ಕನ್ನಡಪ್ರಭ ವಾರ್ತೆ ಮೈಸೂರು
ಶ್ರೀ ನಟರಾಜ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಕಲಾಕೂಟ, ಮೈಸೂರು ಆರ್ಟ್ ಗ್ಯಾಲರಿ ಸಂಯುಕ್ತವಾಗಿ ಶ್ರೀ ನಟರಾಜ ಸಭಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಹಿರಿಯ ಕಲಾವಿದ ಎಲ್. ಶಿವಲಿಂಗಪ್ಪ ಅವರ ವಚನಾಧಾರಿತ ಕಲಾಕೃತಿಗಳನ್ನು ಧಾರವಾಡದ ಕರ್ನಾಟಕ ವಿವಿಯ ಶ್ರೀ ಬಸವೇಶ್ವರ ಪೀಠದ ಸಂಯೋಜಕ ಡಾ.ಸಿ.ಎಂ. ಕುಂದಗೋಳ ಅವರಿಗೆ ಹಸ್ತಾಂತರಿಸಿ ಅವರು ಮಾತನಾಡಿ, ದೈಹಿಕ, ಮಾನಸಿಕ, ಹೃದಯ ಸಮನ್ವಯತೆಯಿಂದ ಚಿತ್ರರಚನೆ ಸಾಧ್ಯ ಎಂದರು.
ಕಲಾಕೃತಿಗಳ ರಚನೆ, ಸಾಹಿತ್ಯ, ಸಂಶೋದನೆಗೆ ಸೃಜನಶೀಲತೆ ಮುಖ್ಯ. ಗ್ರಹಿಸಿ, ಆಸ್ವಾದಿಸಿ ನೋಡುವ ಕಲೆ ಅಪರೂಪದ ಸಾಧನ. ಸಾವಿರ ಪದಗಳು ಹೇಳುವುದನ್ನು ಒಂದು ಕಲಾಕೃತಿ ಹೇಳಬಲ್ಲದು. ಆಶಯ ವ್ಯಕ್ತಪಡಿಸುವಂತೆ ಚಿತ್ರ ರಚಿಸುವುದು ಸವಾಲಿನ ಕೆಲಸ ಎಂದರು.ಕಲೆ ಎಲ್ಲರಿಗೂ ಒಲಿಯುವುದಿಲ್ಲ. ತಪಸ್ವಿಗಳಿಗೆ, ಕಲಾಯೋಗಿಗಳಿಗೆ, ತ್ಯಾಗಿಗಳಿಗೆ ಮಾತ್ರ ಒಲಿಯುವಂಥದ್ದು. ಆರು ದಶಕಗಳಿಂದಲೂ ಮಿಗಿಲಾಗಿ ಕಲಾ ಸೇವೆಯಲ್ಲಿ ತೊಡಗಿರುವ ಎಲ್. ಶಿವಲಿಂಗಪ್ಪ ಅವರೊಬ್ಬ ಕಲಾತಪಸ್ವಿ ಎಂದು ಅವರು ಬಣ್ಣಿಸಿದರು.
ಶಿವಲಿಂಗಪ್ಪ ಅವರ ನಿಷ್ಠೆ, ಶರಣ ಸಾಹಿತ್ಯದ ಮೇಲಿನ ಒಲವು ಅಮೂರ್ತವಾದುದನ್ನು ಮೂರ್ತವಾಗಿಸಿದೆ ಎಂದು ಅವರು ಹೇಳಿದರು.
ವಚನ ಸಾಹಿತ್ಯ ವಿಶ್ವ ಸಾಹಿತ್ಯಪೀಠದ ಕಳಶವಿದ್ದಂತೆ. ಜನರ ನೋವು- ನಲಿವು, ಶೋಷಣೆಗಳನ್ನು ಆಧರಿಸಿ, ರಚಿತವಾಗಿರುವ ಮಾನವೀಯ ಸಾಹಿತ್ಯ. ಇವುಗಳಲ್ಲಿ ಆತ್ಮಕಲ್ಯಾಣವಿಲ್ಲ. ಶರಣರು ಜನರೊಂದಿಗೆ ಅನುಸಂಧಾನ ನಡೆಸಿ, ಸಾಮೂಹಿಕವಾಗಿ ರಚಿಸಿರುವ ಸಾಹಿತ್ಯ. ಇದರಿಂದಾಗಿಯೇ ಎಷ್ಟೇ ಶತಶತಮಾನಗಳು ಕಳೆದರೂ ವಚನ ಸಾಹಿತ್ಯ ಪ್ರಸ್ತುತವಾಗಿರುತ್ತದೆ ಎಂದು ಅವರು ಹೇಳಿದರು.ವಂಚನ ಸಾಹಿತ್ಯ ಮಾನವ ಸಂವಿಧಾನ ಇದ್ದಂತೆ. ಇದಕ್ಕೆ ತಿದ್ದುಪಡಿ ಸಾಧ್ಯವೇ ಇಲ್ಲ. ಹೀಗಾಗಿ ವಚನ ಸಾಹಿತ್ಯ ವಿಶೇಷವಾಗಿ ಯುವಕರನ್ನು ತಲುಪಬೇಕು ಎಂದರು.
ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಲಾಕೃತಿಗಳನ್ನು ಕುರಿತು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿದರು. ಶರಣ ಸಾಹಿತ್ಯ ಪರಿಷತ್ತು ನಗರಾಧ್ಯಕ್ಷ ಮ.ಗು. ಸದಾನಂದಯ್ಯ, ಜಿಲ್ಲಾಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ ವಿಶೇಷ ಆಹ್ವಾನಿತರಾಗಿದ್ದರು. ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶ್ರೀ ವಾತ್ಸಲ್ಯ ಬಿ.ಇಡಿ ಕಾಲೇಜಿನ ಉಪನ್ಯಾಸಕ ದಿಲೀಪ್ ನಿರೂಪಿಸಿದರು. ಮೈಸೂರು ಆರ್ಟ್ ಗ್ಯಾಲರಿ ಕಾರ್ಯದರ್ಶಿ ಜಮುನಾರಾಣಿ ಮಿರ್ಲೆ ವಂದಿಸಿದರು. ಚೂಡಾಮಣಿ ಪ್ರಾರ್ಥಿಸಿದರು.