ಮಾನವತಾವಾದಿ ಲೇಖಕರಾಗಿದ್ದ ಡಾ. ಬೆಟಗೇರಿ ಕೃಷ್ಣ ಶರ್ಮ: ಪ್ರೊ. ರಾಘವೇಂದ್ರ ಪಾಟೀಲ

KannadaprabhaNewsNetwork |  
Published : Oct 16, 2025, 02:01 AM IST
ಎಚ್15.10-ಡಿಎನ್‌ಡಿ2: ಡಾ. ಬೆಟಗೇರಿ ಕೃಷ್ಣ ಶರ್ಮ ಅವರ ಕಥಾ ಪ್ರಪಂಚ ಸರ್ಟಿಫಿಕೇಟ್ ಕೋರ್ಸ್ ಮತ್ತು ಆನಂದಕAದ ಕಾವ್ಯಗಾಯನ ಕಾರ್ಯಕ್ರಮ | Kannada Prabha

ಸಾರಾಂಶ

ಬಾಲ್ಯದಲ್ಲಿಯೇ ತಂದೆ ಕಳೆದುಕೊಂಡ ಬೆಟಗೇರಿ ಕೃಷ್ಣ ಶರ್ಮ ಅವರನ್ನು ಅವರ ತಾಯಿ ಮತ್ತು ಸಹೋದರಿಯರು ಬೆಳೆಸಿದರು. ಹೀಗಾಗಿ ಮಾತೃತ್ವ ಅವರ ಸಾಹಿತ್ಯದ ಜೀವಾಳವಾಗಿದೆ.

ಕನ್ನಡಪ್ರಭ ವಾರ್ತೆ ದಾಂಡೇಲಿ

ಬಾಲ್ಯದಲ್ಲಿಯೇ ತಂದೆ ಕಳೆದುಕೊಂಡ ಬೆಟಗೇರಿ ಕೃಷ್ಣ ಶರ್ಮ ಅವರನ್ನು ಅವರ ತಾಯಿ ಮತ್ತು ಸಹೋದರಿಯರು ಬೆಳೆಸಿದರು. ಹೀಗಾಗಿ ಮಾತೃತ್ವ ಅವರ ಸಾಹಿತ್ಯದ ಜೀವಾಳವಾಗಿದೆ. ಗಾಂಧೀಜಿ ಅವರಿಂದ ಪ್ರಭಾವಿತರಾಗಿದ್ದು, ಉದಾರವಾದಿ ಮಾನವತಾವಾದದ ಪ್ರತಿಪಾದಕರಾಗಿದ್ದರು. ಇಪ್ಪತ್ತನೇ ಶತಮಾನದ ಆರಂಭದಲ್ಲಿ ಕಾವ್ಯ ಸಣ್ಣ ಕಥೆ, ಕಾದಂಬರಿ, ಸಂಶೋಧನೆ ಹಾಗೂ ಜಾನಪದ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿ ಕರ್ನಾಟಕ ಸಂಸ್ಕೃತಿಯ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ ಎಂದು ಧಾರವಾಡದ ಹಿರಿಯ ಲೇಖಕ ಪ್ರೊ. ರಾಘವೇಂದ್ರ ಪಾಟೀಲ ಹೇಳಿದರು.

ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಮತ್ತು ಡಾ. ಬೆಟಗೇರಿ ಕೃಷ್ಣ ಶರ್ಮ ಟ್ರಸ್ಟ್ ಬೆಳಗಾವಿ, ಇವುಗಳ ಸಹಯೋಗದಲ್ಲಿ ಜರುಗಿದ ಡಾ. ಬೆಟಗೇರಿ ಕೃಷ್ಣ ಶರ್ಮ ಅವರ ಕಥಾ ಪ್ರಪಂಚ ಸರ್ಟಿಫಿಕೇಟ್ ಕೋರ್ಸ್ ಮತ್ತು ಆನಂದಕಂದ ಕಾವ್ಯಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಬೆಟಗೇರಿ ಕೃಷ್ಣ ಶರ್ಮ ಅವರು ತಮ್ಮ ಕೃತಿಗಳಲ್ಲಿ ಸಾಮಾಜಿಕ ಬದುಕು ಮತ್ತು ಕೌಟುಂಬಿಕ ಬದುಕುಗಳ ನಡುವಿನ ಅಂತರ್ ಸಂಬಂಧವನ್ನು ಮಾನವತಾವಾದಿ ನೆಲೆಯಿಂದ ನಿರ್ವಚಿಸಿದ್ದಾರೆ ಎಂದರು.

ಡಾ. ಬೆಟಗೇರಿ ಕೃಷ್ಣ ಶರ್ಮ ಟ್ರಸ್ಟ್ ಅಧ್ಯಕ್ಷೆ ಡಾ. ವಿನಯಾ ಒಕ್ಕುಂದ ಮಾತನಾಡಿ, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅವಗಣನೆಗೆ ಈಡಾದ ಬಹುದೊಡ್ಡ ಲೇಖಕ ಡಾ. ಬೆಟಗೇರಿ ಕೃಷ್ಣ ಶರ್ಮ ಅವರ ಸಾಹಿತ್ಯ ಕೃತಿ ಹಾಗೂ ಚಿಂತನೆಗಳನ್ನು ಯುವ ಜನಾಂಗಕ್ಕೆ ತಲುಪಿಸುವ ಕಾರ್ಯವನ್ನು ಡಾ. ಬೆಟಗೇರಿ ಕೃಷ್ಣ ಶರ್ಮ ಟ್ರಸ್ಟ್ ಕೈಗೊಳ್ಳುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎಂ.ಡಿ. ಒಕ್ಕುಂದ, ಪಶ್ಚಿಮ ಮುಖಿ ಹಾಗೂ ಸಂಸ್ಕೃತ ಮುಖಿ ವಿವೇಕದಿಂದ ಬೆಳೆದ ಕನ್ನಡ ಸಾಹಿತ್ಯ ವಿಮರ್ಶೆ ಅಪ್ಪಟ ದೇಶಿ ಅನುಭವ ಹಾಗೂ ಸಂವೇದನೆಯ ಡಾ.ಬೆಟಗೇರಿ ಕೃಷ್ಣ ಶರ್ಮ ಅವರ ಕನ್ನಡ ಸಾಹಿತ್ಯವನ್ನು ಮೌಲ್ಯಮಾಪನ ಮಾಡುವಲ್ಲಿ ಸೋತಿದೆ. ಅವರು ಉದಾರವಾದ ಮತ್ತು ಪ್ರಗತಿಶೀಲ ಚಿಂತನೆಗಳ ಮಧ್ಯದ ಮತ್ತೊಂದು ಮಾರ್ಗವನ್ನೆ ಕಂಡುಕೊಂಡಿದ್ದರು ಎಂದರು.

ಆನಂದಕಂದ ಕಲಾ ಬಳಗ ಧಾರವಾಡದ ರಾಜು ಕುಲಕರ್ಣಿ ಹಾಗೂ ತಂಡ ಆನಂದಕಂದರ ಪ್ರಸಿದ್ಧ ಗೀತೆ ಹಾಡಿದರು.

ಆರಂಭದಲ್ಲಿ ವರ್ಷಾ ಕೋಲೆ ಆನಂದಕಂದರ ಭಾವಗೀತೆ ಹಾಡಿದಳು. ಪದ್ಮಾವತಿ ಅನಸ್ಕರ ಸ್ವಾಗತಿಸಿದರು. ಶಾರದಾ ಭೋವಿ ಪರಿಚಯಿಸಿದರು. ಡಾ. ಸುರೇಶ ವಾಲಿಕಾರ ಕೊನೆಯಲ್ಲಿ ವಂದಿಸಿದರು. ಉಮೇಶಗೌಡ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ನಿಶಾತ್ ಶರೀಫ್, ಗೀತಾ ಕೋಟೆನ್ನವರ ಮತ್ತು ಡಾ. ಚಂದ್ರಶೇಖರ ಲಮಾಣಿ ಮೊದಲಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆಶಿ ಸಿಎಂ ಆದರೆ ನನಗೆ ಸಚಿವ ಸ್ಥಾನವೇ ಬೇಡ : ರಾಜಣ್ಣ
ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌