ಹೊಸಪೇಟೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ, ಬಾಬು ಜಗಜೀವನ ರಾಂ ಅವರ 119ನೇ ಜಯಂತಿ ನಡೆಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಹೊಸಪೇಟೆ: ಬದುಕಿನ ಹಾದಿಯಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ಶಿಕ್ಷಣದ ಮೇಲಿನ ಆಸಕ್ತಿ ಮತ್ತು ನಿರಂತರ ಪರಿಶ್ರಮವಿದ್ದರೆ ಯಶಸ್ಸು ಸಿಗಲಿದೆ. ಇದಕ್ಕೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನವೇ ನಮಗೆ ಬಹುದೊಡ್ಡ ಸ್ಫೂರ್ತಿ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ, ಬಾಬು ಜಗಜೀವನ ರಾಂ ಅವರ 119ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಂಬೇಡ್ಕರ್ ಅವರ ಜೀವನ ಬಾಲ್ಯದ ಕಷ್ಟಗಳನ್ನು ಸ್ಮರಿಸಿದ ಜಿಲ್ಲಾಧಿಕಾರಿ, ಅಂಬೇಡ್ಕರ್ ನೀಡಿದ ಸಂವಿಧಾನದಿಂದಾಗಿ ದೇಶದ ಪ್ರತಿಯೊಬ್ಬ ಪ್ರಜೆಯೂ ಘನತೆಯಿಂದ ಬದುಕಲು ಸಾಧ್ಯವಾಗಿದೆ. ಬಾಬು ಜಗಜೀವನ ರಾಮ್ ಅವರು ದೇಶದ ಉಪಪ್ರಧಾನಿಯಾಗಿ ಹಾಗೂ ಕೃಷಿ ಸಚಿವರಾಗಿ ಮಾಡಿದ ಸುಧಾರಣೆಗಳು ಭಾರತದ ಆಹಾರ ಭದ್ರತೆಗೆ ಭದ್ರ ಬುನಾದಿಯಾಗಿವೆ ಎಂದು ಹೇಳಿದರು. ಶಾಲೆಗಳಲ್ಲಿ ಅಸಮಾನತೆ ಮತ್ತು ಅನೇಕ ಅಡೆತಡೆಗಳನ್ನು ಎದುರಿಸಿದರೂ ಅಂಬೇಡ್ಕರ್ ಶಿಕ್ಷಣವನ್ನು ಎಂದಿಗೂ ಕೈಬಿಡಲಿಲ್ಲ. ಅವರ ಪ್ರಕಾರ ಶಿಕ್ಷಣವೇ ಸ್ವಾತಂತ್ರ್ಯದ ಕೀಲಿ ಕೈ. ಈ ಮಂತ್ರವು ಇಂದಿನ ಪ್ರತಿಯೊಬ್ಬ ವಿದ್ಯಾರ್ಥಿಗೂ ದಾರಿದೀಪವಾಗಬೇಕು. ಅದರಲ್ಲೂ ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಯುವಕರಿಗೆ ಅಂಬೇಡ್ಕರ್ ಅವರ ಸಾಧನೆ ಅತಿದೊಡ್ಡ ಪ್ರೇರಣೆಯಾಗಿದೆ. ನಮ್ಮ ಹಿನ್ನೆಲೆ ನಮ್ಮ ಭವಿಷ್ಯವನ್ನು ನಿರ್ಧರಿಸುವುದಿಲ್ಲ, ಬದಲಿಗೆ ನಾವು ಪಡೆಯುವ ಶಿಕ್ಷಣ ನಮ್ಮನ್ನು ರೂಪಿಸುತ್ತದೆ. ಜ್ಞಾನದಿಂದ ಮಾತ್ರ ಸ್ವಾಭಿಮಾನ ಮತ್ತು ಗೌರವ ಲಭಿಸಲು ಸಾಧ್ಯ ಎಂದು ಅವರು ಹೇಳಿದರು.
ವಕೀಲ ಸುಧೀರ್ ಕುಮಾರ್ ಮುರಳ್ಳಿ ಮಾತನಾಡಿ, ಭಾರತದ ಶೋಷಿತ ವರ್ಗಗಳಿಗೆ ಶಿಕ್ಷಣ, ಅಧಿಕಾರ ಮತ್ತು ಸಮಾನತೆಯ ಹಕ್ಕನ್ನು ತಂದುಕೊಡುವಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಅವರ ಪಾತ್ರ ಅನನ್ಯವಾದುದು ಎಂದರು.
ಜಿಪಂ ಸಿಇಒ ನೊಂಗ್ಜಾಯ್ ಮಹ್ಮದ್ ಅಲಿ ಅಕ್ರಮ್ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ, ಹೂಡಾ ಅಧ್ಯಕ್ಷ ಎಚ್.ಎನ್.ಎಫ್. ಇಮಾಮ್ ನಿಯಾಜಿ, ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಮನೋಹರ್, ಅಂಬೇಡ್ಕರ್ ಸಂಘದ ಜಿಲ್ಲಾಧ್ಯಕ್ಷ ಕೆ.ಪಿ. ಉಮಾಪತಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಗೌರವ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಯಲ್ಲಪ್ಪ ಬಂಡಾರದರ್ ಸಂವಿಧಾನ ಪೀಠಿಕೆ ಬೋಧಿಸಿದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ವೈ.ಎ. ಕಾಳೆ ಸ್ವಾಗತಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.