಮಿಕರಿಗೆ ಸುರಕ್ಷಾ ಕಿಟ್ ಗಳನ್ನು ಗಣ್ಯರುಗಳಿಂದ‌ ವಿತರಿಸಲಾಯಿತು. ಬಳಿಕ ಅಂಬೇಡ್ಕರ್‌ ರೂಪಕ ವಾಹನಗಳ ಅದ್ಧೂರಿ ಮೆರವಣಿಗೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ