ಆಳ್ವಾಸ್‌ ನುಡಿಸಿರಿ, ಮಂಗಳೂರು ವಿವಿ, ಲಿಟ್‌ಫೆಸ್ಟ್‌, ಕಲ್ಲಡ್ಕ ವಿದ್ಯಾಕೇಂದ್ರಕ್ಕೆ ಆಗಮಿಸಿದ್ದ ಡಾ.ಭೈರಪ್ಪ

KannadaprabhaNewsNetwork |  
Published : Sep 25, 2025, 01:02 AM IST
ಎಸ್‌.ಎಲ್‌.ಭೈರಪ್ಪಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್‌ ಪ್ರದಾನ  | Kannada Prabha

ಸಾರಾಂಶ

ಸರಸ್ವತಿ ಸಂಮಾನ್‌ ಪಡೆದ ಹಿರಿಯ ಸಾಹಿತಿ, ಕಾದಂಬರಿಕಾರ ಡಾ.ಎಸ್‌.ಎಲ್‌. ಭೈರಪ್ಪ ಅ‍ವರಿಗೂ ಮಂಗಳೂರಿಗೂ ಸಾಹಿತ್ಯ ಉತ್ಸವದ ಅವಿನಾಭಾವ ನಂಟು ಇದೆ.

ಮಂಗಳೂರು: ಪದ್ಮಭೂಷಣ ಪುರಸ್ಕೃತ, ಸರಸ್ವತಿ ಸಂಮಾನ್‌ ಪಡೆದ ಹಿರಿಯ ಸಾಹಿತಿ, ಕಾದಂಬರಿಕಾರ ಡಾ.ಎಸ್‌.ಎಲ್‌. ಭೈರಪ್ಪ ಅ‍ವರಿಗೂ ಮಂಗಳೂರಿಗೂ ಸಾಹಿತ್ಯ ಉತ್ಸವದ ಅವಿನಾಭಾವ ನಂಟು ಇದೆ.

2005ರಲ್ಲಿ ಮೂಡುಬಿದಿರೆಯ ಡಾ.ಮೋಹನ ಆಳ್ವರ ನೇತೃತ್ವದಲ್ಲಿ ಆಳ್ವಾಸ್‌ ಕ್ಯಾಂಪಸ್‌ನಲ್ಲಿ ನಡೆದ ಎರಡನೇ ನುಡಿಸಿರಿ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಡಾ.ಎಸ್‌.ಎಲ್‌.ಭೈರಪ್ಪ ವಹಿಸಿದ್ದರು. ೨೦೧೬ರಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ೩೪ನೇ ವಾರ್ಷಿಕ ಘಟಿಕೋತ್ಸವದಲ್ಲಿ ಭೈರಪ್ಪರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನಿಸಲಾಗಿತ್ತು. ಬಳಿಕ 2018ರಲ್ಲಿ ಮಂಗಳೂರಿನಲ್ಲಿ ಆರಂಭವಾದ ಭಾರತ್‌ ಫೌಂಡೇಷನ್‌ ಆಯೋಜನೆಯ ಮೊದಲ ಲಿಟ್‌ಫೆಸ್ಟ್‌ನಲ್ಲಿ ಗೌರವ ಸನ್ಮಾನ ಸ್ವೀಕರಿಸಿದ್ದರು.

ನಂತರ 2024ರಲ್ಲಿ ನಡೆದ ಲಿಟ್‌ಫೆಸ್ಟ್‌ನ್ನು ಡಾ.ಭೈರಪ್ಪ ಅವರೇ ಉದ್ಘಾಟಿಸಿದ್ದರು. ಈ ಸಂದರ್ಭ ಮಾತನಾಡಿದ ಅವರು, ‘ನನ್ನನ್ನು ಮಂಗಳೂರು ಲಿಟ್ ಫೆಸ್ಟ್‌ಗೆ ಆಹ್ವಾನಿಸಿದ ವೇಳೆ, ಸರ್ ನೇರವಾಗಿ ಮಾತನಾಡಿದರೆ ಎಲ್ಲೆಲ್ಲೊ ಹೋಗುವ ಸಾಧ್ಯತೆಯಿದೆ. ಅದಕ್ಕೆ ನಿಮ್ಮ ಭಾಷಣ ಬರೆದುಕೊಂಡು ಬಂದು ಓದಿ ಅಂತ ಹೇಳಿದ್ದರು. ಹಾಗಾಗಿ ನಾನು ಈಗ ಬರೆದುಕೊಂಡು ಬಂದ ಭಾಷಣ ಓದುತ್ತೇನೆ ಎಂದು ಹೇಳುವ ಮೂಲಕ ಮಾತು ಆರಂಭಿಸಿದ್ದರು.ಕರಾವಳಿ ಬಗ್ಗೆ ಮೆಚ್ಚುಗೆ:

ಶಿಕ್ಷಣ ಕ್ಷೇತ್ರ, ವೈದ್ಯಕೀಯ ಕ್ಷೇತ್ರದಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಇಡೀ ದೇಶಕ್ಕೆ ಮಾದರಿಯಾಗಿದೆ. ಈ ಭೂಮಿ ಕನ್ನಡ ನಾಡಿಗೆ ಅನೇಕ ವೈದ್ಯರು, ಶಿಕ್ಷಕರು ಸೇರಿದಂತೆ ಕೋಟ ಶಿವರಾಮ ಕಾರಂತ, ರಾಷ್ಟ್ರಕವಿ ಗೋವಿಂದ ಪೈ, ಪಂಜೆ ಮಂಗೇಶರಾಯರು, ಸೇಡಿಯಾಪು, ವ್ಯಾಸರಾಯ ಬಲ್ಲಾಳರಂತಹ ಹೆಸರಾಂತ ಸಾಹಿತಿಗಳನ್ನು ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದೇ ಅವರ ಕೊನೆಯ ಮಂಗಳೂರು ಭೇಟಿ ಆಗಿತ್ತು. ಎರಡು ಬಾರಿಯೂ ಲಿಟ್‌ಫೆಸ್ಟ್‌ನಲ್ಲಿ ಎರಡು ದಿನಗಳ ಕಾಲ ವಿವಿಧ ಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದರು.ಸನ್ಮಾನದ ಮೊತ್ತ ಶಾಲೆಗೆ ದೇಣಿಗೆ: ಲಿಟ್‌ಫೆಸ್ಟ್‌ಗೆ ಎರಡು ಬಾರಿ ಮಂಗಳೂರಿಗೆ ಆಗಮಿಸಿದಾಗಲೂ ಆರ್‌ಎಸ್‌ಎಸ್‌ ಮುಖಂಡ ಡಾ.ಪ್ರಭಾಕರ ಭಟ್‌ ನಡೆಸುತ್ತಿರುವ ಕಲ್ಲಡ್ಕ ಶ್ರೀರಾಮವಿದ್ಯಾಕೇಂದ್ರಕ್ಕೆ ಭೇಟಿ ನೀಡಿದ್ದರು. ಮೊದಲ ಬಾರಿ ಮಂಗಳೂರು ಲಿಟ್‌ಫೆಸ್ಟ್‌ಗೆ ಆಗಮಿಸಿದಾಗ ಉದ್ಘಾಟನೆಗೂ ಮುನ್ನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಶಿಕ್ಷಣ ವ್ಯವಸ್ಥೆಗೆ ಮಾರುಹೋಗಿದ್ದರು. ಲಿಟ್‌ಫೆಸ್ಟ್‌ನಲ್ಲಿ ಗೌರವ ಸನ್ಮಾನ ಸ್ವೀಕರಿಸಿದಾಗ ನೀಡಿದ್ದ ಗೌರವಧನ ಮೊತ್ತವನ್ನು ಹಾಗೆಯೇ ಕಲ್ಲಡ್ಕ ಶ್ರೀರಾಮ ಕೇಂದ್ರಕ್ಕೆ ಶಿಕ್ಷಣಕ್ಕೆ ವಿನಿಯೋಗಿಸಲು ನೀಡುತ್ತಿರುವುದಾಗಿ ಘೋಷಿಸಿದ್ದರು. ಎರಡನೇ ಬಾರಿ ಲಿಟ್‌ಫೆಸ್ಟ್‌ಗೆ ಬಂದಿದ್ದಾಗಲೂ ಡಾ.ಭೈರಪ್ಪ ಅವರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡುವುದನ್ನು ತಪ್ಪಿಸಿಕೊಳ್ಳಲಿಲ್ಲ. ಸಂಜೆ ಉಡುಪಿ ಜಿಲ್ಲೆಯಲ್ಲಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತರ ಮ್ಯೂಸಿಯಂಗೆ ಭೇಟಿ ನೀಡಿದ್ದರು.

ಗಣ್ಯರ ಸಂತಾಪ: ಡಾ.ಎಸ್‌.ಎಲ್‌.ಭೈರಪ್ಪ ನಿಧನಕ್ಕೆ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಂ.ಪಿ.ಶ್ರೀನಾಥ್‌ , ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲ್‌, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ